FACT CHECK | ತಮಿಳುನಾಡಿನಲ್ಲಿ ನಡೆದ ಹಳೆಯ ಘಟನೆಯನ್ನು ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೆ
ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. 21 ಸೆಕೆಂಡುಗಳ ಈ ವಿಡಿಯೋದಲ್ಲಿ ಲಾಠಿ ಪ್ರಹಾರ ನಡೆಸುತ್ತಿರುವ ಪೊಲೀಸರು ಮಹಿಳೆಯರನ್ನು ಥಳಿಸಿ ಓಡಿಸುತ್ತಿರುವುದನ್ನು ತೋರಿಸಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವ್ನು ಹಂಚಿಕೊಂಡಿದ್ದು, “ಪೊಲೀಸರು ಮಹಿಳೆಯರನ್ನು ತುಂಬಾ ಗೌರವಿಸುತ್ತಿದ್ದಾರೆ. ಈ ವಿಡಿಯೋದ ಸತ್ಯವನ್ನು ಬಹಿರಂಗಪಡಿಸಬೇಕು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವೀಡಿಯೊ ವಾಸ್ತವವಾಗಿ ಉತ್ತರ ಪ್ರದೇಶದ್ದಾಗಿದೆ” ಎಂದು ಬರೆದಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 25, 2024 ರಂದು ಫೇಸ್ಬುಕ್ ಖಾತೆಯಿಂದ ಹಂಚಿಕೊಂಡ ಅದೇ ವೀಡಿಯೊ ಲಭ್ಯವಾಗಿದೆ. ಇದರ ಶೀರ್ಷಿಕೆ ತಮಿಳಿನಲ್ಲಿದ್ದು, ಸುಮಾರು 40 ಟ್ರಾನ್ಸ್ಜೆಂಡರ್ ಪಣಗುಡಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು. ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು ಮತ್ತು ನಂತರ ಲಾಠಿ ಪ್ರಹಾರ ನಡೆಸಿದರು ಎಂದು ಬರೆಯಲಾಗಿದೆ.
ಈ ವೀಡಿಯೊ ಕುರಿತು ಸೆಪ್ಟೆಂಬರ್ 2024 ರಂದು ಪ್ರಕಟವಾದ ಹಲವು ಸುದ್ದಿ ವರದಿಗಳು ಲಭ್ಯವಾಗಿವೆ. ಅವರ ಪ್ರಕಾರ, ಈ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಣಗುಡಿ ಎಂಬ ಪಟ್ಟಣದಲ್ಲಿ ನಡೆದಿದೆ. ರಾತ್ರಿಯಲ್ಲಿ ಟ್ರಾನ್ಸ್ಜೆಂಡರ್ ಮಹಿಳೆಯರು ದ್ವಿಚಕ್ರ ವಾಹನಗಳನ್ನು ತಡೆದು ಅವರಿಂದ ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿವೆ ಎಂದು ವರದಿಯಾಗಿದೆ. ಪಣಗುಡಿ ಬಳಿಯ ನೆಲ್ಲೈ-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕೆಲವು ವರದಿಗಳು ಉಲ್ಲೇಖಿಸಿವೆ
ಲಭ್ಯವಾದ ಮತ್ತಷ್ಟು ಮಾಹಿತಿಯ ಪ್ರಕಾರ, ಇಬ್ಬರು ಟ್ರಾನ್ಸ್ಜೆಂಡರ್ಗಳನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯದಾಗ ಈ ಘಟನೆ ನಡೆದಿದೆ. ಬಂಧಿಸಲ್ಪಟ್ಟ ಟ್ರಾನ್ಸ್ಜೆಂಡರ್ಗಳನ್ನು ಬಿಡುಗಡೆ ಮಾಡಬೇಕು ಎಂದು ಮಹಿಳೆಯರ ಗುಂಪು ಪೊಲೀಸ್ ಠಾಣೆಯ ಸುತ್ತಲೂ ಜಮಾಯಿಸಿತು. ಅವರಲ್ಲಿ ಕೆಲವರು ಪೊಲೀಸರನ್ನು ವಿವಸ್ತ್ರಗೊಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಠಾಣೆ ಬಳಿ ಇರಿಸಿದ್ದ ಹೂವಿನ ಕುಂಡಗಳನ್ನು ಹೊಡೆದು ದಾಂಧಲೆ ನಡೆಸಿದರು ಎನ್ನಲಾಗಿದೆ. ನಂತರ ಅವರ ಮತ್ತು ಪೊಲೀಸರ ನಡುವೆ ನಡೆದ ವಾಗ್ವಾದವು ಲಾಠಿ ಚಾರ್ಜ್ಗೆ ಕಾರಣವಾಯಿತು ಎಂದು ತಿಳಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಣಗುಡಿ ಎಂಬ ಪಟ್ಟಣದಲ್ಲಿ 2024ರಲ್ಲಿ ನಡೆದ ಘಟನೆಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪೂರಿ ಜಗನ್ನಾಥ ರಥಯಾತ್ರೆಯನ್ನು ನಾಟಕ ಎಂದು ಹೇಳಿದ್ರಾ ರಾಹುಲ್ ಗಾಂಧಿ

