FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲ್ಲಲಾಗಿದೆಯೇ?
ವ್ಯಕ್ತಿಯೊಬ್ಬನನ್ನು ಕೆಲವರು ಥಳಿಸಿ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವ್ಯಕ್ತಿ ಅಸಾಯಕತೆಯಿಂದ ರಸ್ತೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಹೀಗಿರುವಾಗ ಕೆಲ ವ್ಯಕ್ತಿಗಳು ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ಮೂರು-ನಾಲ್ಕು ಬಾರಿ ಆತನ ಮೇಲೆ ಸಾಯುವಂತೆ ಹಾಕುತ್ತಾರೆ. ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ ಹಿಂದೂಗಳ ಪರಿಸ್ಥಿತಿ. ಎಚ್ಚರ ಹಿಂದುಗಳೇ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಮತ್ತೊಂದು ಹೇಳಿಕೆಯಲ್ಲಿ, ‘‘ಹಿಂದೂಗಳನ್ನು ಬಾಂಗ್ಲಾದೇಶದಲ್ಲಿ ಕೊಲ್ಲಲಾಗುತ್ತಿದೆ’’ ಎಂದು ಬರೆಯಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬಾಂಗ್ಲಾದೇಶಮಾಧ್ಯಮ ಸಂಸ್ಥೆಗಳು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ಸುದ್ದಿ ಲಭ್ಯವಾಗಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ವೈರಲ್ ವೀಡಿಯೊ, 09 ಜುಲೈ 2025 ರಂದು, ಢಾಕಾದಲ್ಲಿನ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಮಿಟ್ಫೋರ್ಡ್ ಆಸ್ಪತ್ರೆ) ಗೇಟ್ ನಂಬರ್ 3 ಬಳಿ ನಡೆದಿದೆ. ಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಎಂಬ ವ್ಯಕ್ತಿಯನ್ನು ಕೆಲವು ವ್ಯಕ್ತಿಗಳು ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಬಾಂಗ್ಲಾದ ಸ್ಥಳೀಯ ಮಾಧ್ಯಮ Prothomalo ಜುಲೈ 12 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ‘‘09 ಜುಲೈ 2025 ರಂದು, ಮಿಟ್ಫೋರ್ಡ್ ಆಸ್ಪತ್ರೆಯ ಬಳಿ ಸಾರ್ವಜನಿಕವಾಗಿ ಸ್ಕ್ರ್ಯಾಪ್ ವ್ಯಾಪಾರಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಅವರನ್ನು ಕೊಲ್ಲುವ ಮೊದಲು ದಾಳಿಕೋರರು ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ಹೊಡೆದು, ಅವರ ತಲೆ ಮತ್ತು ದೇಹವನ್ನು ಪುಡಿಪುಡಿ ಮಾಡಿದರು. ಜುಬೋ ದಳ, ಛತ್ರ ದಳ ಮತ್ತು ಸ್ವೀಚ್ಛಸೇಬಕ್ ದಳದ ಸದಸ್ಯರು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಗಳು ಹೇಳುವಂತೆ ಕೊಲೆಯ ಹಿಂದಿನ ಉದ್ದೇಶ, ವ್ಯವಹಾರ ವಿವಾದ ಮತ್ತು ವೈಯಕ್ತಿಕ ದ್ವೇಷದಿಂದ ಇದನ್ನು ಮಾಡಲಾಗಿದೆ. ಲಾಲ್ ಚಂದ್ ಒಂದು ಕಾಲದಲ್ಲಿ ಜುಬೋ ದಳದೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ’’ ಎಂಬ ಮಾಹಿತಿ ಇದರಲ್ಲಿದೆ.
11 ಜುಲೈ 2025 ರಂದು ಮಿಟ್ಫೋರ್ಡ್ ಆಸ್ಪತ್ರೆಯ ಬಳಿ ಸಾರ್ವಜನಿಕವಾಗಿ ಸ್ಕ್ರ್ಯಾಪ್ ವ್ಯಾಪಾರಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಅವರನ್ನು ಕ್ರೂರವಾಗಿ ಹತ್ಯೆ ನಡೆದ ಬಳಿಕ ಢಾಕಾ ಮೆಟ್ರೊಪಾಲಿಟನ್ ಪೊಲೀಸರು (DMP) ನಡೆಸಿದ ಪತ್ರಿಕೆ ಸಭೆಯಲ್ಲಿ, ಈ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು, ಮಹಮುದುಲ್, ತಾರಿಖ್‌ಗಳನ್ನು ಬಂಧಿಸಿದ್ದಾರೆ, ಹಾಗೆಯೇ ತಾರಿಖ್‌ನಿಂದ ಒಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುವ ವರದಿಯನ್ನು ನೀವು ಇಲ್ಲಿ ನೋಡಬಹುದು.
“ಆರೋಪಿಗಳು ನನ್ನ ಚಿಕ್ಕಪ್ಪನಿಗೆ ಅಂಗಡಿ ಮುಚ್ಚುವಂತೆ ಅಥವಾ ಪ್ರತಿ ತಿಂಗಳು 2 ಲಕ್ಷ ಟಾಕಾ ಮತ್ತು ಅವರ ಆದಾಯದ ಒಂದು ಭಾಗವನ್ನು ನೀಡುವಂತೆ ಕೇಳಿದ್ದರು. ನನ್ನ ಚಿಕ್ಕಪ್ಪ ಒಪ್ಪಲಿಲ್ಲ, ಮತ್ತು ಇದಕ್ಕಾಗಿ ಅವರನ್ನು ತುಂಬಾ ಕ್ರೂರವಾಗಿ ಕೊಂದರು” ಎಂದು ಸೋಹಾಗ್ ಅವರ ಸೊಸೆ ಬಿಥಿ ಅಕ್ತರ್ ಹೇಳಿರುವುದನ್ನು ದಿ ಡೈಲಿ ಸ್ಟಾರ್ ಕೋಟ್ ಮಾಡಿದೆ.
TBS News ಜುಲೈ 11 ರಂದು ಪ್ರಕಟಿಸಿದ ಸುದ್ದಿಯಲ್ಲಿ, ‘‘ಸೋಹಾಗ್ ಕೆರಾನಿಗಂಜ್‌ನ ಪುರ್ಬೋ ನಮಬಾರಿ ಗ್ರಾಮದ ನಿವಾಸಿಯಾಗಿದ್ದು, ಹಳೆಯ ಢಾಕಾದ ರಾಣಿ ಘೋಷ್ ಲೇನ್‌ನಲ್ಲಿ ಹಲವು ವರ್ಷಗಳಿಂದ ಸ್ಕ್ರ್ಯಾಪ್ ವ್ಯವಹಾರ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಕಾನೂನು ಜಾರಿ ಅಧಿಕಾರಿಗಳು ಇದುವರೆಗೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಮೋಹಿನ್ ಮತ್ತು ರಾಬಿನ್ ಅವರನ್ನು ಬಂಧಿಸಿದರೆ, ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್ (RAB) ಅಲಂಗೀರ್ (28) ಮತ್ತು ಮೋನಿರ್ (32) ಅವರನ್ನು ಬಂಧಿಸಿತು’’ ಎಂದು ಹೇಳಲಾಗಿದೆ.
ಹುಡುಕಾಟದ ಸಮಯದಲ್ಲಿ ನಮಗೆ ಬಾಂಗ್ಲಾದೇಶ ಸರ್ಕಾರ (ಮುಖ್ಯ ಸಲಹೆಗಾರ) ಫ್ಯಾಕ್ಟ್‌ಚೆಕ್ ತಪಾಸಣೆ ವಿಭಾಗ, ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಸಾವನ್ನಪ್ಪಿದ ವ್ಯಕ್ತಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ ಹಿಂದೂ ಎಂದು ತಪ್ಪಾಗಿ ಭಾರತೀಯ ಹಲವು ಮಾಧ್ಯಮಗಳು ಹಂಚಿಕೊಂಡಿದ್ದು ಇದು ಸುಳ್ಳು ಎಂದು ಹೇಳಿದೆ. ‘‘ಲಾಲ್ ಚಂದ್ ಅಲಿಯಾಸ್ ಸೋಹಾಗ್ ಮುಸ್ಲಿಂ, ಆತನ ತಂದೆ-ತಾಯಿಯ ಹೆಸರುಗಳು ಎಂಡಿ ಅಯ್ಯುಬ್ ಅಲಿ, ಅಲಿಯಾ ಬೇಗಂ’’ ಎಂದು ಬಂಗ್ಲಾದೇಶ ಸರ್ಕಾರಿ ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಬಿಂಬಿಸುತ್ತಿರುವ ವೈರಲ್ ಪೋಸ್ಟ್ ಸುಳ್ಳು .
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ತಮಿಳುನಾಡಿನಲ್ಲಿ ನಡೆದ ಹಳೆಯ ಘಟನೆಯನ್ನು ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೆ

