FACT CHECK | ಬಗ್ವಾಲ್ ಸಂಪ್ರದಾಯದ ಆಚರಣೆಯ ವಿಡಿಯೋವನ್ನು ಕುಂಭಮೇಳದಲ್ಲಿ ಭಕ್ತರು ಕಲ್ಲು ತೂರಾಟ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೆ
ಮಹಾ ಕುಂಭಮೇಳದಲ್ಲಿ ಕೇಸರಿ ನಿಲುವಂಗಿಯನ್ನು ಧರಿಸಿದ ಕೆಲವರು ಕಲ್ಲು ತೂರಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಮಹಾ ಕುಂಭಮೇಳದಲ್ಲಿ ಹಿಂದೂಗಳು ಕಲ್ಲುಗಳನ್ನು ತೂರಿದ್ದಾರೆ ಎಂದು ಪ್ರತಿಪಾದಿಸಿ ವೈರಲ್ ವಿಡಿಯೋವನ್ನುಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮಹಾ ಕುಂಭಮೇಳದಲ್ಲಿ ಹಿಂದೂಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಘಟನೆಯ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ಆದ್ದರಿಂದ ವೈರಲ್ ವಿಡಿಯೋದ ಕೀಫ್ರೇಮ್ಗಳನ್ನುಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 2024ರಲ್ಲಿ ಪ್ರಕಟವಾದ ಹಲವಾರು ವಿಡಿಯೋಗಳು ಲಭ್ಯವಾಗಿವೆ. ಇವೆಲ್ಲವೂ ಈ ಕಾರ್ಯಕ್ರಮವನ್ನು ದೇವಿಧುರ ಬಗ್ವಾಲ್ ಮೇಳ ಎಂದು ಗುರುತಿಸಿವೆ.

ವೈರಲ್ ವಿಡಿಯೋಗೆ ಸಂಬಂಧಿಸಿದ ಕೀವರ್ಡ್ಗಳನ್ನು ಬಳಸಿ ಸರ್ಚ್ ಮಾಡಿದಾಗ, 2024ರ ಬಾಗ್ವಾಲ್ ಜಾತ್ರೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವ ವರದಿಗಳು ಲಭ್ಯವಾಗಿವೆ. ಉತ್ತರಾಖಂಡದ ದೇವಿಧುರಾದಲ್ಲಿ ನಡೆದ ಪ್ರಸಿದ್ಧ ಮೇಳವನ್ನು ಕೇಂದ್ರ ರಾಜ್ಯ ಸಚಿವ ಅಜಯ್ ತಮ್ತಾ ಉದ್ಘಾಟಿಸಿದ್ದರು. ಉದ್ಘಾಟನಾ ಸಮಾರಂಭವು ದೇವಿಧುರ ಬಾಗವಾಲ್ ಮೇಳದ ಶ್ರೀಮಂತ ಇತಿಹಾಸ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ಇದು ಧಾರ್ಮಿಕ ಕಲ್ಲು ತೂರಾಟದ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ.

ಈ ಸಂಪ್ರದಾಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು, ಉತ್ತರಾಖಂಡದ ಪ್ರವಾಸೋದ್ಯಮ ಸಚಿವಾಲಯದ ವೆಬ್ಸೈಟ್ನಲ್ಲಿ ಸರ್ಚ್ ಮಾಡಿದಗ, ಅದು ದೇವಿಧುರ ಬಗ್ವಾಲ್ ಜಾತ್ರೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದೆ. ಚಂಪಾವತ್ ಜಿಲ್ಲೆಯಲ್ಲಿ ವಾರ್ಷಿಕವಾಗಿ ರಕ್ಷಾ ಬಂಧನದ ಸಮಯದಲ್ಲಿ ಆಯೋಜಿಸಲಾಗುವ ಈ ವಿಶಿಷ್ಟ ಕಾರ್ಯಕ್ರಮವು ಬರಾಹಿ ದೇವಿಯ ದೇವಿಧುರ ದೇವಸ್ಥಾನದಲ್ಲಿ ನಡೆಯುತ್ತದೆ. ಈ ಹಬ್ಬವು ನಾಲ್ಕು ಪಂಗಡಗಳಿಂದ (ಖಾಮ್) ಕಲ್ಲು ತೂರಾಡುವ ಆಚರಣೆಯನ್ನು ಒಳಗೊಂಡಿದೆ. ಇದು ಪುರಾಣಗಳಲ್ಲಿ ಬೇರೂರಿದೆ ಮತ್ತು ದೇವತೆಗೆ ಅರ್ಪಿತವಾದ ಪ್ರಾಚೀನ ಮಾನವ ಬಲಿದಾನ ಪದ್ಧತಿಯನ್ನು ಸೂಚಿಸುತ್ತದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಫರಾ ಎಂದು ಕರೆಯಲ್ಪಡುವ ಸಮಾರಂಭದಲ್ಲಿ ಭಾಗವಹಿಸುವವರು ರಕ್ಷಣೆಗಾಗಿ ಮರದ ಗುರಾಣಿಗಳನ್ನು ಬಳಸುತ್ತಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೇವಸ್ಥಾನದ ಆವರಣದಲ್ಲಿ ಹಿಂದೂಗಳು ಕಲ್ಲು ತೂರಾಡಿರುವ 2024ರ ಹಳೆಯ ಘಟನೆ ಉತ್ತರಾಖಂಡದಲ್ಲಿ ಸಂಪ್ರದಾಯದ ಭಾಗವಾಗಿ ನಡೆದಿದೆ.ಇದುಕ್ಕೂ ಕುಂಭ ಮೇಳಕ್ಕೂ ಸಂಬಂಧವಿಲ್ಲ.ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ರೈಲಿಗೆ ಕಲ್ಲು ಎಸೆದಿದ್ದು ಮುಸ್ಲಿಮರೇ?

