ಭಾರೀ ಸದ್ದು ಮಾಡ್ತಿದೆ ಉತ್ತರ ಕರ್ನಾಟಕದ ಭಾಷೇಯಲ್ಲೇ ನಿರ್ಮಾಣಗೊಂಡ ‘ರುದ್ರಿ’ ಚಿತ್ರ…
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ.. ಹಾಗೆಯೇ ನೂತನ ಚಿತ್ರಗಳು ,ತಂತ್ರಜ್ಞರು ಇತ್ತೀಚೆಗೆ ರಾಷ್ಟಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಪ್ರಪ್ರಥಮವಾಗಿ ಉತ್ತರಕರ್ನಾಟಕ ಭಾಗದಲ್ಲೇ ಸಂಪೂರ್ಣವಾಗಿ ಚಿತ್ರೀಕರಣಗೊಂಡು, ಉತ್ತರ ಕರ್ನಾಟಕದ ಭಾಷೇಯಲ್ಲೇ ಸಂಪೂರ್ವವಾಗಿ ನಿರ್ಮಾಣವಾಗಿರುವ ಚಿತ್ರ ರುದ್ರಿ…
ರುದ್ರಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಸಂಪೂರ್ಣವಾಗಿ ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣಗೊಂಡ, ವಿಭಿನ್ನ ಸಿನಿಮಾ ರುದ್ರಿಯ ಫಸ್ಟ್ ಲುಕ್‍ನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅನಾವರಣಗೊಳಿಸಿದರು. ಪಿಆರ್‍ಕೆ ಪ್ರೊಡಕ್ಷನ್ಸ್‍ನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರುದ್ರಿಯ ವಿಭಿನ್ನ ಪೋಸ್ಟರ್ ಲಾಂಚ್ ಮಾಡಿದರು.

ಫಸ್ಟ್ ಲುಕ್ ಅನಾವರಣಗೊಳಿಸಿದ ಪುನೀತ್ ಪೋಸ್ಟರ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೊಸಬರು ಚಿತ್ರರಂಗಕ್ಕೆ ಬರುತ್ತಿರುವುದು ಸಂತಸದ ಸಂಗತಿ. ರುದ್ರಿ ಪೋಸ್ಟರ್ ತುಂಬಾ ಪ್ರಾಮಿಸಿಂಗ್ ಆಗಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುವುದು ವಿಶೇಷ. ಸಂಪೂರ್ಣವಾಗಿ ಉತ್ತರ ಕರ್ನಾಟಕದಲ್ಲೇ ಚಿತ್ರವನ್ನ ಚಿತ್ರೀಕರಿಸಲಾಗಿದೆಯಂತೆ. ಹಾಗೆಯೇ ಪಿರಿಯಾಡಿಕ್ ಕೂಡಾ ಚಿತ್ರದ ಹೈಲೈಟ್. ರುದ್ರಿ ಪ್ರಯೋಗಾತ್ಮಕ ಚಿತ್ರ ಅನ್ನೋದು ಹೆಮ್ಮೆಯ ಸಂಗತಿಯಾಗಿದ್ದು, ಚಿತ್ರಕ್ಕೆ ಹೆಚ್ಚು ಜನ ಮನ್ನಣೆ ಸಿಗಲಿ, ನಿರ್ದೇಶಕ, ನಿರ್ಮಾಪಕರಿಗೆ ಗೆಲುವು ಸಿಗಲಿ”, ಎಂದು ಹೇಳಿದರು.
ನಿರ್ದೇಶಕ ಬಡಿಗೇರ ದೇವೇಂದ್ರ, ಚಿತ್ರದ ಕುರಿತು ಮಾತನಾಡುತ್ತಾ, “ನಾನು ಮೂಲತಃ ಉತ್ತರ ಕರ್ನಾಟಕದವನು. ಹೀಗಾಗಿ ಆ ಭಾಗದ ಮಹಿಳೆಯರ ಬದುಕಿನ ಹೋರಾಟವನ್ನ ಚಿತ್ರದ ಮೂಲಕ ಅನಾವರಣಗೊಳಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರದಲ್ಲಿ ಕಥೆಗೆ ಹೆಚ್ಚಿನ ಪ್ರಧಾನ್ಯತೆ ಕೊಡಲಾಗಿದ್ದು, ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಚಿತ್ರಿಕರಿಸಿದ್ದೇವೆ. ಹೆಣ್ಣು ಎಲ್ಲಾ ಸಮಯದಲ್ಲಿಯತೂ ಅಬಲೆಯಲ್ಲ. ಸಂದರ್ಭ ಬಂದರೆ ವ್ಯವಸ್ಥೆಯ ವಿರುದ್ಧ ತನಗಾದ ಅನ್ಯಾಯದ ವಿರುದ್ಧ ಸಿಡಿದೇಳಬಲ್ಲಳು ಎಂಬುದನ್ನ ಈ ಚಿತ್ರದಲ್ಲಿ ಹೇಳಿದ್ದೇವೆ”, ಎಂದರು.
ಚಿತ್ರದ ನಿರ್ಮಾಪಕ ಸಿ ಆರ್ ಮಂಜುನಾಥ ಮಾತನಾಡಿ, “ರುದ್ರಿ ಸಂಪೂರ್ಣವಾಗಿ ಒಂದು ವಿಭಿನ್ನ ಚಿತ್ರ. ಈವರೆಗೂ ಯಾರೂ ಸೆರೆ ಹಿಡಿಯದ ಸ್ಥಳಗಳಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ. ಸಂಪೂರ್ಣವಾಗಿ ಉತ್ತರ ಕರ್ನಾಟಕದಲ್ಲೇ ಚಿತ್ರಿಸಿದ್ದು, ಅಲ್ಲಿನ ನೆಟಿವಿಟಿಯನ್ನ ಚಿತ್ರದಲ್ಲಿ ಸಂಪೂರ್ಣವಾಗಿ ಬಳಸಿಕೊಂಡಿದ್ದೇವೆ. ದೇವೇಂದ್ರ ಬಡಿಗೇರ ಅವರ ಸತ್ವವುಳ್ಳ ಕಥೆ ಚಿತ್ರದ ಅತೀ ದೊಡ್ಡ ಹೈಲೈಟ್,” ಎಂದು ಹೇಳಿದರು.
ಇದೊಂದು ಮಹಿಳಾ ಪ್ರಾಧಾನ್ಯ ಚಿತ್ರವಾಗಿದ್ದು, ಪಾವನಾ ಗೌಡ ಮುಖ್ಯ ಪಾತ್ರ ರುದ್ರಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಕೋಕಿಲಾ ಸಾಧು ಸಂಗೀತ ಒದಗಿಸಿದ್ದು, ಚಿತ್ರದಲ್ಲಿ ಒಂದು ಹಾಡಿಗೆ ಕೂಡಾ ಹಿನ್ನೆಲೆ ಗಾಯನ ನೀಡಿದ್ದಾರೆ.

ಟ್ರೇಲರ್ ಬಿಡುಗಡೆ
ಹೆಣ್ಣುಮಗಳ ದೌರ್ಜನ್ಯದ ಕಥೆಯನ್ನು ಹೇಳುವ ರುದ್ರಿ ಸಿನಿಮಾದ ಟ್ರೇಲರ್ ನ್ನು ನಗರದ ಕಾನ್ರಾಡ್ ಹೋಟೆಲ್‍ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.
ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ರೇಣುಕಾ ಯೋಗರಾಜ್ ಭಟ್, “ರುದ್ರಿ ಅಂದ್ರೆ ನೆನಪಾಗೋದು ಕೋಪ. ಆಕೆಗೆ ಆದ ಅನ್ಯಾಯದ ವಿರುದ್ಧ ಅವಳು ಹೋರಾಡುವ ರೀತಿ ನಿಜಕ್ಕೂ ಮನಕಲಕುತ್ತದೆ’ ಎಂದು ಅವರು ಹೇಳಿದರು.
ಲಹರಿ ಸಂಸ್ಥೆಯ ವೇಲು ಅವರು ಮಾತನಾಡಿ, “ಸಿನಿಮಾದ ಕಥೆ ಮನಸ್ಸು ತಟ್ಟುವಂತಿದೆ. ನಮ್ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ಆದರೆ ವಿಕೃತ ಮನೋಭಾವದವರು ಕೂಡ ಸಮಾಜದಲ್ಲಿ ಇರೋದು ವಿಪರ್ಯಾಸ. ಬೇರೆ ಹೆಣ್ಣುಮಕ್ಕಳನ್ನು ನೋಡುವಾಗ, ಅವರು ನಿಮ್ಮ ತಾಯಿ, ತಂಗಿ, ಅಕ್ಕನ ರೀತಿ ಕಾಣುತ್ತಾರಾ ಎಂದು ಒಮ್ಮೆ ನೋಡಿ, ಹೈದರಾಬಾದ್ ಘಟನೆ ಬಳಿಕ ಆರೋಪಿಗಳ ಮೇಲೆ ಶೂಟೌಟ್ ಆಯಿತು. ಇಂತಹ ಕ್ರೂರ ಘಟನೆಯನ್ನೂ ನಾವು ಸಂಭ್ರಮಿಸುವ ಸ್ಥಿತಿ ಎದುರಾಯಿತು’ ಎಂದರು.
ವಾರ್ತಾಇಲಾಖೆ ಆಯುಕ್ತರಾದ ಸಿದ್ದರಾಮಪ್ಪ ಮಾತನಾಡಿ, “ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಿನಿಮಾ ಕೂಡ ಅಂತದ್ದೇ ಕಥೆಯನ್ನು ಹೊಂದಿದೆ. ಪಾವನಾ ಅವರು ಅತ್ಯುತ್ತಮವಾಗಿ ನಟಿಸಿದ್ದಾರೆ. ಟ್ರೇಲರ್ ಕೂಡ ಭರವಸೆ ಹುಟ್ಟಿಸುವಂತಿದೆ. ಸಮಾಜದ ಅಂಕುಡೊಂಕುಗಳನ್ನು ಸಿನಿಮಾ ತೋರಿಸಿದೆ’ ಎಂದರು.

ಮಿಷನ್ ಮಂಗಲ್ ಸಿನಿಮಾದ ನಿರ್ದೇಶಕ ಜಗನ್ ಶಕ್ತಿ ಮಾತನಾಡಿ, “ಈ ಸಿನಿಮಾ, ಯಾವುದೇ ಭಾಷೆಯ ಚೌಕಟ್ಟಿಗೆ ಒಳಪಟ್ಟಿಲ್ಲ. ದೇಶದ ಎಲ್ಲಾ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಬೇಕೆಂಬುದು ನನ್ನ ಆಸೆ. ತುಂಬಾ ಪರಿಣಾಮಕಾರಿಯಾಗಿ ಚಿತ್ರ ಮೂಡಿಬಂದಿರುವುದು ಟ್ರೇಲರ್ ನೋಡಿದರೆ ಮನವರಿಕೆಯಾಗುತ್ತದೆ’ ಎಂದರು.
ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, “ಪೋಸ್ಟರ್ ನೋಡಿದಾಗಲೇ ಈ ಸಿನಿಮಾದಲ್ಲಿ ಏನೋ ಹೊಸತನ ಇದೆ ಎನಿಸಿತ್ತು. ಟ್ರೇಲರ್ ನೋಡಿದಮೇಲೆ ಇನ್ನಷ್ಟು ಭರವಸೆ ಹುಟ್ಟಿದೆ’ ಎಂದರು.
ರುದ್ರಿ ಸಿನಿಮಾದ ನಿರ್ದೇಶಕ ಬಡಿಗೇರ್ ದೇವೇಂದ್ರ ಮಾತನಾಡಿ, “ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅವರು ಅದನ್ನು ಅದಮಿಟ್ಟುಕೊಳ್ಳುವುದೇ ಹೆಚ್ಚು. ಈ ರೀತಿಯ ನೈಜ ಘಟನೆಗಳು ಈ ಸಿನಿಮಾಕ್ಕೆ ಸ್ಪೂರ್ತಿ. ಗೊಂಬೆಗಳ ಲವ್ ಸಿನಿಮಾ ನೋಡಿದ್ದೆ. ಪಾವನಾ ತುಂಬಾ ಪ್ರಬುದ್ಧವಾಗಿ ಅಭಿನಯಿಸಿದ್ದರು. ಅವರೇ ಈ ಸಿನಿಮಾದಲ್ಲೂ ನಟಿಸಬೇಕು ಎಂದು ಮೊದಲೇ ನಿರ್ಧರಿಸಿದ್ದೆ’ ಎಂದರು.

ನಿರ್ಮಾಪಕ ಸಿ.ಆರ್.ಮಂಜುನಾಥ್ ಮಾತನಾಡಿ, “ವ್ಯಾವಹಾರಿಕ ದೃಷ್ಟಿಯಿಂದ ಈ ಸಿನಿಮಾ ಮಾಡಿಲ್ಲ. ಸಿನಿಮಾ ಇಂಡಸ್ಟ್ರಿಗೆ ಹೊಸ ಕಥೆ, ಹೊಸ ಮೇಕರ್ಸ್ ಕೊಡುವ ಉದ್ದೇಶ ಇತ್ತು’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮಿಸೆಸ್ ಏಷ್ಯಾ ಪ್ರತಿಭಾ ಸಂಶಿಮಠ, ನಟ ಕಿಶೋರ್, ನಿರೂಪಕ ಅಕುಲ್ ಬಾಲಾಜಿ, ಭಿನ್ನ ಸಿನಿಮಾ ನಿರ್ಮಾಪಕ ಶ್ರೀನಿವಾಸ್, ನಿರ್ಮಾಪಕ ಸಿ.ಆರ್.ಮನೋಹರ್, ಆನಂದ್ ಆಡಿಯೋ ಮುಖ್ಯಸ್ಥ ಶ್ಯಾಮ್, ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್‍ಎಸ್ ರೆಡ್ಡಿ, ಎಂಸಿ ಆಂಡ್ ಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟೇಶ್, ಸುಧಾಮೂರ್ತಿ ಅವರ ಸಹೋದರಿ ಡಾ. ಸುನಂದಾ ಕುಲಕರ್ಣಿ, ಮೀಡಿಯಾ ಕನೆಕ್ಟ್ ಸಿಇಒ ದಿವ್ಯಾ ಇದ್ದರು.
ಭಾವುಕರಾದ ಪಾವನಾ :-
ಮಹಿಳಾ ಪ್ರಧಾನ ಚಿತ್ರ. ಅದರಲ್ಲೂ ಹೆಣ್ಣುಮಕ್ಕಳ ಮೇಲಿನ ಕಾಳಜಿಯಿಂದ ನಿರ್ಮಾಣವಾದ ಈ ಸಿನಿಮಾಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹದ ಅಗತ್ಯವಿದೆ. ಎಲ್ಲಾ ಚಿತ್ರಗಳಿಗೂ ಒಂದೇ ರೀತಿಯ ಗೌರವ, ಪ್ರೀತಿ ಸಿಗಲಿ, ಕೊನೇಪಕ್ಷ 2020ರಲ್ಲಿಯಾದರೂ ಕೆಲವು ಮನಸ್ಥಿತಿಗಳು ಬದಲಾಗಲಿ ಎಂದು ಹೇಳಿದ ಪಾವನಾ ಭಾವುಕರಾದರು.
“ನಾವು ಕಥೆಯನ್ನು ಹಾಗೂ ಸಿನಿಮಾವನ್ನು ನಮ್ಮ ಮಗು ಎಂದೇ ಭಾವಿಸಿ ಪ್ರೀತಿಸಿರುತ್ತೇವೆ. ಅಷ್ಟೇ ಶ್ರಮಹಾಕಿ ಇಂತದ್ದೊಂದು ನೈಜ ಘಟನೆ ಆಧಾರಿತ ಸಿನಿಮಾವನ್ನು ನಿಮ್ಮ ಮುಂದಿಡುತ್ತಿದ್ದೇವೆ’ ಎಂದು ಅವರು ಹೇಳಿದರು.

“ವುಮೆನ್ ಎಂದು ಗೂಗಲ್ ಮಾಡಿದರೆ, ಅತ್ಯಾಚಾರದ ಪ್ರಕರಣಗಳನ್ನೇ ಹೆಚ್ಚಾಗಿ ಗೂಗಲ್ ತೋರಿಸುತ್ತದೆ. ಹೆಣ್ಣು ಮತ್ತೆ ಅಬಲೆಯಾಗುವ ದಿಕ್ಕಿನೆಡೆ ಸಾಗುತ್ತಿದ್ದಾಳಾ ಎಂಬ ಭಯ ಶುರುವಾಗುತ್ತದೆ’ ಎಂದರು.
“ರುದ್ರಿ ಸಿನಿಮಾ, ನನ್ನ ಜೀವನದ ಭಾವನಾತ್ಮಕ ಪಯಣ. ಈ ಸಿನಿಮಾದಲ್ಲಿ ದೌರ್ಜನ್ಯದ ಘಟನೆಯೊಂದನ್ನು ಚಿತ್ರೀಕರಿಸಬೇಕಾಗುತ್ತದೆ. ಕಥೆ ಕೂಡ ಅದನ್ನು ಬೇಡುತ್ತದೆ. ಆದರೆ ನನಗೆ ಆ ದೃಶ್ಯವನ್ನು ಚಿತ್ರೀಕರಿಸಲು ಸಾಧ್ಯವೇ ಆಗಲಿಲ್ಲ. ಆ ಸ್ಥಳದಿಂದ ಹೊರಗೆಬಂದುಬಿಟ್ಟೆ. ಆಗದಿದ್ದರೆ ಬೇಡ ಎಂದು ನಿರ್ದೇಶಕರು ಕೂಡ ಹೇಳಿದರು. ಆದರೆ ಸಿನಿಮಾ ದೃಷ್ಟಿಯಿಂದ ಮಾಡಿದೆ. ಅಪರಿಚಿತ ವ್ಯಕ್ತಿಯೊಬ್ಬರು ನಮ್ಮನ್ನು ಮುಟ್ಟುತ್ತಾರೆ ಅಂದಾಗ ಮನಸ್ಸಿಗೆ ಆಗುವ ಹಿಂಸೆಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಇಂತದ್ದೊಂದು ದೃಶ್ಯವನ್ನು ನಾವು ಚಿತ್ರೀಕರಿಸಲು 30 ದಿನ ತೆಗೆದುಕೊಂಡಿದ್ದೇವೆ’ ಎಂದು ಭಾವುಕರಾದರು.
https://www.youtube.com/watch?v=PBKbQ_lzgJY

