FACT CHECK | RBI 10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ (RBI) 10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ‘ವೈರಲ್ ಭೋಜ್‌ಪುರಿ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ, 10,000 ರೂಪಾಯಿಯ ನಾಣ್ಯದ ಚಿತ್ರವನ್ನು ತೋರಿಸಲಾಗಿದ್ದು, ಇದನ್ನು RBI ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಪೋಸ್ಟ್‌ನಲ್ಲಿ ಜನರಿಗೆ ಈ ನಾಣ್ಯದ ಬಗ್ಗೆ ಒಪ್ಪಿಗೆಯನ್ನು ಕೇಳಲಾಗಿದೆ, ಇದರಿಂದಾಗಿ ಜನಸಾಮಾನ್ಯರಲ್ಲಿ ಗೊಂದಲ ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, RBI ನಿಜವಾಗಿಯೂ ರೂ 10 ಸಾವಿರ ಮುಖಬೆಲೆಯ ಹೊಸ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆಯೇ? ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌  :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್‌ ಪೋಸ್ಟ್‌ ಗೆ ಸಂಬಂಧಿಸಿದ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ವೈರಲ್‌ ಪೋಸ್ಟ್‌ ನಿಜವಾಗಿದ್ದರೆ ಆ ಕುರಿತು ಹಲವು ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು.

ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ಗಾಗ್ಗೆ RBI ಹೊಸ ನೋಟುಗಳನ್ನು ಪರಿಚಯಿಸಿದೆ, ಎಂಬ ನಕಲಿ ಸುದ್ದಿಗಳು ಕಂಡುಬರುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಅದನ್ನು ಫ್ಯಾಕ್ಟ್‌ಚೆಕ್ ಮೂಲಕ ಪತ್ತೆ ಮಾಡಿ ಜನರಿಗೆ ವಾಸ್ತವವೇನೆಂದು ಏನ್‌ಸುದ್ದಿ.ಕಾಂ ತಿಳಿಸುತ್ತಾ ಬಂದಿದೆ.

 

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ RBI ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗಲೂ ಅಲ್ಲಿಯೂ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI ) ವಾರ್ಷಿಕ ವರದಿಯಲ್ಲಿ, ಬ್ಯಾಂಕ್ ಈಗ ಎರಡು, ಐದು ಮತ್ತು 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಚಲಾವಣೆಯಲ್ಲಿರುವ ನಾಣ್ಯಗಳಲ್ಲಿ 50 ಪೈಸೆ, ಒಂದು ರೂಪಾಯಿ, 2 ರೂಪಾಯಿ, ಐದು ರೂಪಾಯಿ, 10 ಮತ್ತು 20 ರೂಪಾಯಿ ನಾಣ್ಯಗಳು ಸೇರಿವೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ.

ಆರ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ಮುಂಬೈ, ಹೈದರಾಬಾದ್, ಕೋಲ್ಕತ್ತಾ ಮತ್ತು ನೋಯ್ಡಾದಲ್ಲಿರುವ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಪಿಎಂಸಿಐಎಲ್) ನ ನಾಲ್ಕು ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಇದಾದ ನಂತರ, ಈ ನಾಣ್ಯಗಳನ್ನು ಆರ್‌ಬಿಐ ಬಿಡುಗಡೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಇದಾದ ನಂತರ, ನಾವು ವೈರಲ್‌ ಪೋಸ್ಟ್‌ನಲ್ಲಿರುವ 10,000 ರೂ. ನಾಣ್ಯದ ವೈರಲ್ ಚಿತ್ರವನ್ನು ಹೈವ್‌ ಮಾಡರೇಷನ್‌ AI ಫೋಟೋ ಪತ್ತೆಹಚ್ಚುವ ವೆಬ್‌ಸೈಟ್‌ನಲ್ಲಿ ಪರಿಶೀಲಿಸೆದೆವು. ಈ ವೇಳೆ ನಮಗೆ ವೈರಲ್‌ ಫೋಟೋವನ್ನು ಶೇ.99.9 ರಷ್ಟು AI ಬಳಸಿ ರಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ವೈರಲ್‌ ಫೋಟೋ ಕೂಡ ನಿಜವಲ್ಲ, ಇದನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, RBI 10,000 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಟೆನಿಸ್ ತಾರೆ ಸ್ಟೆಫಿ ಗ್ರಾಫ್ ನಿಧನರಾಗಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights