FACT CHECK | ಜಡ್ಜ್ವೊಬ್ಬರು ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ನಿಜವೇ?
ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮಂಗಳವಾರ ಲಕ್ನೋದ ವಿಶೇಷ ಸಂಸದ-ಶಾಸಕ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ, ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆಯಲು ಆದೇಶಿಸಿತು ಆದರೆ ಜಾಮೀನು ಅರ್ಜಿಯನ್ನು ಸ್ವೀಕರಿಸಿದ ನಂತರ ಅವರನ್ನು ಬಿಡುಗಡೆ ಮಾಡಿತು. ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಯವರ ಹಾಜರಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ನ್ಯಾಯಾಧೀಶರು ಸ್ವತಃ ರಾಹುಲ್ ಗಾಂಧಿಯವರ ಅಭಿಮಾನಿಯಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕರಿ ಕೋಟು ತೊಟ್ಟಿರುವ ವ್ಯಕ್ತಿಯೊಬ್ಬರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಚಿತ್ರವು ಸಾಮಾಜಿಕ ಪ್ರಸಾರವಾಗುತ್ತಿದ್ದು, ಪ್ರಕರಣವೊಂದರ ವಿಚಾರಣೆಗೆಂದು ಉತ್ತರ ಪ್ರದೇಶದ ಲಖನೌ ನ್ಯಾಯಾಲಯಕ್ಕೆ ಬಂದಿದ್ದ ಪ್ರತಿವಾದಿಯೊಂದಿಗೆ (ರಾಹುಲ್ ಗಾಂಧಿ) ನ್ಯಾಯಾಧೀಶರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸೇರಿದಂತೆ ಹಲವರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲಿಸಲು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಎಬಿಪಿ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದು ಲಭ್ಯವಾಗಿದೆ. ಅದರಲ್ಲಿ “ರಾಹುಲ್ ಗಾಂಧಿ ಅವರ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಧೀಶರಾದ ಅಲೋಕ್ ವರ್ಮಾ ಅವರ ಪೀಠದಲ್ಲಿ ನಡೆದಿತ್ತು, ವೈರಲ್ ಫೋಟೋದಲ್ಲಿರುವುದು ನ್ಯಾಯಾಧೀಶರಲ್ಲ ಬಾರಾಬಂಕಿ ಜಿಲ್ಲೆಯ ನಿವಾಸಿ ಹಾಗೂ ವಕೀಲ ಸೈಯದ್ ಮಹಮೂದ್ ಹಸನ್ ಎನ್ನಲಾಗಿದೆ. ಅವರು 2006 ರಿಂದ ಲಕ್ನೋ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಕುರಿತು NDTV ಕೂಡ ವರದಿಯನ್ನು ಮಾಡಿದ್ದು, ಈ ಸುದ್ದಿ ಸಂಸ್ದ ವೈರಲ್ ಆಗಿರುವ ಫೋಟೋ ಬಗ್ಗೆ ಸೈಯದ್ ಮಹಮೂದ್ ಹಸನ್ ಅವರನ್ನು ಸಂಪರ್ಕಿಸಿದ್ದು, ಈ ವೇಳೆ ಸೈಯದ್ ಮಹಮೂದ್ ಅವರು “ರಾಹುಲ್ ಗಾಂಧಿ ಅವರು ಕೋರ್ಟ್ಗೆ ಬಂದ ಸಮಯದಲ್ಲಿ ಸಮಯದಲ್ಲಿ ಅನೇಕ ವಕೀಲರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಆದ್ದರಿಂದ ನಾನು ಕೂಡ ಒಂದನ್ನು ತೆಗೆದುಕೊಂಡೆ” ಎಂದು ಹೆಳಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋದಲ್ಲಿ ಇರುವವರು ನ್ಯಾಯಾಧೀಶರಲ್ಲ ವಕೀಲರು ಎಂಬುದು ಸ್ಪಷ್ಟವಾಗಿದೆ.

ಈ ಸಂಬಂಧ ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ, ವಕೀಲ ಪ್ರದೀಪ್ ಸಿಂಗ್ ಅವರು ಸ್ಪಷ್ಟೀಕರಣ ನೀಡಿದ್ದು, ಚಿತ್ರದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವವರು ನ್ಯಾಯಾಧೀಶರಲ್ಲ; ಅವರು ವಕೀಲ ಸೈಯದ್ ಮಹಮೂದ್ ಹಸನ್ ಎಂದಿದ್ದಾರೆ. ಕಾಂಗ್ರೆಸ್ ಮುಖಂಡರಾಗಿರುವ ಸುಪ್ರಿಯಾ ಶ್ರೀನೆತ್ ಅವರು ಪೋಸ್ಟ್ ಹಂಚಿಕೊಂಡಿರುವ ಅಮಿತ್ ಮಾಳವೀಯ ಅವರ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದಿದ್ದಾರೆ. ಈ ಬಗ್ಗೆ ವಕೀಲರಾದ ಸೈಯದ್ ಮಹಮೂದ್ ಹಸನ್ ಅವರೂ ಸ್ಪಷ್ಟೀಕರಣ ನೀಡಿದ್ದು, ತಾವು ನ್ಯಾಯಾಧೀಶ ಅಲ್ಲ ಎಂದು ತಿಳಿಸಿರುವುದಾಗಿ ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಯವರ ಹಾಜರಾಗುವ ವೇಳೆ ನ್ಯಾಯಾಧೀಶರೊಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂಬುದು ಸುಳ್ಳು. ಸೆಲ್ಫಿ ತೆಗೆದುಕೊಂಡವರು ವಕೀಲರಾಗಿದ್ದು, ಸುಳ್ಳು ಮಾಹಿತಿಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲ್ಲಲಾಗಿದೆಯೇ?

