ಶೇಮ್ ಶೇಮ್ ಘೋಷಣೆಗಳ ನಡುವೆ ಗೊಗೋಯ್ ಪ್ರಮಾಣ ವಚನ ಸ್ವೀಕಾರ
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಇಂದು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿದರು. ಗೊಗೋಯ್ ನೇಮಕಾತಿಯು ಅಧಿಕಾರ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯದ ಜೊತೆಗೆ ರಾಜಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ವಿರೋಧಿಸಿ ಪ್ರಮಾಣವಚನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವು.
ಪ್ರಮಾಣವಚನದ ಮಧ್ಯೆ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳ ಸದಸ್ಯರು :”ಶೇಮ್ ಶೇಮ್” ಘೋಷಣೆಗಳನ್ನು ಕೂಗಿ ವಾಕ್ಔಟ್ ಮಾಡಿದರು.
ಕಾಂಗ್ರೆಸ್ ವಾಕ್ಔಟ್ ನಂತರ, “ಅವರು ಶೀಘ್ರದಲ್ಲೇ ನನ್ನನ್ನು ಸ್ವಾಗತಿಸುತ್ತಾರೆ” ಎಂದು ಗೊಗೊಯ್ ಹೇಳಿದರು.
“ರಾಜ್ಯಸಭೆಯು ಮಾಜಿ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಬರುವ ಅನೇಕ ವಿಚಾರವಂತರನ್ನು ಒಳಗೊಳ್ಳುವಸಂಪ್ರದಾಯವನ್ನು ಹೊಂದಿದೆ. ಇಂದು ಪ್ರಮಾಣವಚನ ಸ್ವೀಕರಿಸಿದ ಮಾಜಿ ನ್ಯಾಯಮೂರ್ತಿ ಗೊಗೊಯ್ ಖಂಡಿತವಾಗಿಯೂ ಅವರ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಾರೆ. ಗೊಗೋಯ್ ವಿಚಾರಕ್ಕೆ ಕಾಂಗ್ರೆಸ್ ವಾಕ್ಔಟ್ ಮಾಡಿರುವುದು ಅತ್ಯಂತ ಅಭಾಸಕಾರಿಯಾಗಿದೆ” ಎಂದು ಕಾನೂನು ಮಂತ್ರಿ ರವಿಶಂಕರ್ ಪ್ರಸಾದ್ ಹೇಳಿದರು.

ನೇಮಕಾತಿಗೆ ನಿಯಮಗಳು ಮತ್ತು ಪೂರ್ವನಿದರ್ಶನಗಳಿವೆ. ಪ್ರತಿಪಕ್ಷಗಳು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ರಾಜ್ಯಸಭೆಯ ಅಧ್ಯಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.
ದೇಶದ ಉನ್ನತ ನ್ಯಾಯಾಧೀಶರಾಗಿ ನಾಲ್ಕು ತಿಂಗಳ ಹಿಂದೆಯಷ್ಟೇ ನಿವೃತ್ತರಾದ ರಂಜನ್ ಗೊಗೊಯ್ ಅವರ ಉಪಸ್ಥಿತಿಯು “ನ್ಯಾಯಾಂಗದ ಅಭಿಪ್ರಾಯಗಳನ್ನು ಶಾಸಕಾಂಗದ ಮುಂದೆ ಮತ್ತು ಮಸೂದೆಗಳಲ್ಲಿ ಮಂಡಿಸುವ ಅವಕಾಶವಾಗಲಿದೆ” ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಗೊಗೊಯ್ ಅವರಿಗೆ “ಯಾವುದೇ ಲಜ್ಜೆಯಿಲ್ಲ,” ರಾಜ್ಯಸಭಾ ಸ್ಥಾನಕ್ಕಾಗಿ ನ್ಯಾಯಮೂರ್ತಿಯಾಗಿದ್ದವರು ತಮ್ಮ ಆತ್ಮಸಾಕ್ಷ್ಮಿಯನ್ನು ಮಾರಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಅವರು ನ್ಯಾಯಾಂಗಕ್ಕೆ ಅವಮಾನ ಮಾಡಿದ್ದಾರೆ. ಇಡೀ ಭಾರತವನ್ನು ವಿಶ್ವದ ದೃಷ್ಟಿಯಲ್ಲಿ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಾಹುವಾ ಮಿಯೋತ್ರಾ ಹೇಳಿದರು.
ನ್ಯಾಯಮೂರ್ತಿ ಗೊಗೊಯ್ ಅವರ ನೇಮಕಾತಿಯು ಸಂವಿಧಾನದ ಮೂಲ ರಚನೆಯ ಮೇಲೆ “ಗಂಭೀರ ಮತ್ತು ಕ್ಷಮಿಸಲಾಗದ ಆಕ್ರಮಣ” ಎಂದು ಕಾಂಗ್ರೆಸ್ ಕರೆದಿದೆ.
“ನಮ್ಮ ಸಂವಿಧಾನವು ನ್ಯಾಯಾಂಗ ಮತ್ತು ಕಾರ್ಯಾಂಗದ ಅಧಿಕಾರಗಳನ್ನು ಬೇರ್ಪಡಿಸುವುದನ್ನು ಆಧರಿಸಿದೆ. ನ್ಯಾಯಾಂಗವು ನಂಬಿಕೆ ಮತ್ತು ವಿಶ್ವಾಸಗಳ ಮೇಲೆ ರಚನೆಯಾಗಿದೆ. ಆದರೆ ಅವರೆಲ್ಲರೂ ಸೇರಿ ನ್ಯಾಯಾಂಗದ ಆಶಯಕ್ಕೆ ಧಕ್ಕೆ ತಂದಿದ್ದಾರೆ ” ಎಂದು ಕಾಂಗ್ರೆಸ್ನ ಅಭಿಷೇಕ್ ಮನು ಸಿಂಗ್ವಿ ಮಂಗಳವಾರ ಹೇಳಿದ್ದರು.

