ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಮುತ್ತುಗಳು ಉದುರಿಸುವ ಮುತ್ಯಾಲಮಡು ಪಾಲ್ಸ್
ಕಾನನದ ನಡುವೆ ಬೆಟ್ಟಗುಡ್ಡಗಳ ಮಡಿಲಿನಲ್ಲಿ ಜುಳು ಜುಳು ಹರಿಯುವ ಜಲಪಾತ. ಬೆಟ್ಟದ ಮೇಲಿಂದ ಮುತ್ತಿನ ಹನಿಗಳಂತೆ ನೀರು ಪ್ರಪಾತಕ್ಕೆ ದುಮ್ಮಿಕ್ಕುವ ಇಲ್ಲಿನ ಪ್ರಕೃತಿ ಸೌಂದರ್ಯ ಎಂತಹವರನ್ನು ತನ್ನತ್ತ ಸೆಳೆಯುತ್ತದೆ. ಆದ್ರೆ ನಯನ ಮನೋಹರ ಪ್ರಕೃತಿ ತಾಣ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣಕ್ಕೆ ಕೇವಲ 8 ಕಿ. ಮಿ ದೂರದಲ್ಲಿರುವ ಮುತ್ಯಾಲಮಡು ಜಲಪಾತ ಕಾಡಿನ ನಡುವೆ ಕಂಗೊಳಿಸುತ್ತಿದೆ. ಬೆಟ್ಟಗುಡ್ಡಗಳ ನಡುವೆ ಹರಿದು ಪ್ರಪಾತಕ್ಕೆ ಮುತ್ತಿನ ಹನಿಗಳಂತೆ ನೀರಿನ ಹನಿ ಉದುರುವುದು ಇಲ್ಲಿನ ಜಲಪಾತದ. ಎತ್ತ ನೋಡಿದ್ರು ಹಚ್ಚ ಹಸಿರು. ಪ್ರಾಣಿ ಪಕ್ಷಿಗಳ ಕಲರವ. ಇಷ್ಟೆಲ್ಲಾ ವಿಶೇಷತೆಗಳಿರುವ ಮುತ್ಯಾಲ ಮಡು ತಾಣ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಪ್ರವಾಸಿಗರು ಇತ್ತ ಬರಲು ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಇಲ್ಲಿಗೆ ಆಗಮಿಸಿದ್ದ ಪ್ರವಾಸಿ ದೇವೇಶ್.
ಹಚ್ಚ ಹಸಿರಿನ ಮರ ಗಿಡ ಬೆಟ್ಟ ಗುಡ್ಡಗಳ ನಡುವೆ ಶಾಂತವಾಗಿ ಹರಿಯುವ ಮುತ್ಯಾಲಮಡು ಜಲಪಾತ ಕಣ್ತಂಬಿಕೊಳ್ಳಲು ನಿತ್ಯಾ ನೂರಾರು ಪ್ರವಾಸಿಗರು ಆಗಮಿಸ್ತಾರೆ.ಪ್ರಕೃತಿ ನಡುವೆ ಸ್ವಚ್ಚಂದವಾಗಿ ವಿರಮಿಸಲು ಪ್ರೇಮಿಗಳು, ಸ್ನೇಹಿತರೊಂದಿಗೆ ಕಾಡು, ಬೆಟ್ಟಗುಡ್ಡಗಳಲ್ಲಿ ಅಡ್ಡಾಡಿ ಎಂಜಾಯ್ ಮಾಡಲು ಪಡ್ಡೆ ಹೈಕಳು, ಜಂಜಾಟದಿಂದ ವಿಶ್ರಾಂತಿಗಾಗಿ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರು ಕುಡಿಯಲು ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಊಟ ಉಪಹಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ರಕ್ಷಣೆ ಕೂಡ ಇಲ್ಲದಾಗಿದೆ ಎಂದು ಪ್ರವಾಸಿ ಕಿರಣ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾನನದ ನಡುವೆ ಕಂಗೊಳಿಸುತ್ತಿರುವ ಪ್ರಸಿದ್ದ ಪ್ರವಾಸಿ ತಾಣ ಮುತ್ಯಾಲಮಡುವನ್ನು ಅಭಿವೃದ್ಧಿಪಡಿಸಿದ್ರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ಮುತ್ತುಗಳ ಹನಿ ಸುರಿಸುವ ಮುತ್ಯಾಲಮಡು ಮೂಲಭೂತ ಸೌಕರ್ಯಗಳಿಲ್ಲದೆ ಬರಿದಾಗಿದ್ದು, ಇನ್ನಾದ್ರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

