ಟ್ವಿಟ್ಟರ್ ನಲ್ಲಿ ಮೋದಿ ಫಾಲೋ ಮಾಡಿದ ವೈಟ್ ಹೌಸ್ ಸುದ್ದಿ: ಆಧುನಿಕ ಕಡಲ್ಗಳ್ಳರು ಮತ್ತು ಆಧುನಿಕ ಮಳ್ಳರು

ಕೊರೊನ ಸಾಂಕ್ರಾಮಿಕ ಜಗತ್ತನ್ನೆಲ್ಲ ಆವರಿಸಿಕೊಂಡ ನಂತರದ ವಿದ್ಯಮಾನಗಳು ಒಂದು ಕಡೆ ಜನರಲ್ಲಿ ಸದ್ಭಾವನೆ, ಸಹಾಯಹಸ್ತ ಚಾಚುವ ಮಾನವೀಯ ಗುಣವನ್ನು ಹೊರಗೆಳೆಯಲು ಪ್ರಯತ್ನಪಟ್ಟಿದ್ದರೆ, ಮನುಷ್ಯತ್ವಕ್ಕೆ ಮಾರಕವಾದ ಮತೀಯ ಭಾವನೆಗಳು, ಸುಳ್ಳು ಸುದ್ದಿಗಳನ್ನು ವೈರಲ್ ಮಾಡುವ ರಾಜಕೀಯ ಪಿತೂರಿಗಳು, ಅನ್ಯ ದೇಶಗಳ ಅಗತ್ಯ ಮತ್ತು ಸಂಕಷ್ಟಗಳನ್ನು ಕಡೆಗಣಿಸಿ ತಮ್ಮ ಲಾಭವನ್ನಷ್ಟೇ ನೋಡಿಕೊಳ್ಳುವ ಮುಂದುವರೆದ ದೇಶಗಳ ನೀಚ ಮತ್ತು ಸಣ್ಣತನಗಳು, ಪ್ರಭುತ್ವಗಳ ತಪ್ಪುಗಳನ್ನು ಬಿಕ್ಕಟ್ಟಿನ ಸಂದರ್ಭದಲ್ಲಿಯೂ ನುಂಗಿಕೊಂಡು ಅವರ ಆಜ್ಞೆಯಂತೆ ವರ್ತಿಸುವ ಸಮೂಹ ಮಾಧ್ಯಮಗಳ ಕೊಳಕನ್ನೂ ಹೊರಗೆ ಹಾಕಿದೆ.

ಮಲೇರಿಯ ಚಿಕಿತ್ಸೆಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಕೊರೊನ ಸೋಂಕಿನ ಚಿಕಿತ್ಸೆಗೂ ಪರಿಣಾಮಕಾರಿಯಾಗಬಲ್ಲದು ಎಂಬ ಪರೀಕ್ಷಾಲಯಗಳ ವರದಿಯ ಹಿನ್ನೆಲೆಯಲ್ಲಿ, ಈ ಔಷಧದ ದೊಡ್ಡ ರಫ್ತುದಾರನಾದ ಭಾರತ ರಫ್ತಿಗೆ ನಿಷೇಧ ಹೇರಿತ್ತು. ಆದರೆ ಏಪ್ರಿಲ್ 6 ರಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಅವರಿಗೆ ಕರೆ ಮಾಡಿ ರಫ್ತು ತೆರವುಗೊಳಿಸದೆ ಇದ್ದರೆ ಪ್ರತೀಕಾರದ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ರಫ್ತನ್ನು ಭಾಗಶಃ ತೆರವುಗೊಳಿಸಿತ್ತು.

ಭಾರತದಲ್ಲಿ ಮಲೇರಿಯಾ ಅಲ್ಲದೆ ಸ್ವಯಂ ರೋಗನಿರೋಧಕ ಖಾಯಿಲೆಗಳಾದ ಲೂಪಸ್ ಮತ್ತು ರಿಮಟಾಯ್ಡ್ ಆರ್ಥರೈಟಿಸ್ ಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಉಪಯೋಗಿಸಲಾಗುತ್ತದೆ. ಈಗ ರಫ್ತು ತೆರವುಗೊಳಿಸಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಭಾರತದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರತೆ ಇಲ್ಲ ಎಂದು ತಿಳಿಸಿದ್ದರೂ ಎಷ್ಟೋ ಜನರಿಗೆ ಈಗ ಈ ಔಷಧಿ ಸಿಗುವುದು ದುರ್ಲಭವಾಗಿ ನೋವಿನಿದ ನರಳುತ್ತಿರುವ ಹಲವು ಪ್ರಕರಣಗಳು ವರದಿಯಾಗಿರುವುದನ್ನು ಹಫಿಂಗ್ಟನ್ ಪೋಸ್ಟ್ ಏಪ್ರಿಲ್ 10 ರಂದು ವರದಿ ಮಾಡಿತ್ತು. ಅಲ್ಲದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ, ಕೊರೊನ ಸೋಂಕಿಗೆ ನಿಜವಾಗಿಯೂ ಪರಿಣಾಮಕಾರಿಯೇ ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇರುವ ಸಮಯದಲ್ಲಿಯೇ ಅಮೆರಿಕಾದ ಅಧ್ಯಕ್ಷ ಮನೋಇಚ್ಚೆಯಂತೆ ಇದರ ಬಗ್ಗೆ ಪ್ರಚಾರ ಮಾಡುತ್ತಿರುವುದು ಹಲವು ಆರೋಗ್ಯ ತಜ್ಞರಿಗೆ ಸಮಸ್ಯೆಯನ್ನು ಉಂಟುಮಾಡಿದೆ. ಭಾರತದ ಅಗತ್ಯ ರೋಗಿಗಳಿಗೆ ತುರ್ತಿಗೆ ಈ ಔಷದ ಸಿಗದಿರುವುದರ ಬಗ್ಗೆ ಹಲವು ವೈದ್ಯರು ದೂರಿದ್ದಾರೆ.

ಇದೇ ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಸರ್ಕಾರ ಅಮೆರಿಕಾದಲ್ಲಿ ರಕ್ಷಣಾ ಉತ್ಪಾದನಾ ಕಾಯ್ದೆಯನ್ನು ಜಾರಿ ಮಾಡಿ, ಚಿಕಿತ್ಸಾ ಸುರಕ್ಷತಾ ಕವಚ ಮತ್ತು ಮುಂತಾದ ವೈದ್ಯಕೀಯ ಸಲಕರಣೆಗಳ ರಫ್ತನ್ನು ತಡೆ ಹಿಡಿದಿತ್ತು. ಇದರ ಭಾಗವಾಗಿ ಜರ್ಮನಿ, ಕೆನಡ, ಸ್ಪೇನ್ ಮತ್ತಿತರ ರಾಷ್ಟ್ರಗಳಿಗೆ ಅಮೆರಿಕಾದ ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ 3M ಎಂಬ ಸಂಸ್ಥೆಯಿಂದ ಹೊರಟಿದ್ದ ಸುರಕ್ಷಾ ಕವಚಗಳಿಗೆ ತಡೆ ಬಿದ್ದಿತ್ತು. ಜರ್ಮನಿಯ ಪೋಲೀಸ್ ಇಲಾಖೆ ಈ ಸಂಸ್ಥೆಯಿಂದ ಖರೀದಿಗೆ ನೀಡಿದ್ದ ಆದೇಶದಂತೆ ಹೊರಟಿದ್ದ ಸುಮಾರು 2 ಲಕ್ಷ ಎನ್95 ಮುಖ ಕವಚಗಳನ್ನು ಅಮೇರಿಕಾ ವಶಪಡಿಸಿಕೊಂಡಿತ್ತು. ಈ ಕ್ರಮವನ್ನು ಜರ್ಮನಿ, ಕೆನಡ ಮತ್ತು ಇತರ ದೇಶಗಳು ತೀವ್ರವಾಗಿ ಖಂಡಿಸಿದ್ದವು.

ಬರ್ಲಿನ್ ನ ಆಂತರಿಕ ಸಚಿವ ಆಂಡ್ರಿಯಾಸ್ ಜಿಸೆಲ್ ಅವರು ಈ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿ ಅಮೇರಿಕಾ ಈ ಕ್ರಮ ಅಧುನಿಕ ಕಡಲ್ಗಳ್ಳತನ ಎಂದು ಖಂಡಿಸಿದ್ದರಲ್ಲದೆ ಖಂಡಗಳಾಚೆಗಿನ ಮಿತ್ರ ದೇಶಗಳೊಂದಿಗೆ ನಡೆದುಕೊಳ್ಳುವ ಕ್ರಮ ಇದಲ್ಲ ಎಂದಿದ್ದರು. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಪಶ್ಚಿಮದ ಇಂತಹ ಕೆಟ್ಟ ಕ್ರಮಗಳು ಜಗತ್ತನ್ನು ಆಳಬಾರದು ಎಂದು ಕೂಡ ಹೇಳಿದ್ದರು. ಅಮೆರಿಕಾದ ಇಂತಹ ಸ್ವಾರ್ಥದ ಕ್ರಮಗಳ ಸಮಯದಲ್ಲಿಯೂ ಜರ್ಮನಿಯ ಚಾನ್ಸೆಲರ್ ಎಂಜೆಲಾ ಮರ್ಕೆಲ ಮತ್ತು ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೊ ಅಮೆರಿಕಾದ ವಿರುದ್ಧ ಯಾವುದೇ ಪ್ರತೀಕಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ಅಂತರಾಷ್ಟ್ರೀಯ ನಾಯಕರು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದರು.

ಇಂತಹ ಸಂಗತಿಗಳ ನಡುವೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರಫ್ತು ಮಾಡದಿದ್ದರೆ ಪ್ರತೀಕಾರ ತೆಗೆದುಕೊಳ್ಳುತ್ತೇನೆ ಎಂಬ ಟ್ರಂಪ್ ನಡೆಯನ್ನು ಭಾರತೀಯ ಮಾಧ್ಯಮಗಳು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಭಾರತ ಮಾನವೀಯತೆಯಿಂದ ರಫ್ತಿಗೆ ಅವಕಾಶ ಕೊಟ್ಟಿದ್ದರೂ, ಅಮೇರಿಕಾ ಸರ್ಕಾರ ಮತ್ತು ಟ್ರಂಪ್ ನಡತೆಯ ವಿರುದ್ಧ ತೀವ್ರ ಆಕ್ರೋಶ ದಾಖಲಿಸಬೇಕಿತ್ತು. ಈ ರಫ್ತಿಗೆ ಬದಲಾಗಿ ಮಾಸ್ಕ್ ಗಳ, ಮತ್ತಿತರ ಸುರಕ್ಷಾ ಕವಚಗಳನ್ನು ತರಿಸಿಕೊಳ್ಳುವ ರಾಜತಾಂತ್ರಿಕ ಒತ್ತಡ ಹಾಕಬೇಕಿತ್ತು. ಮಾಧ್ಯಮಗಳು ಇಲ್ಲಿನ ಸಮಸ್ಯೆಗಳನ್ನು ಹೈಲೈಟ್ ಮಾಡಿ ಇಂತಹ ಕ್ರಮಕ್ಕೆ ಭಾರತ ಸರ್ಕಾರ ಮುಂದಾಗಬೇಕು ಎಂದು ಒತ್ತಡ ಹೇರಬೇಕಿತ್ತು.

ಆದರೆ ಶುಕ್ರವಾರದಂದು ಕೆಲವು ಮಾಧ್ಯಮಗಳು ಗುಡ್ಡ ತೋಡಿ ಹಿಡಿದ ಮಾಹಿತಿ ಯಾವುದೇ ಪ್ರಜ್ಞಾವಂತ ನಾಗರಿಕನ ಆತಂಕವನ್ನು ನಗೆಪಾಟಲಿಗೆ ಗುರಿ ಮಾಡಿದಂತೆ ಇತ್ತು. ಅಮೇರಿಕಾದ ವೈಟ್ ಹೌಸ್ ಟ್ವಿಟ್ಟರ್ ಹ್ಯಾಂಡಲ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವುದನ್ನು ದೊಡ್ಡ ಸುದ್ದಿಯಾಗಿ ಹಲವು ಮಾಧ್ಯಮಗಳು ಬಿತ್ತರಿಸಿದವು. ಇದನ್ನು ಒಂದು ದೊಡ್ಡ ರಾಜತಾಂತ್ರಿಕ ಗೆಲುವು ಎಂಬಂತೆ ಬಿಂಬಿಸಲಾಯಿತು ಮತ್ತು ಪದೇ ಪದೇ ಟಿವಿಯಲ್ಲಿ ಬಿತ್ತರಿಸಲಾಯಿತು. ಅಲ್ಲಿಗೆ ಇಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರತೆ ಅಥವಾ ಸುರಕ್ಷಾ ಕವಚಗಳನ್ನು ಅಮೇರಿಕಾ ಭಾರತಕ್ಕೆ ಕಳಿಸಿಕೊಡುವುದೇ ಎಂದು ಕೇಳಬೇಕಾದ ಪ್ರಶ್ನೆ ಗೌಣವಾಯಿತು. ಹೌದು 20ನೆಯ ಶತಮಾನದಲ್ಲಿ ಟ್ವಿಟ್ಟರ್ ಪ್ರಮುಖ ಪರಿಣಾಮಕಾರಿ ಸಂಪರ್ಕ ಸಾಧನವಾಗಿ ಬೆಳೆದಿದೆ. ಟ್ವಿಟ್ಟರ್ ನಲ್ಲಿ ಗೋಚರಿಸುವ ಟ್ರೆಂಡ್ ಗಳು ಹಲವು ಸಂಚಲನಗಳಿಗೆ ಕಾರಣವಾಗಿದೆ. ಆದರೆ ಸಾಂಕ್ರಾಮಿಕ ಇಡೀ ದೇಶವನ್ನು ಭೀತಿಗೆ ತಳ್ಳಿರುವ ಸಮಯದಲ್ಲಿ ವೈಟ್ ಹೌಸ್ ಟ್ವಿಟ್ಟರ್ ಹ್ಯಾಂಡಲ್ ಭಾರತದ ಪ್ರಧಾನಿಯನ್ನು ಫಾಲೋ ಮಾಡುತ್ತಿದೆ ಎಂಬ ಸುದ್ದಿ ಈ ಆಧುನಿಕ ಮಳ್ಳರಿಗೆ ಇಲ್ಲಿ ಜನರಿಗೆ ಔಷದಿ ಕೊರತೆ ಇದೆ ಮತ್ತು ಸುರಕ್ಷಾ ಕವಚಗಳು ಸಿಗುತ್ತಿಲ್ಲ ಎಂಬ ಪ್ರಶ್ನೆಗೂ ಮುಖ್ಯವಾಗಿ ಹೋಗಿರುವುದು ಕಳವಳಕಾರಿ ಸಂಗತಿಯಾಗಿದೆ.

ಒಟ್ಟಿನಲ್ಲಿ ಕೊರೊನ ಸಾಂಕ್ರಾಮಿಕ ಆಧುನಿಕ ಕಡಲ್ಗಳ್ಳರ ಮತ್ತು ಆಧುನಿಕ ಮಳ್ಳರ ಮುಸುಕನ್ನು ತೆಗೆದು ಅವರ ಧೂರ್ತತನವನ್ನು ಅನಾವರಣಗೊಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights