FACT CHECK | ದೆಹಲಿಯಲ್ಲಿ BJP ಗೆದ್ದ ನಂತರ ಯಮುನ ಆರತಿ ಆರಂಭಿಸಲಾಗಿದೆ ಎಂಬುದು ಸುಳ್ಳು
2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ( BJP ), ಆಮ್ ಆದ್ಮಿ ಪಕ್ಷವನ್ನು ಸೋಲಿಸಿ, 27 ವರ್ಷಗಳ ನಂತರ ರಾಜಧಾನಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ದೆಹಲಿಯಲ್ಲಿ BJP ಜಯಗಳಿಸಿದ ಬೆನ್ನಲ್ಲೆ ರಾಜಧಾನಿಯ ಘಾಟ್‌ಗಳಲ್ಲಿ ಮೊದಲ ಬಾರಿಗೆ ಯಮುನಾ ಆರತಿಯನ್ನು ಬೆಳಗಲಾಗುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಕ್ಲಿಪ್ ಅನ್ನು ಹಂಚಿಕೊಂಡ ಫೇಸ್‌ಬುಕ್ ಬಳಕೆದಾರರು, “ಇಂದು ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಆರತಿ ಬೆಳಗಲಾಗುತ್ತಿದೆ. ದೆಹಲಿಯ ನಿವಾಸಿಗಳು ಯಮುನಾ ಆರತಿಗೆ ಈಗ ನಿಜವಾದ ಅರ್ಥ ಬಂದಿದೆ. ದೆಹಲಿ ಶೀಘ್ರದಲ್ಲೇ ಇಂದ್ರಪ್ರಸ್ಥವಾಗಲಿದೆ” ಎಂದು ಬರೆದಿದ್ದಾರೆ. ಈ ವೀಡಿಯೊವನ್ನು ಅನೇಕ ಯೂಟ್ಯೂಬ್ ಚಾನೆಲ್‌ಗಳು ಸಹ ವ್ಯಾಪಕವಾಗಿ ಹಂಚಿಕೊಂಡಿವೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೆ ಈ ರೀತಿ ಯಮುನಾ ಆರತಿ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ಯಮುನ ಆರತಿ ಎಂಬ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ನರವೇರಿಸಿರುವ ಕುರಿತು ಹಲವು ಸುದ್ದಿ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ಪ್ರತಿ ಭಾನುವಾರ ಮತ್ತು ಮಂಗಳವಾರ ಅಲ್ಲಿ ಆರತಿಯನ್ನು ಮಾಡಲಾಗುತ್ತದೆ.
ಹಲವು ವೀಡಿಯೊಗಳು ಮತ್ತು ಸುದ್ದಿ ವರದಿಗಳಲ್ಲಿ, ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಕ್ಲಿಪ್‌ನೊಂದಿಗೆ ಹೋಲಿಕೆಯನ್ನು ಕೆಳಗೆ ನೋಡಬಹುದು.

ಸುದ್ದಿ ವರದಿಗಳ ಪ್ರಕಾರ, ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಉಪಸ್ಥಿತಿಯಲ್ಲಿ ವಾಸುದೇವ್ ಘಾಟ್ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿದೆ. ವಾಸುದೇವ್ ಘಾಟ್ ಅನ್ನು ಮಾರ್ಚ್ 12, 2024 ರಂದು ಉದ್ಘಾಟಿಸಲಾಯಿತು. 2015 ರಲ್ಲಿ ಆಗಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೊದಲ ಯಮುನಾ ಆರತಿಯನ್ನು ಮಾಡಿದ್ದರು ಎಂದು ಸುದ್ದಿ ವರದಿಗಳು ಉಲ್ಲೇಖಿಸಿವೆ.
ಈ ಎಲ್ಲಾ ಆಧಾರಗಳಿಂದ, ಬಿಜೆಪಿಯ ಗೆಲುವಿನ ನಂತರ ದೆಹಲಿಯಲ್ಲಿ ಮೊದಲ ಬಾರಿಗೆ ಯಮುನಾ ಆರತಿಯನ್ನು ನೀಡಲಾಗುತ್ತಿದೆ ಎಂಬ ಹೇಳಿಕೆಗಳು ದಾರಿತಪ್ಪಿಸುವಂತಿವೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯಲ್ಲಿ BJP ಗೆದ್ದ ನಂತರ ಯಮುನ ಆರತಿ ಆರಂಭಿಸಲಾಗಿದೆ ಎಂಬುದು ಸುಳ್ಳು. ಮೊದಲಿನಿಂದಲೂ ಯಮುನ ಆರತಿಯನ್ನು ಮಾಡುತ್ತಾ ಬರಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾಕುಂಭ ಮೇಳದಿಂದ ಹಿಂತಿರುಗುತ್ತಿದ್ದ ಹಿಂದೂಗಳಿದ್ದ ರೈಲಿನ ಮೇಲೆ ಮುಸ್ಲಿಮರು ದಾಳಿ ಮಾಡಿದ್ರಾ?

