FACT CHECK | ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಪ್ರಧಾನಿ ಮೋದಿ?
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮವಾರ (April 14, 2025) ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಧರ್ಮದ ಆಧಾರದಲ್ಲಿ ಮೀಸಲಾತಿ ಇರಬಾರದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು. ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ’ ಎಂದು ಹೇಳಿದರು. ‘ಕಾಂಗ್ರೆಸ್ ಪಕ್ಷವು ಮುಸ್ಲಿಮರಲ್ಲಿ ಕೆಲವೇ ಮೂಲಭೂತವಾದಿಗಳನ್ನು ಸಂತೋಷಪಡಿಸುವ ತುಷ್ಟೀಕರಣ ನೀತಿ ಅನುಸರಿಸಿದೆ. ಅದರಿಂದಾಗಿ ಉಳಿದ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆ ಸಮುದಾಯದವರು ಅನಕ್ಷರಸ್ಥರು ಮತ್ತು ಬಡವರಾಗಿಯೇ ಉಳಿದಿದ್ದಾರೆ’ ಎಂದು ಅವರು ಹೇಳಿದರು.
ಇದರ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ನ್ಯೂಸ್ 24 ಸಂಸ್ಥೆಯ ಪೋಸ್ಟ್‌ರ್‌ವೊಂದು ಪ್ರಸಾರವಾಗುತ್ತಿದ್ದು, ಈ ಪೋಸ್ಟರ್‌ನಲ್ಲಿ ” ಮುಸಲ್ಮಾನರು ಇಂದು ಜಗತ್ತಿನಾದ್ಯಂತ ಬದಲಾಗುತ್ತಿದ್ದಾರೆ, ಆದರೆ ಭಾರತದಲ್ಲಿ ಇನ್ನೂ ಹಿಂದೂ-ಮುಸ್ಲಿಂ ಎಂದು ಮಾಡುತ್ತಿದ್ದಾರೆ” ಎಂಬ ಬರಹವಿದೆ. ಪಿಎಂ ಮೋದಿಯವರ ಫೋಟೊದೊಂದಿಗೆ ಈ ಹೇಳಿಕೆಯನ್ನು ಅನೇಕ ಜನರು ಹಂಚಿಕೊಂಡಿದ್ದಾರೆ.
@divyakumaari ಎಂಬ ಎಕ್ಸ್ ಬಳಕೆದಾರರು ಈ ನ್ಯೂಸ್ 24 ಪೋಸ್ಟ್‌ಕಾರ್ಡ್ ಅನ್ನು ಹಂಚಿಕೊಂಡಿದ್ದಾರೆ. “ಕುನಾಲ್ ಕಾಮ್ರಾ ಅಥವಾ ಬೇರೆ ಯಾವುದೇ ಸ್ಟ್ಯಾಂಡಪ್ ಕಾಮಿಡಿಯನ್ ಏನು ಕಾಮಿಡಿ ಮಾಡಿ ಯಾರು, ಒಂದು ದೇಶ ಒಂದು ಕಾಮಿಡಿಯನ್ ಓನ್ಲಿ ಮೋದಿ” ಎಂದು ಅವರು ಬರೆದಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಪರಿಶೀಲಿಸಿದಾಗ, 2024 ರ ಹಲವು ಹಳೆಯ ಎಕ್ಸ್ ಪೋಸ್ಟ್‌ಗಳು ಲಭ್ಯವಾಗಿವೆ. ನ್ಯೂಸ್ 24 ರ ಎಕ್ಸ್ ಪೋಸ್ಟ್ ಸಹ ಲಭ್ಯವಾಯಿತು. ಆ ಪೋಸ್ಟ್‌ನಲ್ಲಿ, “ಪಿಎಂ ಮೋದಿ ಅವರು ಸಂದರ್ಶನವೊಂದರಲ್ಲಿ, ಮುಸಲ್ಮಾನರು ಇಂದು ಜಗತ್ತಿನಾದ್ಯಂತ ಬದಲಾಗುತ್ತಿದ್ದಾರೆ, ಆದರೆ ಭಾರತದಲ್ಲಿ ಇನ್ನೂ ಹಿಂದೂ-ಮುಸ್ಲಿಂ ಎಂದು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ” ಎಂದು ಬರೆಯಲಾಗಿತ್ತು. ಇದರಿಂದ, ಪಿಎಂ ಮೋದಿಯವರ ಈ ಹೇಳಿಕೆ ಇತ್ತೀಚಿನದಲ್ಲ ಎಂದು ಸ್ಪಷ್ಟವಾಯಿತು.
![]()
ಈ ವಿಷಯಕ್ಕೆ ಸಂಬಂಧಿಸಿದ ವರದಿಗಳನ್ನು ಸರ್ಚ್ ಮಾಡಿದಾಗ, ನವಭಾರತ್ ಟೈಮ್ಸ್‌ನ ವರದಿಯೊಂದು ಲಭ್ಯವಾಯಿತು. ಅದರಲ್ಲಿ, “ಪಿಎಂ ಮೋದಿ ಅವರು, ಮುಸಲ್ಮಾನ ಸಮಾಜ ಜಗತ್ತಿನಲ್ಲಿ ಬದಲಾಗುತ್ತಿದೆ. ಇಂದು ನಾನು ಗಲ್ಫ್ ದೇಶಗಳಿಗೆ ಹೋಗುತ್ತೇನೆ. ನನಗೆ ವೈಯಕ್ತಿಕವಾಗಿ ಅಷ್ಟೊಂದು ಗೌರವ ಸಿಗುತ್ತದೆ, ಭಾರತಕ್ಕೆ ಗೌರವ ಸಿಗುತ್ತದೆ. ಇದು ಇಂದು ಎಲ್ಲರಿಗೂ ಅನುಭವವಾಗುತ್ತದೆ. ಇಲ್ಲಿ ನಮಗೆ ವಿರೋಧವಾಗುತ್ತಿದೆ. ನೀವು ಸೌದಿ ಅರೇಬಿಯಾಕ್ಕೆ ಹೋಗಿ. ಅಲ್ಲಿ ಯೋಗ ಅಧಿಕೃತ ಪಠ್ಯಕ್ರಮದ ವಿಷಯವಾಗಿದೆ. ಇಲ್ಲಿ ನೀವು ಯೋಗ ಮುಸ್ಲಿಂ ವಿರೋಧಿ ಎಂದು ಹೇಳುತ್ತೀರಿ. ಗಲ್ಫ್ ದೇಶಗಳ ಶ್ರೀಮಂತ ಜನರ ಪ್ರಶ್ನೆ ಏನೆಂದರೆ, ಯೋಗ ಹೇಗೆ ಮಾಡುವುದು? ಅವರ ಕುಟುಂಬದ ಜನರು ಭಾರತಕ್ಕೆ ಯೋಗ ಕಲಿಯಲು ಬರುತ್ತಿದ್ದಾರೆ. ಭಾರತದಲ್ಲಿ ನೀವು ಯೋಗವನ್ನು ಹಿಂದೂ – ಮುಸ್ಲಿಂ ಎಂದು ಮಾಡಿದ್ದೀರಿ” ಎಂದು ಹೇಳಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಪ್ರಧಾನಿ ಮೋದಿಯವರ ಮುಸ್ಲಿಮರ ಬಗ್ಗೆಗಿನ ಹೇಳಿಕೆ ಹಳೆಯದು. ಪ್ರಧಾನಿ ಮೋದಿ ಅವರು ಯೋಗದ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದ ಹೇಳಿಕೆಯನ್ನು ತಿರುಚಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸ್ಟ್ರೀಟ್ ಫುಡ್ ಅಂಗಡಿಯಲ್ಲಿ ಆಹಾರದ ಮೇಲೆ ಇಲಿಗಳು ಓಡಾಡುತ್ತಿರುವ ವಿಡಿಯೋ ನಕಲಿ

