ಲಾಕ್ಡೌನ್ ದಿನಗಳು-1 : …ನನ್ನ ವೈರಿಗೂ ಇಷ್ಟೊಂದು ಪುರಸೊತ್ತು ಬೇಡ…!

“ನಾನ್ ಇವತ್ ಸಿಕ್ಕಾಪಟ್ಟೆ ಬ್ಯೂಸಿ. ರಾತ್ರಿವರೆಗೂ ಕಂಟಿನ್ಯೂಸ್ ಮೀಟಿಂಗ್ ಇವೆ. ಕೆರ್ಕೊಳ್ಳಕ್ಕೂ ಪುರಸೊತ್ತಿಲ್ಲ. ಮನೆಯಿಂದ ಲಂಚ್ ಬಾಕ್ಸ್ ತಂದಿದ್ದೇನೆ. ನಾಲ್ಕು ಗಂಟೆಯಾದರೂ ಓಪನ್ ಮಾಡೋಕಾಗ್ತಿಲ್ಲ. ಸಂಡೇ ಕಾಲ್ ಮಾಡ್ತೀನಿ. ಓಕೇನಾ..?”
ಕೆಲ ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬನಿಗೆ ಕಾಲ್ ಮಾಡಿ ಏನೋ ವಿಚಾರ ಮಾತಾಡಬೇಕು ಅಂದುಕೊಂಡಿದ್ದೆ. ಕಾಲ್ ಮಾಡಿದರೆ, ಆತ ಹೀಗೆ ತನ್ನದೇ ಬ್ಯೂಸಿ ಷೆಡ್ಯೂಲ್ ಬಗ್ಗೆ ಹೇಳಿದಾಗ ಸುಮ್ಮನೇ ಫೋನ್ ಇಟ್ಟಿದ್ದೆ.
ಅದೇ ಗೆಳೆಯನಿಗೆ ಎರಡು ದಿನಗಳ ಹಿಂದೆ ಕಾಲ್ ಮಾಡಿ, “ಏನ್ ದೋಸ್ತ್ ಬ್ಯೂಸಿನಾ? ಬ್ಯೂಸಿ ಇದ್ರೆ ಆಮೇಲೆ ಫೋನ್ ಮಾಡ್ತೀನಿ” ಎಂದೆ. “ನೋ ನೋ ಬ್ಯೂಸಿ ಏನಿಲ್ಲಪಾ, ಹೇಳು ಏನ್ ಸಮಾಚಾರ” ಅಂತ ಕೇಳಿದ. ನಾನು ಸ್ವಲ್ಪ ಹೊತ್ತು ನಮ್ಮ ಕಚೇರಿಯ ಸಮಾಚಾರ ಹೇಳಿ, “ಸರಿ, ಹಾಗಾದರೆ ಇಡಲಾ, ಬೈ” ಎಂದೆ. “ಏಯ್, ಏನ್ ಅಷ್ಟೊಂದು ಅರ್ಜೆಂಟು?, ಮತ್ತೇನ್ ಮನೆಯಲ್ಲಿ ಎಲ್ಲಾರೂ ಆರಾಮ ಇದ್ದಾರಾ? ಮಕ್ಕಳು ಏನ್ ಓದ್ತಾರೆ? ಪೇರೇಂಟ್ಸ್ ಆರೋಗ್ಯ ಹೇಗಿದೆ? ಮನೆಯವರು ಜಾಬ್ ಮಾಡ್ತಾರೋ ಮನೆಯಲ್ಲೇ ಇರ್ತಾರೋ?” ಎಂದೆಲ್ಲಾ ಶುರುವಿಟ್ಟುಕೊಂಡ. ನಾನ್ ಫೋನ್ ಕಟ್ ಮಾಡಲು ಯತ್ನಿಸಿದರೂ ಆತ ಮಾತು ಮುಗಿಸಲು ಸಿದ್ಧವಿಲ್ಲ.


ಇದೆಲ್ಲಾ ಕೊರೋನ ಮಹಾಮಾರಿ ಮಹಿಮೆ. ದೇಶಾದ್ಯಂತ ಜಾರಿಯಲ್ಲಿರುವ 21 ದಿನಗಳ ಲಾಕ್ಡೌನ್ ನ ಪರಿಣಾಮ. ಕೆರ್ಕೊಳ್ಳೋಕೆ ಪುರಸೊತ್ತು ಇಲ್ಲದವರಿಗೆಲ್ಲಾ, “ಅದೆಲ್ಲಿ ಕೆರ್ಕೊಳ್ತಿರೋ, ಎಷ್ಟು ಕೆರ್ಕೊಳ್ತಿರೋ ಕೆರ್ಕೊಳ್ಳಿ” ಎಂದು ಹೇಳಿದಂತಿದೆ ಕೊರೋನ.

ಕೊರೋನ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಸರಕಾರ 21 ದಿನಗಳ ಲಾಕ್ಡೌನ್ ಘೋಷಿಸಿದ ನಂತರ ಈಗ ಸಂಡೆ ಮತ್ತು ಮಂಡೆ ನಡುವೆ ಏನೂ ವ್ಯತ್ಯಾಸವಿಲ್ಲ, ನಿರುದ್ಯೋಗಿಗಳು ಮತ್ತು ಕೈಯಲ್ಲಿ ನೌಕರಿ ಇರುವವರ ನಡುವೆಯೂ ಅಷ್ಟೇ. ಬ್ಯುಸಿನೆಸ್ ಮ್ಯಾನ್ ಆಗಿರಲಿ, ಕಾರ್ಮಿಕರೇ ಆಗಿರಲಿ ಎಲ್ಲರಿಗೂ ಕೊರೋನ ಭೀತಿ ಸಮಾನವಾಗಿ ಕಾಡುತ್ತಿದೆ. ಎಲ್ಲರೂ ಮನೆಯಲ್ಲಿ ಬಿದ್ದು ಒದ್ದಾಡಬೇಕು. ಆದಾಯ, ಆಸ್ತಿಪಾಸ್ತಿ, ಐಷಾರಾಮಿ ವಸ್ತುಗಳ ಲಭ್ಯತೆ ಬಗ್ಗೆ ವ್ಯತ್ಯಾಸಗಳಿದ್ದರೂ ಎಲ್ಲರ ಬಳಿ ಈಗ ಸಮಾನವಾಗಿ, ಯಥೇಚ್ಛವಾಗಿ ಲಭ್ಯವಿರುವ ಏಕೈಕ ವಸ್ತುವೆಂದರೆ ಟೈಮ್. ಅಷ್ಟರಮಟ್ಟಿಗೆ ಕೊರೋನ ನಮ್ಮ ನಡುವೆ ಸಮಾನತೆ ಸಾಧಿಸಿದೆ. ಎಲ್ಲರಿಗೂ ಈಗ ಸಿಕ್ಕಾಪಟ್ಟೆ ಪುರಸೊತ್ತು.
ಈ ಪುರಸೊತ್ತಿನ ಸಮಯವನ್ನು ಹೇಗೆ ಕಳೆಯಬೇಕು ಎಂಬುದೇ ಈಗ ದೊಡ್ಡ ಸವಾಲು.
ಪುಸ್ತಕ ಓದಿ, ಸಿನೇಮಾ ನೋಡಿ, ಮ್ಯೂಸಿಕ್ ಕೇಳಿ, ನಿಮ್ಮ ಹಳೆಯ ಗೆಳೆಯರನ್ನು ಹುಡುಕಿ ಮಾತಾಡಿಸಿ ಎಂದೆಲ್ಲಾ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ. ಕೆಲವರು ಇದನ್ನು ಪಾಲಿಸುತ್ತಲೂ ಇರಬಹುದು. ಆದರೆ, ಸಲಹೆ ಕೊಡುವಷ್ಟು ಸುಲಭವಲ್ಲ ಅದನ್ನು ಪಾಲಿಸುವುದು.


ಕೆಲವರು ದಿನದ 24 ಗಂಟೆಯಲ್ಲಿ ಹತ್ತಿಪ್ಪತ್ತು ನಿಮಿಷ ತಾವು ಮಾಡಿದ ಇಂಥ ಕೆಲಸಗಳ ಫೋಟೊ ತೆಗೆದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ದಿನವಿಡೀ ಆ ಪೋಸ್ಟ್ ಗೆ ಬರುವ ಕಾಮೆಂಟ್ಸ್, ಲೈಕುಗಳತ್ತ ದೃಷ್ಟಿ ನೆಟ್ಟು ಕೂತಿರುತ್ತಾರೆ. ಅನೇಕರಿಗೆ ಅದೇ ದೊಡ್ಡ ಟೈಂಪಾಸ್.
ಮಾವಿನ ಹಣ್ಣು ನನ್ನ ಫೆವರೀಟ್ ಎನ್ನುವವನಿಗೆ ದಿನವಿಡೀ ಮಾವಿನ ಹಣ್ಣು ತಿನ್ನಲು ಕೊಟ್ಟರೆ ಏನಾಗಬೇಡ?

“ಅತಿಯಾದರೆ ಅಮೃತವೂ ವಿಷ” ಎಂಬಂತೆ ಎಷ್ಟೇ ನಮಗಿಷ್ಟವಾದ ಕೆಲಸಗಳನ್ನು, ಹವ್ಯಾಸಗಳನ್ನು ಮಾಡಿದರೂ ಎಲ್ಲದಕ್ಕೂ ಒಂದು ಮಿತಿ ಇರುತ್ತದಲ್ಲವೇ? ದಿನದ 24 ಗಂಟೆಯೂ ಅದನ್ನು ಮಾಡಲಾದೀತೇ? ಸಂಗೀತ ಕೇಳುವುದು? ಸಿನೇಮಾ ನೋಡುವುದು ಮತ್ತು ಪುಸ್ತಕ ಓದುವುದು ಅತ್ಯುತ್ತಮ ಹವ್ಯಾಸ, ಇವು ಮನುಷ್ಯನ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ ಮತ್ತು ಜ್ಞಾನ ಭಂಡಾರ ಹೆಚ್ಚಿಸುತ್ತವೆ ಎಂಬುದು ಸತ್ಯ. ಆದರೆ, ಅವೇ ಬದುಕು ಅಲ್ಲವಲ್ಲ. ಬದುಕು ಎಂಬುದು ಸಂಗೀತ, ಸಿನೇಮಾ, ಪುಸ್ತಕಗಳಿಗಿಂತ ದೊಡ್ಡದು.
ಗೆಳೆಯರು, ಬಂಧು- ಬಳಗದವರು, ಆಪ್ತರನ್ನು ಭೇಟಿಯಾಗುವುದು, ಎಲ್ಲಿಗೆ ಬೇಕೋ ಅಲ್ಲಿಗೆ ಹೋಗುವುದು, ಏನು ಬೇಕೋ ಅದನ್ನು ಮಾಡುವುದು ಮನುಷ್ಯನ ಸಹಜ ಸ್ವಭಾವ. ಮನುಷ್ಯನ ಮನಸ್ಸು ಎಂಬುದು ಮಂಗ್ಯಾ ಇದ್ದಂತೆ. ಅದು ನಿಂತಲ್ಲಿ ನಿಲ್ಲುವುದಿಲ್ಲ, ಕೂತಲ್ಲಿ ಕೂರುವುದಿಲ್ಲ. ಆ ಮನಸ್ಸನ್ನು ಬಂಧಿಸಿಡಲಾಗದು. ಅದಕ್ಕೇ ಬ್ರೇಕ್ ಬಿದ್ದ ಮೇಲೆ ಈ ಸಂಗೀತ, ಈ ಸಿನೇಮಾ, ಈ ಓದು, ಈ ಆಟಗಳಿಗೆ ಬಹಳ ಬೆಲೆ ಇರುವುದಿಲ್ಲ.
ಬಹಳ ಬೆಲೆ ಇಲ್ಲದಿದ್ದರೂ ಅಷ್ಟೋ ಇಷ್ಟೋ ಬೆಲೆ ಇರುವುದಂತೂ ಸುಳ್ಳಲ್ಲ ಮತ್ತು ಆ ಬೆಲೆಗಾದರೂ ಅದನ್ನು ಮಾಡಲೇಬೇಕು.
ಏಕೆಂದರೆ, ಹಾಗೆ ಮಾಡಲೇಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಹಾಗೆ ಮಾಡುವುದನ್ನು ಬಿಟ್ಟು ನಮ್ಮೆದುರು ಬೇರೆ ಮಾರ್ಗಗಳೇ ಇಲ್ಲ. ಈ ಕೊರೋನ ಮಹಾಮಾರಿ ಹರಡದಂತೆ ತಡೆಗಟ್ಟಲು ಮನೆಯಲ್ಲೇ ಇರುವುದೊಂದೇ ನಮಗಿರುವ ಆಯ್ಕೆ.
ಅದೇ ಕಾರಣಕ್ಕಾಗಿ, ನಾನೀಗ ಕೂತು ಕೂತು ಬೇಸರವಾದಾಗ ಮಲಗುತ್ತೇನೆ. ಮಲಗಿ ಮಲಗಿ ಬೇಸರವಾದಾಗ ಕೂರುತ್ತೇನೆ.
ಕೊರೋನ ವೈರಸ್ ಹುಟ್ಟಿಸಿದ ಆ ಭಗವಂತನಲ್ಲಿ ನನ್ನದೊಂದು ಪ್ರಾರ್ಥನೆ. ನನ್ನ ವೈರಿಗೂ ಇಷ್ಟೊಂದು ಪುರಸೊತ್ತು ಕರುಣಿಸಬೇಡ.

