FACT CHECK | ಭಾರತದಲ್ಲಿ ರೈಲು ಹಳಿಗಳ ನಡುವೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆಯೇ?

ಸೌರ ಫಲಕಗಳನ್ನು ರೈಲು ಹಳಿಗಳ ನಡುವೆ  ಅಳವಡಿಸಿ ವಿದ್ಯುತ್‌ ಉತ್ಪಾದಿಸಲು ಭಾರತೀಯ ರೈಲ್ವೆ ಮುಂದಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರಿಂದಾಗಿ ವಾರ್ಷಿಕವಾಗಿ ಒಂದು ಟೆರಾ ವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗಲಿದೆ ಎಂದು ಹೇಳಲಾಗುತ್ತಿದೆ. ‘ಸನ್‌ –ವೇಸ್‌’ ಎಂಬ ಉದ್ಯಮವೊಂದು ಈ ಜವಬ್ದಾರಿಯನ್ನು ನಿಭಾಯಿಸುತ್ತಿದ್ದು, ಕಳಚಬಹುದಾದಂತಹ ಸೌರಫಲಕಗಳನ್ನು ಅಳವಡಿಸಲಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.

ಫೇಸ್‌ಬುಕ್ ಪೋಸ್ಟ್ ನಲ್ಲಿ ಹೇಳಿರುವಂತೆ, “ಸುಸ್ಥಿರ ಅಭಿವೃದ್ದಿಯ ಕಾರಣಕ್ಕೆ ಭಾರತದ ಸ್ಟಾರ್ಟ್ಅಪ್ ಕಂಪನಿ ಸನ್-ವೇಸ್ ರೈಲ್ವೆ ಹಳಿಗಳ ನಡುವೆ ಸುಲಭವಾಗಿ ಕಳಚಬಹುದಾದ ಸೌರ ಫಲಕಗಳನ್ನು ಅಳವಡಿಸುತ್ತಿದೆ. ರೈಲುಗಳು ಓಡುತ್ತಲೇ ಇರುತ್ತವೆ ಮತ್ತು ಶುದ್ಧ ಇಂಧನ ಹರಿಯುತ್ತಲೇ ಇರುತ್ತದೆ. ಹೆಚ್ಚುವರಿ ಭೂಮಿ ಅಗತ್ಯವಿಲ್ಲ. ರೈಲು ಸೇವೆಗಳಿಗೆ ಯಾವುದೇ ಅಡ್ಡಿ ಇಲ್ಲ. ಮಾಲಿನ್ಯ ಶೂನ್ಯ. ಈ ವಿಧಾನವು ವಾರ್ಷಿಕವಾಗಿ 1 ಟೆರಾವ್ಯಾಟ್-ಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು, ಸಂಭಾವ್ಯವಾಗಿ 200,000 ಮನೆಗಳಿಗೆ ವಿದ್ಯುತ್ ನೀಡುತ್ತದೆ. ಎಂದು ಬರೆಯಲಾಗಿದೆ.ಹಾಗಿದ್ದರೆ ನಿಜವಾಗಿಯೂ ಇಂತಹ ತಂತ್ರಜ್ಞಾನವನ್ನು ಭಾರತದಲ್ಲಿ ಅಳವಡಿಸಲಾಗುತ್ತಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ ರೈಲು ಹಳಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್ ಉದ್ಬಾದನೆಗಾಗಿ ಸನ್-ವೆಸ್ ಕಂಪನಿ ಮುಂದಾಗಿದೆಯೇ ಎಂದು ಪರಿಶೀಲಿಸಲು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಸಿಟ್ಜರ್ಲೆಂಡ್‌ನ ಸುದ್ದಿ ಪೋರ್ಟಲ್‌ swissinfo.ch ನಲ್ಲಿ ಈ ವರ್ಷದ ಏಪ್ರಿಲ್‌ 25ರಂದು ಪ್ರಕಟವಾದ ವರದಿ ಲಭ್ಯವಾಗಿದೆ.

ಆ ವರದಿಯಲ್ಲಿದ್ದ ಬಳಸಿಕೊಳ್ಳಲಾದ ಚಿತ್ರ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಚಿತ್ರ ಒಂದೇ ಆಗಿತ್ತು. ಆ ಯೋಜನೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನವೋದ್ಯಮ ಸನ್‌–ವೇಸ್‌ ಕೂಡ ಅಲ್ಲಿಯದ್ದೇ ಎಂದು ವರದಿಯಲ್ಲಿ ಹೇಳಲಾಗಿತ್ತು.

ಸನ್-ವೇಸ್ ಭಾರತೀಯ ರೈಲ್ವೇ ಹಳಿಗಳನ್ನು ಬಳಸಿಕೊಂಡು ಸೌರ ಫಾರ್ಮ್ ಯೋಜನೆಯನ್ನು ನಡೆಸುತ್ತಿದೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಕೀವರ್ಡ್ ಹುಡುಕಾಟಗಳನ್ನು ಬಳಸಿಕೊಂಡು, ಏಪ್ರಿಲ್ 29 ರಂದು NDTV ಪ್ರಕಟಿಸಿದ ‘ರೈಲುಗಳಿಗೆ ವಿದ್ಯುತ್ ನೀಡುವ ಸೌರ ಫಲಕಗಳೊಂದಿಗೆ ಸ್ವಿಟ್ಜರ್‌ಲ್ಯಾಂಡ್ ರೈಲ್ವೆ ಹಳಿಗಳನ್ನು ಪರೀಕ್ಷಿಸುತ್ತದೆ’ ಎಂಬ ಶೀರ್ಷಿಕೆಯ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಸೌರ ತಂತ್ರಜ್ಞಾನದ ಸ್ಟಾರ್ಟ್ಅಪ್ ಆಗಿರುವ ಸನ್-ವೇಸ್, ಸೌರ ಫಲಕಗಳನ್ನು ಇರಿಸುವ ಮೂಲಕ ಸುಸ್ಥಿರ ಶಕ್ತಿಯನ್ನು ಉತ್ಪಾದಿಸಲು ರೈಲ್ವೆ ಹಳಿಗಳ ನಡುವಿನ ಜಾಗವನ್ನು ಬಳಸಿಕೊಳ್ಳಲಿದೆ ಎಂದು ವರದಿ ಹೇಳಿದೆ.

ಇಂಡೊನೇಷ್ಯಾ ಬ್ಯುಸಿನೆಸ್‌ ಪೋಸ್ಟ್‌ ಎಂಬ ಮಾಧ್ಯಮದಲ್ಲೂ ಈ ಬಗ್ಗೆ ಪ್ರಕಟವಾದ ವರದಿ ಸಿಕ್ಕಿತು. ಇನ್ನಷ್ಟು ಹುಡುಕಿದಾದ ಭಾರತೀಯ ರೈಲ್ವೆಯು ಇಂತಹ ಯೋಜನೆ ರೂಪಿಸಿರುವ ಬಗ್ಗೆ ವಿಶ್ವಾಸವಾದ ಸುದ್ದಿಗಳು ಸಿಗಲಿಲ್ಲ. ಸನ್-ವೇಸ್ ಸ್ವಿಸ್ ಸ್ಟಾರ್ಟ್ಅಪ್ ಆಗಿದೆ. ಇದರ ಇತ್ತೀಚಿನ ರೈಲ್ವೆ ಟ್ರ್ಯಾಕ್ ಸೋಲಾರ್ ಫಾರ್ಮ್ ಯೋಜನೆಯನ್ನು ಪಶ್ಚಿಮ ಸ್ವಿಟ್ಜರ್‌ಲ್ಯಾಂಡ್‌ನ ಬುಟ್ಟೆಸ್ ಎಂಬ ಹಳ್ಳಿಯಲ್ಲಿ ನಡೆಸಲಾಯಿತು. ಈ ಯೋಜನೆಯನ್ನು ಭಾರತದಲ್ಲಿ ಕೈಗೊಳ್ಳಲಾಗಿದೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಸ್ವಿಟ್ಜರ್ಲೆಂಡ್‌ನಲ್ಲಿ ಜಾರಿಯಾಗುತ್ತಿರುವ ಯೋಜನೆಯನ್ನು ಭಾರತೀಯ ರೈಲ್ವೆಯ ಯೋಜನೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ವರದಿ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಹೇಳಿದ್ರಾ ವಿದೇಶಾಂಗ ಸಚಿವ ಎಸ್ ಜೈಶಂಕರ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights