FACT CHECK | ರೂ.350 ಮುಖಬೆಲೆಯ ನೋಟುಗಳನ್ನು RBI ಪರಿಚಯಿಸಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ನೋಟುಗಳ ಎರಡು ಬಂಡಲ್ ಅನ್ನು ಹಿಡಿದುಕೊಂಡಿದ್ದು, ಈ ನೋಟಿನ ಮೇಲೆ 350 ರೂಪಾಯಿ ಎಂದು ಬರೆದಿರುವುದನ್ನು ಕಾಣಬಹುದು. ಫೇಸ್ಬುಕ್ ಬಳಕೆದಾರರೊಬ್ಬರು 350 ರೂ. ಎಂದು ಹೇಳಲಾಗುವ ಫೋಟೋವನ್ನು ಹಂಚಿಕೊಂಡು, ‘‘ಮಾರುಕಟ್ಟೆಯಲ್ಲಿ ಹೊಸತೇನಿದೆ’’ ಎಂದು ಬರೆದುಕೊಂಡಿದ್ದಾರೆ.
ಹಾಗಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಜಕ್ಕೂ 350 ರೂನ ಹೊಸ ನೋಟನ್ನು ಬಿಡುಗಡೆ ಮಾಡಿದೆಯೇ ? ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ಮೂಲಕ ಸರ್ಚ್ ಮಾಡಿದಾಗ , ಆರ್ಬಿಐ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿದೆ ಎಂದು ದೃಢಪಡಿಸುವ ಸುದ್ದಿ ವರದಿಗಳು ಲಭ್ಯವಾಗಿಲ್ಲ. ನಂತರ, ಆರ್ಬಿಐ ವೆಬ್ಸೈಟ್ ಅನ್ನು ಸರ್ಚ್ ಮಾಡಿದಾಗ ಜನವರಿ 1, 2025 ರ ಇತ್ತೀಚಿನ ಪತ್ರಿಕಾ ಟಿಪ್ಪಣಿಯು ಬ್ಯಾಂಕ್ನ ವೆಬ್ಸೈಟ್ನಲ್ಲಿ ಕಂಡುಬಂದಿದೆ.
ವೆಬ್ಸೈಟ್ನ ಮಾಹಿತಿಯ ಪ್ರಕಾರ, ಮೇ 19, 2023 ರಂತೆ ಚಲಾವಣೆಯಲ್ಲಿರುವ 2000 ರೂ. ಬ್ಯಾಂಕ್ ನೋಟ್ಗಳಲ್ಲಿ 98.12% ರಷ್ಟು ಹಿಂತಿರುಗಿವೆ ಎಂದು ಅದು ಹೇಳಿದೆ. ಮೇ 2023 ರಲ್ಲಿ, ಕೇಂದ್ರ ಸರ್ಕಾರವು 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿತು. ಪ್ರಸ್ತುತ 10, 20, 50, 100, 200, 500 ರೂ. ಗಳ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. 350 ರೂಪಾಯಿ ನೋಟಿನ ಬಗ್ಗೆ ನಮಗೆ ಯಾವುದೇ ಪತ್ರಿಕಾ ಟಿಪ್ಪಣಿ ಕಂಡುಬಂದಿಲ್ಲ.
ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 2017 ರಿಂದ ಇತ್ತೀಚಿನವರೆಗೆ ವಿವಿಧ ಸಮಯಗಳಲ್ಲಿ ಪ್ರಕಟವಾದ ಇದೇ ಹೇಳಿಕೆಯ ಕುರಿತು ಹಲವಾರು ಸತ್ಯ-ಪರಿಶೀಲಿಸಿದ ಲೇಖನಗಳನ್ನು ಕಂಡುಕೊಂಡಿತು. ಈ ಚಿತ್ರವು 200 ರೂ. ನೋಟಿನ ಫೋಟೋಶಾಪ್ ಮಾಡಿದ ಚಿತ್ರವಾಗಿದ್ದು, ಅಲ್ಲಿ 200 ಸಂಖ್ಯೆಯನ್ನು ಅಳಿಸಿಹಾಕಿ 350 ಅನ್ನು ಆ ಜಾಗದಲ್ಲಿ ಅಂಟಿಸಲಾಗಿದೆ.
ಸರ್ಕಾರವು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುತ್ತಿದೆ. UPI, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವ್ಯಾಲೆಟ್ಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಆರ್ಬಿಐ ಕೇವಲ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಹಾಗಾಗಿ ಹೊಸ 350 ರೂ. ನೋಟುಗಳನ್ನು ಪರಿಚಯಿಸುವ ಯೋಜನೆ ಆರ್ಬಿಐಯಿಂದ ಇಲ್ಲ ಎಂದು ಖಾಸಗಿ ವೆಬ್ಸೈಟ್ ಕೂಡ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 350 ರೂ. ನೋಟುಗಳು ಮಾರುಕಟ್ಟೆಗೆ ಬಂದಿದೆ ಎಂದುಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ನಕಲಿಯಾಗಿದೆ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಅಥವಾ RBI ತೆಗೆದುಕೊಂಡಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೆ

