FACT CHECK | ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಹೇಳಿದ್ರಾ ವಿದೇಶಾಂಗ ಸಚಿವ ಎಸ್ ಜೈಶಂಕರ್

ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಿಖರ ಮಿಲಿಟರಿ ದಾಳಿಯನ್ನು ನಡೆಸಿದ್ದು, ಈ ವೇಳೆ 3 ರಫೇಲ್ ಫೈಟರ್ ಜೆಟ್ ಗಳನ್ನು ಕಳೆದುಕೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು 1 ನಿಮಿಷ 12 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಎಸ್‌ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದ ವೀಡಿಯೋ ನಕಲಿ

“ನಾವು ಈಗಾಗಲೇ ಎರಡು ದಿನಗಳ ಹಿಂದೆ ಪಾಕಿಸ್ತಾನಕ್ಕೆ ಮೂರು ರಫೇಲ್ಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಅವರು ದಾಳಿ ಮಾಡುವುದು ತುಂಬಾ ಅನ್ಯಾಯ. ಆದರೂ ಅವರು ಅದನ್ನು ಮಾಡಿದರು. ಅದರ ನಂತರ ನಾವು ಬಹಳ ಬೇಗನೆ ಪ್ರತಿಕ್ರಿಯಿಸಿದೆವು. ಮರುದಿನ ಬೆಳಿಗ್ಗೆ, ರುಬಿಯೊ ನನಗೆ ಕರೆ ಮಾಡಿ ಪಾಕಿಸ್ತಾನಿಗಳು ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಿದರು.

 ಪಾಕಿಸ್ತಾನದೊಂದಿಗಿನ ಸಂಕ್ಷಿಪ್ತ ಮಿಲಿಟರಿ ಸಂಘರ್ಷದಲ್ಲಿ ಭಾರತೀಯ ವಾಯುಪಡೆ (ಐಎಎಫ್) “ಕೆಲವು ವಿಮಾನಗಳನ್ನು” ಕಳೆದುಕೊಂಡಿದೆ ಎಂದು ಹಿರಿಯ ಭಾರತೀಯ ಮಿಲಿಟರಿ ಅಧಿಕಾರಿಯೊಬ್ಬರು ಕಳೆದ ತಿಂಗಳು ಒಪ್ಪಿಕೊಂಡ ನಂತರ ಈ ವೀಡಿಯೋ ವೈರಲ್ ಆಗಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಮೂಲ ಗೂಗಲ್ ಸರ್ಚ್ ಮಾಡಿದಾಗ, ವಿದೇಶಾಂಗ ಸಚಿವರ ಅಂತಹ ಹೇಳಿಕೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಲಭ್ಯವಾಗಿಲ್ಲ. ಆದರೆ ವಿಡಿಯೋದ 00:57 ಸೆಕೆಂಡಿನಲ್ಲಿ ಜೈಶಂಕರ್ ಅವರು “ನಾವು ಈಗಾಗಲೇ ಎರಡು ದಿನಗಳ ಹಿಂದೆ ಪಾಕಿಸ್ತಾನದ ಎದುರು ಮೂರು ರಫೇಲ್ ಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಅವರು ದಾಳಿ ಮಾಡುವುದು ತುಂಬಾ ಅನ್ಯಾಯ. ಆದರೂ ಅವರು ಅದನ್ನು ಮಾಡಿದರು” ಎನ್ನುವ ಮಾತುಗಳು ಹಿಂದಿನ ಧ್ವನಿಗಿಂತ ಭಿನ್ನವಾಗಿದೆ ಮತ್ತು ತುಟಿ ಚಲನೆ, ವೀಡಿಯೋದ ದೃಶ್ಯಕ್ಕೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನು ಗಮನಿಸಿದ್ದೇವೆ. ಆದ್ದರಿಂದ ವಿಡಿಯೋವನ್ನು ಡಿಜಿಟಲ್ ಆಗಿ ತಿದ್ದಲಾಗಿದೆಯೇ ಎಂಬ ಬಗ್ಗೆ ನಮ್ಮ ಅನುಮಾನಗಳನ್ನು ಹುಟ್ಟುಹಾಕಿತು.

ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಎಸ್‌ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದ ವೀಡಿಯೋ ನಕಲಿ

ನಾವು ಈ ಸಂಶಯಾಸ್ಪದ 7 ಸೆಕೆಂಡ್ ಗಳ ಆಡಿಯೋವನ್ನು ಡೀಫ್ ಫೇಕ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ,  ಅದು “ನಕಲಿ” ಎಂದು ಕಂಡುಬಂದಿದೆ, ಆದರೆ ವೈರಲ್ ವೀಡಿಯೋದ  ಉಳಿದ ಆಡಿಯೋವನ್ನು “ನೈಜ” ಎಂದು ಕರೆಯಲಾಗಿದೆ. ಅಲ್ಲದೆ, ನಾವು  ಓಪನ್-ಸೋರ್ಸ್ ಡೀಪ್ಫೇಕ್ ಪತ್ತೆ ಸಾಧನವಾದ ಡೀಪ್ವೇರ್ ಮೂಲಕ ಏಳು ಸೆಕೆಂಡುಗಳ ವೀಡಿಯೋದ ಆಯ್ದ ಭಾಗವನ್ನು ನಡೆಸಿದ್ದೇವೆ, ಅದೂ ಕೂಡ “ಅನುಮಾನಾಸ್ಪದ” ಎಂದು ಪರಿಗಣಿಸಿದೆ.

ವೈರಲ್ ವೀಡಿಯೋವನ್ನು ಡೀಪ್ಫೇಕ್-ಒ-ಮೀಟರ್ ಮೂಲಕ ಪರಿಶೀಲಿಸಿದಾಗ, ಅಲ್ಲಿಯೂ ವೀಡಿಯೋವನ್ನು “ಎಐ ಮೂಲಕ ರಚಿಸಲಾಗಿದೆ” ಎಂಬ ಬಗ್ಗೆ ಪ್ರತಿಶತ 100 ರಷ್ಟು ಫಲಿತಾಂಶದಲ್ಲಿ ತಿಳಿಸಿದೆ.

ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಎಸ್‌ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದ ವೀಡಿಯೋ ನಕಲಿ

ಮತ್ತಷ್ಟು ಮಾಹಿತಿಗಾಗಿ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 1, 2025 ರಂದು ಯುಎಸ್ ಮೂಲದ ನ್ಯೂಸ್‌ ವೀಕ್, ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಮೂಲ ಸಂದರ್ಶನ ದ ವಿಡಿಯೋ ಲಭ್ಯವಾಗಿದೆ. ಇದರ ವಿವರಣೆಯಲ್ಲಿ “ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ನ್ಯೂಸ್‌ ವೀಕ್ ಸಿಇಒ ದೇವ್ ಪ್ರಗದ್ ಅವರಿಗೆ ಅಮೆರಿಕ ಮತ್ತು ಟ್ರಂಪ್‌ನಿಂದ ಹಿಡಿದು ಚೀನಾ ಮತ್ತು ಪಾಕಿಸ್ತಾನದವರೆಗೆ ಎಲ್ಲದರೊಂದಿಗಿನ (ಮತ್ತು ಎಲ್ಲರೊಂದಿಗಿನ) ಭಾರತದ ಸಂಬಂಧಗಳು, ಕನಸುಗಳು ಮತ್ತು ಸಂದಿಗ್ಧತೆಗಳ ಬಗ್ಗೆ ವಿವರಿಸುತ್ತಾರೆ” ಎಂದಿದೆ.

ವೈರಲ್ ವೀಡಿಯೋದ  ಆಯ್ದ ಭಾಗವನ್ನು 42:13 ಸೆಕೆಂಡ್ ನಿಂದ ಶುರುವಾಗುತ್ತಿದ್ದು, ಅದರಲ್ಲಿ  “ನಾವು ಈಗಾಗಲೇ ಎರಡು ದಿನಗಳ ಹಿಂದೆ ಪಾಕಿಸ್ತಾನಕ್ಕೆ ಮೂರು ರಫೇಲ್ಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಅವರು ದಾಳಿ ಮಾಡುವುದು ತುಂಬಾ ಅನ್ಯಾಯವಾಗಿದೆ. ಆದರೆ ಅವರು ಹೇಗಾದರೂ ಅದನ್ನು ಮಾಡಿದರು “, ಎನ್ನುವುದು ಮೂಲ ಸಂದರ್ಶನದ ಭಾಗವಾಗಿರಲಿಲ್ಲ. 43:10 ರಲ್ಲಿ, ಜೈಶಂಕರ್ ಅವರು, “ಇದು ಹಿಂದಿನ ರಾತ್ರಿ ಮತ್ತು ನಿಮಗೆ ತಿಳಿದಿದೆ, ಪಾಕಿಸ್ತಾನಿಗಳು ಆ ರಾತ್ರಿ ನಮ್ಮ ಮೇಲೆ ಭಾರಿ ದಾಳಿ ಮಾಡಿದರು” ಎಂದು ಹೇಳಿದ ನಂತರ  “ನಂತರ ನಾವು ಬಹಳ ಬೇಗ ಪ್ರತಿಕ್ರಿಯಿಸಿದ್ದೇವೆ. ಮರುದಿನ ಬೆಳಿಗ್ಗೆ, ರುಬಿಯೊ ನನಗೆ ಕರೆ ಮಾಡಿ ಪಾಕಿಸ್ತಾನಿಗಳು ಮಾತನಾಡಲು ಸಿದ್ಧರಿದ್ದಾರೆ ಎಂದು ಹೇಳಿದರು” ಎಂದಿದೆ. ಆದ್ದರಿಂದ  ವೈರಲ್ ವೀಡಿಯೋವನ್ನು ಎಐ ಮೂಲಕ ತಿರುಚಲಾಗಿದೆ ಎಂದು ದೃಢಪಡಿಸಲಾಗಿದೆ.  ಸಂದರ್ಶನದ ಬಗ್ಗೆ ನ್ಯೂಸ್‌ ವೀಕ್  ಮತ್ತು ಎಕನಾಮಿಕ್ ಟೈಮ್ಸ್ ವರದಿಗಳು ವೈರಲ್ ವೀಡಿಯೋ ತಿರುಚಲಾಗಿದೆ ಮತ್ತು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಾಬೀತುಪಡಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ನಿಖರ ಮಿಲಿಟರಿ ದಾಳಿಯಲ್ಲಿ ಭಾರತವು ಮೂರು ರಫೇಲ್ ಫೈಟರ್ ಜೆಟ್ ಗಳನ್ನು ಕಳೆದುಕೊಂಡಿದೆ ಎಂದು ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾದ ವೈರಲ್ ವೀಡಿಯೋ ಡೀಪ್ ಫೇಕ್ ಆಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸ್ಯಾನಿಟರಿ ಪ್ಯಾಡ್‌ನಲ್ಲಿ ರಾಹುಲ್ ಗಾಂಧಿ ಫೋಟೊ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ ಬಿಜೆಪಿ ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights