FACT CHECK | ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ರೈಲಿಗೆ ಕಲ್ಲು ಎಸೆದಿದ್ದು ಮುಸ್ಲಿಮರೇ?
ಜನರು ರೈಲಿಗೆ ಕಲ್ಲಿನಲ್ಲಿ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರೈಲೊಂದು ರೈಲ್ವೆ ಸ್ಟೇಷನ್ನಲ್ಲಿ ನಿಂತಿರುವುದನ್ನು ಕಾಣಬಹುದು. ಆಗ ಕೆಲ ಜನರು ರೈಲಿಗೆ ಕಲ್ಲನ್ನು ಎಸೆಯುತ್ತಾರೆ. ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿಗೆ ಕಲ್ಲು ಎಸೆದ ಮುಸ್ಲಿಮರು ಎಂಬ ಹೇಳಿಕೆಯೊಂದಿಗೆ ಅನೇಕ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಜನವರಿ 28, 2025 ರಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ‘‘ಜನವರಿ 28 ರಂದು ಝಾನ್ಸಿಯಿಂದ ಪ್ರಯಾಗರಾಜ್ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಮರು’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು, ಗೂಗಲ್ನಲ್ಲಿ ‘ಝಾನ್ಸಿ-ಪ್ರಯಾಗ್ರಾಜ್-ಸ್ಪೆಷಲ್ ಟ್ರೈನ್-ಸ್ಟೋನ್’ ಎಂಬ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಜನವರಿ 28, 2025 ರಂದು, NDTV ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡ ಪ್ರಕಟಿಸಿದ ಸುದ್ದಿಯೊಂದು ಲಭ್ಯವಾಗಿದೆ.
NDTV ಜನವರಿ 28, 2025 ರಂದು ಒದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದಕ್ಕೆ ‘‘ಮಹಾಕುಂಭ ವಿಶೇಷ ರೈಲಿನ ಬಾಗಿಲುಗಳು ಲಾಕ್ ಆಗಿರುವುದನ್ನು ಕಂಡು ಪ್ರಯಾಣಿಕರು ಕಲ್ಲು ಎಸೆದಿದ್ದಾರೆ’’ ಎಂಬ ಶೀರ್ಷಿಕೆ ನೀಡಲಾಗಿದೆ.

ವರದಿಯ ಪ್ರಕಾರ, ‘‘ಝಾನ್ಸಿಯಿಂದ ಪ್ರಯರಾಜ್ಗೆ ತೆರಳುತ್ತಿದ್ದ ವಿಶೇಷ ರೈಲಿಗೆ ಹರ್ಪಾಲ್ಪುರ ನಿಲ್ದಾಣದಲ್ಲಿ ಅನೇಕ ಜನರು ಕಾಯುತ್ತಿದ್ದರು. ರೈಲು ಬಂದು ನಿಂತಾಗ ಬಾಗಿಲು ಲಾಕ್ ಆಗಿರುವುದನ್ನು ಕಂಡು ಕಲ್ಲು ತೂರಾಟ ನಡೆಸಲಾಯಿತು. ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ರೈಲಿಗಾಗಿ ಕಾದು ಕುಳಿತಿದ್ದರು. ಆದರೆ ರೈಲು ಹತ್ತಲು ಯತ್ನಿಸಿದಾಗ ಬಾಗಿಲು ಹಾಕಿರುವುದು ಕಂಡು ಬಂತು. ಆಕ್ರೋಶಗೊಂಡ ಪ್ರಯಾಣಿಕರು ಕಂಪಾರ್ಟ್ಮೆಂಟ್ಗಳ ಮೇಲೆ ಕಲ್ಲು ತೂರಾಟ ನಡೆಸಿದರು’’ ಎಂದು ಬರೆಯಲಾಗಿದೆ.
ಹಾಗೆಯೆ ಟೈಮ್ಸ್ ಆಫ್ ಇಂಡಿಯಾ ವರದಿ ಲಭ್ಯವಾಗಿದ್ದು, 28 ಜನವರಿ 2025 ರಂದು ‘‘ಮಧ್ಯಪ್ರದೇಶದಲ್ಲಿ ಮಹಾಕುಂಭಕ್ಕೆ ಕಿಕ್ಕಿರಿದು ಜನರನ್ನು ಸಾಗಿಸುತ್ತಿದ್ದ ರೈಲಿನ್ನು ಧ್ವಂಸಗೊಳಿಸಲಾಗಿದೆ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ‘‘ಅಂಬೇಡ್ಕರ್ ನಗರ-ಪ್ರಯಾಗ್ರಾಜ್ ಎಕ್ಸ್ಪ್ರೆಸ್ ರೈಲಿಗೆ ಪ್ರಯಾಗ್ರಾಜ್ಗೆ ತೆರಳಲು ಕಾದುಕುಳಿತಿದ್ದ ಸ್ಥಳೀಯ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ರೈಲಿನ ಬಾಗಿಲು ತೆರೆಯದ ಕಾರಣ ಆಕ್ರೋಶಗೊಂಡು ಹರ್ಪಾಲ್ಪುರ ಮತ್ತು ಛತ್ತರ್ಪುರ ರೈಲು ನಿಲ್ದಾಣಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಬೆಳಗಿನ ಜಾವ 1 ರಿಂದ 1.30ರ ನಡುವೆ ಈ ಘಟನೆ ನಡೆದಿದೆ. ಮಹಾಕುಂಭದಲ್ಲಿ ಪಾಲ್ಗೊಳ್ಳಲು ಪ್ಲಾಟ್ಫಾರ್ಮ್ನಲ್ಲಿ ಹೆಚ್ಚಿನ ಜನರು ಸೇರಿದ್ದರು. ಆದರೆ, ಪ್ರಯಾಗ್ರಾಜ್ಗೆ ತೆರಳುತ್ತಿದ್ದ ರೈಲು ಬರುವಾಗಲೇ ಕಿಕ್ಕಿರಿದು ತುಂಬಿತ್ತು. ಸ್ಥಳಾವಕಾಶದ ಕೊರತೆಯಿಂದ ರೈಲಿನೊಳಗಿದ್ದ ಪ್ರಯಾಣಿಕರು ಬಾಗಿಲು ತೆರೆಯದ ಕಾರಣ ಸ್ಥಳೀಯ ಪ್ರಯಾಣಿಕರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಹರ್ಪಾಲ್ಪುರ ಪೊಲೀಸ್ ಠಾಣೆಯ ಪ್ರಭಾರಿ ಪುಷ್ಪಕ್ ಶರ್ಮಾ ಹೇಳಿಕೆಯನ್ನು TOI ಪ್ರಕಟಿಸಿದ್ದು, “ಪ್ಲಾಟ್ಫಾರ್ಮ್ನಲ್ಲಿ 7,000-8,000 ಜನರಿದ್ದರು. ಬಂದ ರೈಲಿನಲ್ಲಿ ಆಗಲೇ ಕಿಕ್ಕಿರಿದು ತುಂಬಿತ್ತು. ರೈಲಿನ ಡೋರ್ ತೆಗೆಯದ ಕಾರಣ ಕೆಲವು ಪ್ರಯಾಣಿಕರು ಕಲ್ಲು ಎಸೆಯಲು ಪ್ರಾರಂಭಿಸಿದರು. ನಾವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಗುಂಪನ್ನು ಚದುರಿಸಲಾಗಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ಸುಮಾರು ಒಂದು ಗಂಟೆ ಬೇಕಾಯಿತು. ಅದರ ನಂತರ ರೈಲು ಸುರಕ್ಷಿತವಾಗಿ ಹೊರಟಿತು” ಎಂದು ಅವರು ಹೇಳಿದ್ದಾರೆ.
ಹರ್ಪಾಲ್ಪುರ ರೈಲ್ವೆ ನಿಲ್ದಾಣದಲ್ಲಿ ಮಹಾಕುಂಭದ ವಿಶೇಷ ರೈಲಿನ ಬಾಗಿಲುಗಳು ಲಾಕ್ ಆಗಿರುವುದನ್ನು ಕಂಡು ಪ್ರಯಾಣಿಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಇದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಓದಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಝಾನ್ಸಿಯಿಂದ ಪ್ರಯಾಗರಾಜ್ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭ ರೈಲಿನ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು . ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರಿಂದ ಪ್ಲಾಟ್ಫಾರ್ಮ್ಗೆ ರೈಲು ಬಂದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ರೊಚ್ಚಿಗೆದ್ದ ಕಾದು ಕುಳಿತಿದ್ದ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಇದಾಗಿದೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮೊನಾಲಿಸಾ ಕುಂಭಮೇಳಕ್ಕೆ ಮಾರುವೇಷದಲ್ಲಿ ಬಂದಿದ್ದ ಜಿಲ್ಲಾಧಿಕಾರಿ ಎಂಬುದು ಸುಳ್ಳು

