FACT CHECK | ನಟಿ ರಶ್ಮಿಕಾ ಮಂದಣ್ಣ ಆರೋಗ್ಯ ಪರಿಸ್ಥಿತಿ ಚಿಂತಾಜನಕ ಎಂಬ ಪೋಸ್ಟ್ನ ಅಸಲೀಯತ್ತೇನು ಗೊತ್ತೇ?
ನಟಿ ರಶ್ಮಿಕಾ ಮಂದಣ್ಣ ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 30, 2025 ರಂದು ಈ ಫೋಟೋ ಹಂಚಿಕೊಂಡಿದ್ದು, ‘‘ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಏನಾಯಿತು. ಇವರನ್ನ ಹೀಗಂತೂ ನೋಡೊಕೆ ಆಗಲ್ಲ. ಇವರ ಸ್ಥಿತಿಗೆ ಕಾರಣ ಏನು’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿಸಲು, ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ರಶ್ಮಿಕಾ ಮಂದಣ್ಣ ಅವರ ಅನಾರೋಗ್ಯದ ಬಗ್ಗೆ ಸುದ್ದಿಗಳ ಕುರಿತು ಸರ್ಚ್ ಮಾಡಿದಾಗ, ಆಗ ಅವರು ವಾಕರ್ ಸಹಾಯದಿಂದ ನಡೆಯುವ ವಿಡಿಯೋದೊಂದಿಗೆ ಕೆಲವು ಲೇಖನಗಳು ಲಭ್ಯವಾಗಿವೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ರಶ್ಮಿಕಾ ಜಿಮ್ ಮಾಡುವಾಗ ಕಾಲಿಗೆ ಗಾಯ ಮಾಡಿಕೊಂಡರು.

ಇದೇ ವೇಳೆ ಝೂಮ್ ಟಿವಿ ಜನವರಿ 27, 2025 ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ ವಿಡಿಯೋದಲ್ಲಿ ರಶ್ಮಿಕಾ ‘ಚಾವಾ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ಪ್ರಕಟಿಸಿದೆ. ಈ ವೀಡಿಯೊದಲ್ಲಿ ನೀಡಿರುವ ವಿವರಣೆಯ ಪ್ರಕಾರ, ‘‘ರಶ್ಮಿಕಾ ಮಂದಣ್ಣ ಕಾಲಿನ ಗಾಯದ ನಡುವೆಯೂ ಕುಂಟುತ್ತಾ ಚಾವಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು. ರಶ್ಮಿಕಾ ಅವರ ಮೂಳೆ ಮುರಿದಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’’ ಎಂದು ಝೂಮ್ ಬರೆದುಕೊಂಡಿದೆ.
ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿದ್ದು ಅವರು ಆಸ್ಪತ್ರೆ ಸೇರುವ ಮಟ್ಟಕ್ಕೆ ಏನೂ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ವೈರಲ್ ಫೋಟೋದಲ್ಲಿ ಇರುವಂತೆ ರಶ್ಮಿಕಾ ಆಸ್ಪತ್ರೆಯಲ್ಲಿ ಇರುತ್ತಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ ಅಂತಹ ಯಾವುದೇ ವಿಶ್ವಾಸರ್ಹ ಮಾಧ್ಯಮ ವರದಿಯನ್ನು ಕಂಡುಬಂದಿಲ್ಲ.
ವೈರಲ್ ಫೋಟೋದಲ್ಲಿರುವ ರಶ್ಮಿಕಾ ಅವರ ಫೋಟೊವನ್ನ್ನುನು ಗೂಗಲ್ನಲ್ಲಿ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಫೋಟೋಕ್ಕೆ ಹೋಲಿಕೆಯಾಗುವ ಸುದ್ದಿಯೊಂದನ್ನು ಯಾಹೂನಲ್ಲಿ ಲಭ್ಯವಾಗಿದೆ. 12 ಜನವರಿ 2025 ರಂದು ಪ್ರಕಟವಾದ ಲೇಖನದ ಪ್ರಕಾರ, ‘‘ಮೆದುಳಿನ ಗೆಡ್ಡೆಯಿಂದ ಬಳಲುತ್ತಿರುವ ಬಿಬಿಸಿ ಟಿವಿ ನಿರೂಪಕಿ ನಿಕಿ ಚಾಪ್ಮನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈ ಲೇಖನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ’’ ಎಂಬ ಮಾಹಿತಿ ಲಭ್ಯವಾಗಿದೆ.
ನಿಕಿ ಚಾಪ್ಮನ್ ಅವರ ಫೇಸ್ಬುಕ್ ಖಾತೆಯಲ್ಲಿ ಜನವರಿ 9, 2025 ರಂದು ಹಂಚಿಕೊಂಡು ಪೋಸ್ಟ್ ಲಭ್ಯವಾಗಿದ್ದು ಇದರಲ್ಲಿ ನಮಗೆ ನೈಜ ಫೋಟೊ ಕಂಡುಬಂದಿದೆ. ಈ ಮೂಲಕ ಚಾಪ್ಮನ್ ಮುಖವನ್ನು ವೈರಲ್ ಆಗುತ್ತಿರುವ ರಶ್ಮಿಕಾ ಮಂದಣ್ಣ ಅವರ ಮುಖದೊಂದಿಗೆ ಬದಲಾಯಿಸಲಾಗಿದೆ. ಮೆದುಳಿನ ಗೆಡ್ಡೆಯ ನಂತರ ಕ್ರೇನಿಯೊಟಮಿಯಿಂದ ಚೇತರಿಸಿಕೊಳ್ಳುತ್ತಿರುವುದು, ಗೆಡ್ಡೆಯನ್ನು 5 ವರ್ಷಗಳ ಹಿಂದೆ ಯಶಸ್ವಿಯಾಗಿ ತೆಗೆದುಹಾಕಲಾಯಿತು ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದ 2019 ರ ಸುದ್ದಿ ವರದಿಯನ್ನು ನೀವು ಇಲ್ಲಿ ನೋಡಬಹುದು. ಇದರಲ್ಲಿ ಈ ಫೋಟೋವನ್ನು ಒಳಗೊಂಡಿವೆ. ಈ ಫೋಟೋವನ್ನು ರಶ್ಮಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತೆ ಎಡಿಟ್ ಮಾಡಲಾಗಿದೆ.

ಇದಲ್ಲದೆ, ವೈರಲ್ ಪೋಸ್ಟ್ನಲ್ಲಿ ಅಲ್ಲು ಅರ್ಜುನ್, ಮಹೇಶ್ ಬಾಬು ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳನ್ನು ಕೂಡ ಕಾಣಬಹುದು. ಈ ಫೋಟೋ ತೆಲುಗು ಹಿರಿಯ ನಟ-ಚಲನಚಿತ್ರ ನಿರ್ಮಾಪಕ, ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ತೆಗೆದಿದ್ದಾಗಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿದೆಯಷ್ಟೆ. ಆದರೆ, ವೈರಲ್ ಪೋಸ್ಟ್ನಲ್ಲಿ ಹೇಳಿರುವಂತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬುದು ಸುಳ್ಳು ಮತ್ತು ಈ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತೆ, ನಿಕಿ ಚಾಪ್ಮನ್ ಮೂಲ ಚಿತ್ರವನ್ನು ರಶ್ಮಿಕಾ ಮಂದಣ್ಣ ಅವರ ಮುಖದೊಂದಿಗೆ ಬದಲಾಯಿಸಿ ಎಡಿಟ್ ಮಾಡಲಾಗಿದೆ. ಹಾಗಾಗಿ ನಟಿ ರಶ್ಮಿಕಾ ಮಂದಣ್ಣ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 1954ರ ಮಹಾ ಕುಂಭಮೇಳದಲ್ಲಿ ನೆಹರು ಪವಿತ್ರ ಸ್ನಾನ ಮಾಡಿದ್ದರು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

