ಬಿಜೆಪಿ ಮುಖಂಡರ ದ್ವೇಷ ಪ್ರಚೋದನೆ ಭಾಷಣ: ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ತಮ್ಮ ದ್ವೇಷಪೂರಿತ ಭಾಷಣದಿಂದ ಕರೆಕೊಟ್ಟರು ಎಂದು ಆರೋಪಿಸಲಾಗಿರುವ ಬಿಜೆಪಿ ಮುಖಂಡರ ವಿರುದ್ಧ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ, ವಿಚಾರಣೆ ನಡೆಯಲಿದೆ. ಈ ಹಿಂಸಾಚಾರದಲ್ಲಿ ಕನಿಷ್ಟ 48 ಜನ ಪ್ರಾಣ ಕಳೆದುಕೊಂಡಿದ್ದು, ಸಂತ್ರಸ್ತರ ಬಂಧುಗಳು ಕೋರ್ಟ್ ಮೊರೆ ಹೋಗಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಕೋರ್ಟ್ ಆವರಣದಲ್ಲಿಯೇ ಬಿಜೆಪಿ ಮುಖಂಡರ ಪ್ರಚೋದನಕಾರಿ ಭಾಷಣದ ವಿಡಿಯೋವನ್ನು ತೋರಿಸಿ, ಅವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು. ಆದರೆ ಅಂದೇ ರಾತ್ರಿ ನ್ಯಾಯಮೂರ್ತಿ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ನಂತರ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಕ್ರಮ ತೆಗೆದುಕೊಳ್ಳಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು.

ಕೇಂದ್ರ ಸರ್ಕಾರದ ನಾಗರಿಕ ಕಾಯ್ದೆ ತಿದ್ದುಪಡಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಜರುಗುತ್ತಿದ್ದು, ದೆಹಲಿಯ ಶಹೀನ್ ಭಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ದೇಶದಾದ್ಯಂತ ಗಮನ ಸೆಳೆದಿದೆ. ಪ್ರತಿಭಟನಕಾರರ ಜೊತೆಗೆ ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ಇಬ್ಬರನ್ನು ನೇಮಿಸಿತ್ತು. ಸಂಧಾನದ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದೆ.

ದೆಹಲಿಯಲ್ಲಿ ಸಿ ಎ ಎ ವಿರುದ್ಧವಾಗಿ ನಡೆಯುತ್ತಿರುವ ಚಳುವಳಿಗಳು ಆಡಳಿತ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿದೆ. ಸಂಧಾನಕ್ಕೆ ಅಥವಾ ಚರ್ಚೆಗೆ ಆಸ್ಪದ ಕೊಡದ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೆ ಕಾಯ್ದೆಯನ್ನು ಹಿಂಪಡೆಯುವುದಿಲ್ಲ ಎಂದು ಪುನರುಚ್ಚರಿಸುತ್ತಾ ಬಂದಿದೆ. ಸಿ ಎ ಎ ವಿರೋಧಿ ಮತ್ತು ಸಿ ಎ ಎ ಪರವಾದ ಗುಂಪುಗಳ ನಡುವೆ ಕಳೆದ ವಾರ ನಡೆದ ಈಶಾನ್ಯ ದೆಹಲಿ ಘರ್ಷಣೆಗಳಲ್ಲಿ 1400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, 400 ಹೆಚ್ಚು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights