ರಾಜಕೀಯ ಚಟುವಟಿಕೆ, ವೈಯಕ್ತಿಕ ಸ್ವಾತಂತ್ರ್ಯದ ಭಾಗ; ವಿದೇಶಿಯರಿಗೂ 21ನೇ ವಿಧಿ ಅನ್ವಯಿಸುತ್ತದೆ: ಹೈಕೋರ್ಟ್
ಸಿ ಎ ಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ, ದೇಶ ತೊರೆಯುವಂತೆ ಪೋಲೆಂಡ್ ವಿದ್ಯಾರ್ಥಿಗೆ ವಿದೇಶಿ ಪ್ರಾದೇಶಿಕ ನೊಂದಣಿ ಕಚೇರಿ ನೀಡಿದ್ದ ನೋಟಿಸ್ ಅನ್ನು ಕಲ್ಕತ್ತ ಹೈಕೋರ್ಟ್ ವಜಾ ಮಾಡಿತ್ತು. ಜಾಧವಪುರ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ಈ ಪೋಲಿಶ್ ನಾಗರಿಕನಿಗೆ ಕೊಟ್ಟಿರುವ ನೋಟಿಸ್ ಜಾರಿ ಮಾಡದಂತೆ ನ್ಯಾಯಮೂರ್ತಿ ಸಭ್ಯಸಾಚಿ ಭಟ್ಟಾಚಾರ್ಯ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದರು.
“ಪ್ರಸಕ್ತ ಪ್ರಕರಣದಲ್ಲಿ, ಅರ್ಜಿದಾರನಿಗೆ ಕೇಂದ್ರ ಸರ್ಕಾರ ವೀಸಾ ಕೊಟ್ಟಿರುವುದರಿಂದ, ಸಂವಿಧಾನದಲ್ಲಿ 21ನೇ ವಿಧಿಯ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನ್ವಯವಾಗುತ್ತದೆ. ಇದು ಭಾರತದ ನೆಲದಲ್ಲಿ ಬದುಕುತ್ತಿರುವ ಎಲ್ಲರಿಗೂ ಅನ್ವಯವಾಗುತ್ತದೆ” ಎಂದು ನ್ಯಾಯಾಧೀಶ ಸಭ್ಯಸಾಚಿ ಭಟ್ಟಾಚಾರ್ಯ ಹೇಳಿದ್ದಾರೆ.
ಪೋಲೆಂಡಿನ ವಿದ್ಯಾರ್ಥಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡದೆ ದೇಶ ತೊರೆಯುವ ಆದೇಶ ನೀಡಿದ್ದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ” ಸರ್ಕಾರಕ್ಕೆ ಏನೇ ಅಧಿಕಾರ ಇರಲಿ, ಅರ್ಜಿದಾರನ ಹಕ್ಕುಗಳನ್ನು ಮೊಟುಕುಗೊಳಿಸುವುದಕ್ಕೆ ನಿಜವಾದ ಕಾರಣಗಳನ್ನು ನೀಡುವುದು ಮುಖ್ಯ. ಭಾರತದಂತಹ ಪ್ರಜಾಪ್ರಭುತ್ವದಲ್ಲಿ, ಅಧಿಕಾರದ ಹಕ್ಕುಗಳು ಅನಿಯಂತ್ರತವಾಗಿ ಮತ್ತು ನಿರಂಕುಶವಾಗಿರಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ನಮೂದಿಸಿರುವ ಮೂಲಭೂತ ಹಕ್ಕುಗಳು ಭಾರ್ತೀಯ ನಾಗರಿಕರಿಗಷ್ಟೆ ಅನ್ವಯವಾಗುತ್ತವೆ ಎಂದಲ್ಲ ಅವುಗಳು ಭಾರತದ ನೆಲದಲ್ಲಿ ನೆಲೆಸಿರುವ ವಿದೇಶಿಯರಿಗೂ ಅನ್ವಯವಾಗುತ್ತವೆ” ಎಂದು ಕೋರ್ಟ್ ಹೇಳಿದೆ.
ಜಾಧವಪುರ ವಿಶ್ವವಿದ್ಯಾಲಯದ ತುಲನಾತ್ಮಕ ಸಾಹಿತ್ಯ ವಿಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ಕಾಮಿಲ್ ಸೀಡ್ಜಿನ್ಕಿ ಅವರಿಗೆ ಭಾರತ ತೊರೆಯುವಂತೆ ವಿದೇಶಿ ಪ್ರಾದೇಶಿಕ ನೊಂದಣಿ ಕಲ್ಕತ್ತ ಕಚೇರಿ ಫೆಬ್ರವರಿ 14 ರಂದು ನೋಟಿಸ್ ನೀಡಿತ್ತು. ಭಾರತದ ಸಂಸತ್ತಿನಲ್ಲಿ ಮಂಜೂರಾಗಿರುವ ಕಾನೂನನ್ನು ವಿರೋಧಿಸುವ ಅಧಿಕಾರ ವಿದೇಶಿಗೆ ಇಲ್ಲವೆಂದು ಕೇಂದ್ರ ಸರ್ಕಾರ ಕೋರ್ಟ್ ನಲ್ಲಿ ವಾದ ಮಂಡಿಸಿತ್ತು
ಸಂವಿಧಾನದ 21ನೇ ವಿಧಿಯಲ್ಲಿ ಇರುವ ಹಕ್ಕುಗಳ ಸಮೂಹದಲ್ಲಿ ರಾಜಕೀಯ ಚಟುವಟಿಕೆಯೂ ಒಂದು ಎಂದು ಕೋರ್ಟ್ ಗಮನಿಸಿದೆ.

