FACT CHECK | ಮಲ್ಲಿಕಾರ್ಜುನ ಖರ್ಗೆಯವರ ಇಫ್ತಾರ್ ಕೂಟದ ಹಳೆಯ ಫೋಟೊವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮುಗಿದ ನಂತರ ರಂಜಾನ್ ತಿಂಗಳು ಪ್ರಾರಂಭವಾಗಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಚಿತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೆಲವರ ಜತೆ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ.  ಈ ಚಿತ್ರವನ್ನು ಹಂಚಿಕೊಂಡಿರುವ @ModiTheGuardian ಎಂಬ ಎಕ್ಸ್‌ ಬಳಕೆದಾರರು ಗಂಗಾ ಸ್ನಾನದಿಂದ ಬಡತನ ದೂರವಾಗುವುದಿಲ್ಲ ಎಂದು ಹೇಳುತ್ತಿದ್ದ ಖರ್ಗೆ ರೋಜಾ ಮಾಡಿ ಬಡತನ ನಿರ್ಮೂಲನೆ ಮಾಡಲಿದ್ದಾರೆ ಎಂಬ ವ್ಯಂಗ್ಯ ಭರಿತ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ಫೊಟೊವನ್ನು ಹಂಚಿಕೊಂಡಿರುವ, @SunnyPal111 ಎಂಬ ಎಕ್ಸ್‌ ಬಳಕೆದಾರ “ರೋಜಾದಲ್ಲಿ ಇಫ್ತಾರ್ ತಿನ್ನುವುದರಿಂದ ಬಡತನ ಕಡಿಮೆಯಾಗುತ್ತದೆಯೇ, ಖರ್ಗೆ ಜೀ? ಎಂದು ಪ್ರಶ್ನಿಸಿದ್ದಾರೆ.

ಕುಂಭಮೇಳದಲ್ಲಿ ಪವಿತ್ರ ಸ್ನಾನದ ಬಗ್ಗೆ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ರಂಜಾನ್ ಆರಂಭವಾದ ನಂತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯಂತೆ ಮಲ್ಲಿಕಾರ್ಜುನ ಖರ್ಗೆ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿರುವುದು ನಿಜವೇ  ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ಪೋಟೋವನ್ನು ಗೂಗಲ್ ರಿವರ್ಸ್ ಇಏಜಸ್‌ನಲ್ಲಿ ಸರ್ಚ್ ಮಾಡಿದಾಗ, ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಫೋಟೊವೊಂದು ಲಭ್ಯವಾಗಿದೆ. ಅದರ ಪ್ರಕಾರ 2006 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಇಫ್ತಾರ್ ಕೂಟಕ್ಕೆ ಹೋಗಿದ್ದ ಚಿತ್ರ ವೈರಲ್ ಆಗಿದೆ.

Mallikarjuna Kharge Photos

“ಅಕ್ಟೋಬರ್ 23, 2006 ರಂದು ಬೆಂಗಳೂರಿನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಕೆಪಿಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ (ಬಲ) ಇತರ ನಾಯಕರೊಂದಿಗೆ” ಎಂದು ಶೀರ್ಷಿಕೆ ಬರೆಯಲಾಗಿದೆ.

ಖರ್ಗೆ ಇತ್ತೀಚೆಗೆ ಭಾಗವಹಿಸಿದ್ದ ಇಫ್ತಾರ್ ಕೂಟಗಳ ಬಗ್ಗೆ ನಾವು ಮಾಹಿತಿಯನ್ನು ಹುಡುಕಿದೆವು. ಆದರೆ 2025 ಅಥವಾ 2024 ರಲ್ಲಿ ಅಂತಹ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರ ಬಗ್ಗೆ ಯಾವುದೇ ವಿವರಗಳು ಕಂಡುಬಂದಿಲ್ಲ. ಆದಾಗ್ಯೂ, ಅವರು 2023 ರಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು ಎಂದು ನಾವು ಕಂಡುಕೊಂಡಿದ್ದೇವೆ. ಅವರು 2019 ರಲ್ಲಿ ಮುಂಬೈನಲ್ಲಿ ಬಾಬಾ ಸಿದ್ದಿಕ್ ಅವರ ಇಫ್ತಾರ್ ಕೂಟದಲ್ಲಿ ಮತ್ತು 2015 ರಲ್ಲಿ ಸೋನಿಯಾ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿಯೂ ಭಾಗವಹಿಸಿದ್ದರು.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಮಧ್ಯಪ್ರದೇಶದಲ್ಲಿ ನಡೆದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ರ‍್ಯಾಲಿ’ಯಲ್ಲಿ, ‘ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ದೂರವಾಗುತ್ತದೆಯೇ, ಪೂರ್ಣ ಆಹಾರ ಸಿಗುತ್ತದೆಯೇ’ ಎಂದು ಹೇಳಿದ್ದ ಅವರು, ಈ ಹೇಳಿಕೆಯ ಮೇಲೆ ಮಲ್ಲಿಕಾರ್ಜುನ ಖರ್ಗೆಯವರನ್ನು ಟ್ರೋಲ್ ಮಾಡಿ, ಕೆಲವು ಬಳಕೆದಾರರು ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಲ್ಲಿಕಾರ್ಜುನ ಖರ್ಗೆ ಇಫ್ತಾರ್ ಔತಣಕೂಟದಲ್ಲಿ ಭಾಗವಹಿಸಿ ಊಟ ಸವಿದಿದ್ದಾರೆ ಎಂದು 2006ರ ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದ್ದು,  ಇತ್ತೀಚೆಗೆ ಅವರು ಮಹಾಕುಂಭ ಮೇಳದ ಪುಣ್ಯ ಸ್ನಾನಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಗೆ ಕೌಂಟರ್‌ ನೀಡಲು ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶಿಕ್ಷಕರ ನೇಮಕಾತಿ ಕುರಿತು ಬಿಜೆಪಿಯ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights