FACT CHECK | ಹಿಂದೂ ಹುಡುಗಿಯನ್ನು ಚುಡಾಯಿಸಿ ಪೊಲೀಸರ ಅತಿಥಿಯಾದ ವ್ಯಕ್ತಿ ಮುಸ್ಲಿಮನಲ್ಲ ಮತ್ತ್ಯಾರು?

ವ್ಯಕ್ತಿಯೊಬ್ಬ ಯುವತಿಯನ್ನು ಕೈ ಸನ್ನೆ ಮಾಡಿಕೊಂಡು ಜೋರಾಗಿ ಮಾತಾಡುತ್ತಿರುವ ಸಂದರ್ಭದಲ್ಲಿ ಯುವತಿ ಅಲ್ಲಿಂದ ಓಡಿ ಹೋಗುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ವಿಡಿಯೋದಲ್ಲಿ ಅದೇ ವ್ಯಕ್ತಿ ಪೊಲೀಸ್ ಜೀಪಿನಿಂದ ಇಳಿದು ಪೊಲೀಸರ ಸಹಾಯದಿಂದ ಕುಂಟುತ್ತಾ ನಡೆಯುತ್ತಿರುವುದು ಕಾಣಬಹುದು. ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಗೆ ಮುಸ್ಲಿಂ ಹುಡುಗನಿಂದ ಕಿರುಕುಳ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಫೆಬ್ರವರಿ 6, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಹಿಂದೂ ಹುಡುಗಿಯ ಹಿಂದೆ ಬಿದ್ದಿದ್ದ ಮುಸ್ಲಿಂ ಸಮುದಾಯದ ಹುಡುಗನ ಪರಿಸ್ಥಿತಿ ನೋಡಿ. ಲೋ ಅಲ್ಲಿರೋದು ಯೋಗಿಜೀ ಕಣ್ರೋ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಫೆಬ್ರವರಿ 6, 2025 ರಂದು ಉತ್ತರ ಪ್ರದೇಶದ ಸ್ಥಳೀಯ ಮಾಧ್ಯಮ ರಾಯಲ್ ಬುಲೆಟಿನ್‌ ವೆಬ್‌ಸೈಟ್‌ ಇದೇ ವೈರಲ್ ವೀಡಿಯೊವನ್ನು ಉತ್ತಮ ಕ್ವಾಲಿಟಿಯಲ್ಲಿ ಹಂಚಿಕೊಂಡಿರುವುದು ಲಭ್ಯವಾಗಿದೆ. ಇದಕ್ಕೆ ‘‘ಮುಜಫರ್ ನಗರದ ನಯಿ ಮಂಡಿಯಲ್ಲಿ, ಯುವಕನೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆ ಯುವಕನಿಗೆ ಚಿಕಿತ್ಸೆ ನೀಡಿದರು!’’ ಎಂಬ ಶೀರ್ಷಿಕೆ ನೀಡಲಾಗಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮುಜಫರ್‌ ನಗರದ ನಯಿ ಮಂಡಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಸಾರ್ವಜನಿಕವಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದುಷ್ಕರ್ಮಿಯೊಬ್ಬ ಬಾಲಕಿಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಮತ್ತು ಬಾಲಕಿ ಅಲ್ಲಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ವೀಡಿಯೊ ವೈರಲ್ ಆದ ನಂತರ, ನಯಿ ಮಂಡಿ ಪೊಲೀಸ್ ಠಾಣೆ ತಕ್ಷಣ ಜಾಗೃತಗೊಂಡು ಆರೋಪಿಯನ್ನು ಬಂಧಿಸಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಹೆಸರನ್ನು ವಿಲಾಯತ್ ನಗರ ಪೊಲೀಸ್ ಠಾಣೆ ಭೋಪಾ ನಿವಾಸಿ ಸಮಯ್ ಸಿಂಗ್ ಅವರ ಮಗ ರೋಹಿತ್ ಎಂದು ಹೇಳಿಕೊಂಡಿದ್ದಾನೆ’’ ಎಂದು ಬರೆಯಲಾಗಿದೆ.

ತನಿಖೆಯ ಸಮಯದಲ್ಲಿ, ಮುಜಫರ್‌ ನಗರದ ಪೊಲೀಸರು ಫೆಬ್ರವರಿ 6, 2025 ರಂದು ಮಾಡಿದ ಎಕ್ಸ್ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್‌ನಲ್ಲಿ ನ್ಯೂ ಮಂಡಿ ಸಿಒ ರೂಪಾಲಿ ರಾವ್ ಅವರ ಹೇಳಿಕೆ ಇದೆ. ‘‘ವಿಡಿಯೋದಲ್ಲಿ ಕಾಣುವ ಹುಡುಗಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಾಳೆ ಮತ್ತು ಅವಳು ಊಟ ಮಾಡಲು ಹೊರಗೆ ಹೋದಾಗ, ರೋಹಿತ್ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ಬಲವಂತವಾಗಿ ಮಾತನಾಡಲು ಪ್ರಯತ್ನಿಸಿದ್ದಾನೆ. ಹೇಗೋ ಹುಡುಗಿ ಅವನಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇಡೀ ಘಟನೆಯ ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ರೋಹಿತ್‌ನನ್ನು ಬಂಧಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

ಅಂತೆಯೆ ಫೆಬ್ರವರಿ 6, 2025 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ ವೈರಲ್ ಆದ ವೀಡಿಯೊ ಕೂಡ ಇದೆ. ‘‘ನಯಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡಿ ಗಲಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ರೋಹಿತ್ ಎಂಬ ಯುವಕ ಸಾರ್ವಜನಿಕವಾಗಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಾಗ, ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿ, ಆರೋಪಿ ಯುವಕ ರೋಹಿತ್‌ನನ್ನು ತಕ್ಷಣವೇ ಬಂಧಿಸಿ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ’’ ಎಂದು ಬರೆಯಲಾಗಿದೆ.

ತನಿಖೆಯ ಸಮಯದಲ್ಲಿ ನಾವು ನಯಿ ಮಂಡಿ ಪೊಲೀಸ್ ಠಾಣೆಗೆ ಕರೆ ಮಾಡಿ ಈ ಪ್ರಕರಣದ ಕುರಿತು ವಿಚಾರಿಸಿದ್ದೇವೆ. ಅವರು ಈ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ. ಆರೋಪಿ ರೋಹಿತ್​ನ ತಂದೆಯ ಹೆಸರು ಸಮಯ್ ಸಿಂಗ್, ಈ ಪ್ರಕರಣದಲ್ಲಿ ಭಾಗಿಯಾದರವರೆಲ್ಲ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ. ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಗೆ ಮುಸ್ಲಿಂ ಹುಡುಗ ಕಿರುಕುಳ ನೀಡಿದ್ದಾನೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಮುಜಫರ್‌ ನಗರದ ನಯಿ ಮಂಡಿ ಪ್ರದೇಶದಲ್ಲಿ ಬಾಲಕಿಯೊಬ್ಬಳಿಗೆ ರಸ್ತೆಯಲ್ಲಿ ಕಿರುಕುಳ ನೀಡಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂದು ಸುಳ್ಳು ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆಯ ಆರೋಪಿಯ ಹೆಸರು ರೋಹಿತ್ ಮತ್ತು ಆತ ಮುಸ್ಲಿಂ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಮೀಟರ್ 

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಮೆರಿಕದಿಂದ ಅಕ್ರಮ ವಲಸಿಗರನ್ನು ಗಡೀಪಾರು ಮಾಡಿದ ಈ ಚಿತ್ರ ಭಾರತೀಯರಿಗೆ ಸಂಬಂಧಿಸಿದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights