FACT CHECK | ಹೊಸ ರೀತಿಯಲ್ಲಿ ಅಂಬಾಸಿಡರ್ ಕಾರು ಮತ್ತೆ ಮಾರುಕಟ್ಟೆ ಪ್ರವೇಶಿಸಿದೆಯೇ?

ಹೊಸ ಅವತಾರದಲ್ಲಿ ಅಂಬಾಸಿಡರ್‌ ಕಾರು ಬರಲಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು. ಇದರ ಜೊತೆ ಆಕರ್ಷಕ ಕಾರಿನ ಚಿತ್ರವೂ ವೈರಲ್‌ ಆಗಿದೆ. ಒಂದು ಕಾಲದಲ್ಲಿ ಭಾರತದ ರಸ್ತೆಗಳನ್ನು ಆಳಿದ್ದ ಕಾರು ಅಂದರೆ ಅದು ಅಂಬಾಸಿಡರ್‌. ಅಂದು ಅಂಬಾಸಿಡರ್‌ ಇದೆ ಅಂದರೆ ಅದು ಗತ್ತು, ಶ್ರೀಮಂತಿಕೆಯ ಸಂಕೇತವಾಗಿತ್ತು. ಆದರೆ ಹೊಸ ಕಾರುಗಳು ಬಂದಂತೆ ಅಂಬಾಸಿಡರ್‌ ಆಕರ್ಷಣೆ ಕಳೆದುಕೊಂಡಿತ್ತು. ವರ್ಷದಿಂದ ವರ್ಷಕ್ಕೆ ಮಾರಾಟವೂ ಇಳಿಕೆ ಕಂಡಿತ್ತು. ಕೊನೆಗೆ ಕಂಪನಿ 2014ರಲ್ಲಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು.

 

‘Kannada information’ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಒಂದನ್ನು ಹಾಕಲಾಗಿದೆ. ಇದರಲ್ಲಿ ಹಳೆಯ ಅಂಬಾಸಿಡರ್‌ ಕಾರಿನ ಚಿತ್ರ ಹಾಗೂ ಹೊಸ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. “ಚಿತ್ರದ ಮೇಲೆ, ವಿದೇಶಿ ಕಂಪನಿಗಳು ಬಾಗಿಲು ಹಾಕುವ ಸಮಯ ಬಂದೇ ಬಿಡ್ತು, ನಮ್ಮ ಅಂಬಾಸಿಡರ್‌ ಕಾರು ಹೊಸ ಡಿಸೈನ್‌ನಲ್ಲಿ ಬರುತ್ತಿದೆ. ಇನ್ಮೇಲಿಂದ ರೋಡಲ್ಲಿ ನಮ್ದೆ ಹವಾ,” ಎಂದು ಬರೆಯಲಾಗಿದೆ. ಈ ಪೋಸ್ಟ್‌ಗೆ 5 ಸಾವಿರ ಲೈಕ್‌ ಬಂದಿದ್ದು, 71 ಕಮೆಂಟ್‌ಗಳು ಬಂದಿವೆ. 168 ಜನರು ಇದನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅಂಬಾಸಿಡರ್‌ ಕಾರು ಹೊಸ ಅವತಾರದಲ್ಲಿ ಬರುತ್ತಿರುವುದು ನಿಜವೇ ಎಂದು ಪರಿಶೀಲಿಸಲು ವೈರಲ್ ಪೋಸ್ಟ್‌ನಲ್ಲಿರುವ ಕಾರಿನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ‘ಆಸ್ಟನ್‌ ಮಾರ್ಟಿಲ್‌ ಲಗೊಂಡಾ’ ಕಾರು ಎಂದು ತಿಳಿದು ಬಂತು. ಚಿತ್ರದಲ್ಲಿರುವ ಕಾರಿನ ನಂಬರ್‌ ಪ್ಲೇಟ್‌ ಜಾಗದಲ್ಲೂ ಲಗೊಂಡಾ ಹೆಸರು ಇರುವುದನ್ನು ಕಾಣಬಹುದು. ಅಲ್ಲದೆ, ಕಂಪನಿ ಲೋಗೋ ಕೂಡ ಕಾರಿನ ಮೇಲಿರುವುದು ಇದನ್ನು ಮತ್ತಷ್ಟು ದೃಢಪಡಿಸುತ್ತದೆ. ಇದು ಕಾನ್ಸೆಪ್ಟ್‌ ಕಾರು ಆಗಿದ್ದು, ಆಸ್ಟನ್‌ ಮಾರ್ಟಿನ್‌ನ ಅಧಿಕೃತ ವೆಬ್‌ಸೈಟ್‌ನಲ್ಲೇ ಇದರ ಚಿತ್ರವನ್ನು ನೋಡಬಹುದಾಗಿದೆ.

ಆಸ್ಟನ್‌ ಮಾರ್ಟಿನ್‌ ಕಾರು 
ಆಸ್ಟನ್‌ ಮಾರ್ಟಿನ್‌ ಕಾರು 

ಇನ್ನು ಅಂಬಾಸಿಡರ್‌ ಕಾರು ಮತ್ತೆ ಬಿಡುಗಡೆಯಾಗಲಿದೆಯೇ ಎಂಬುದನ್ನು ತಿಳಿಯಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಈ ಬಗೆಗಿನ ಇತ್ತೀಚಿನ ಯಾವ ಸುದ್ದಿಯೂ ಲಭ್ಯವಾಗಿಲ್ಲ.

ಕೊನೆಯದಾಗಿ 2022ರಲ್ಲಿ, ‘ಅಂಬಾಸಿಡರ್ ಕಾರು ಪುನರಾಗಮನಕ್ಕೆ ಸಿದ್ಧವಾಗಿದೆ. ಹಿಂದೂಸ್ತಾನ್ ಮೋಟಾರ್ಸ್ ಬೆಳವಣಿಗೆಯನ್ನು ಖಚಿತಪಡಿಸಿದೆ’ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು. ಇದರಲ್ಲಿ, ‘ಹೊಸ ಎಂಜಿನ್‌ಗಾಗಿ ಯಾಂತ್ರಿಕ ಮತ್ತು ವಿನ್ಯಾಸದ ಕೆಲಸವು ಮುಂದುವರಿದ ಹಂತವನ್ನು ತಲುಪಿದೆ’ ಎಂದು ಅಂಬಾಸಿಡರ್‌ ಕಾರನ್ನು ತಯಾರಿಸುತ್ತಿದ್ದ ಹಿಂದೂಸ್ಥಾನ್‌ ಮೋಟಾರ್ಸ್‌ನ ನಿರ್ದೇಶಕರು ಹೇಳಿದ್ದರು.

ಆದರೆ, ಮುಂದೆ ಇದು ಯಾವ ಹಂತ ತಲುಪಿದೆ ಎಂಬ ವಿವರ ಸದ್ಯಕ್ಕೆ ಇಲ್ಲ. ಈ ಬಗ್ಗೆ ಕಂಪನಿಯೂ ಯಾವ ಮಾಹಿತಿಯನ್ನೂ ನೀಡಿಲ್ಲ. ಹಿಂದೂಸ್ಥಾನ್‌ ಮೋಟಾರ್ಸ್‌ನ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಯಾವ ವಿವರಗಳೂ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ಅವತಾರದಲ್ಲಿ ಅಂಬಾಸಿಡರ್‌ ಕಾರು ಬರಲಿದೆ ಎಂಬ ಪೋಸ್ಟ್‌ ನಕಲಿ ಪೋಸ್ಟ್‌ ಆಗಿದೆ. ವೈರಲ್ ಚಿತ್ರದಲ್ಲಿ ಇರುವ ಕಾರು ಅಂಬಾಸಿಡರ್‌ ಕಾರು ಅಲ್ಲ ಎಂದು ದೃಢಪಟ್ಟಿದೆ. ಆದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟ್‌ ಹಾದಿ ತಪ್ಪಿಸುವ ಪೋಸ್ಟ್‌ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹೈದರಾಬಾದ್‌ನಲ್ಲಿ ಮೆಟ್ರೋ ಕಂಬಗಳ ಮೇಲೆ 420 ಸರ್ಕಾರ ಎಂಬ ಜಾಹೀರಾತು ಫಲಗಳನ್ನು ಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights