ಮೋದಿ ಭಾಷಣದಲ್ಲಿ ಆರ್ಥಿಕ ಚೈತನ್ಯದ ಮಾತೇ ಇರಲಿಲ್ಲ: ಡಿಕೆಶಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ದೇಶದ ಜನರಿಗೆ ಆರ್ಥಿಕ ಚೈತನ್ಯ ತುಂಬುವ ಮಾತುಗಳಿರಬೇಕಿತ್ತು. ಆದರೆ, ಅಂತಹ ಯಾವುದೇ ಮಾತುಗಳನ್ನು ಪ್ರಧಾನಿ ಪ್ರಸ್ತಾಪಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ.

ಪ್ರಧಾನಿ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರು ಅಸಹಾಯಕ ಸ್ಥಿತಿ ಮುಟ್ಟಿದ್ದಾರೆ. ಅವರಿಗೆ ಸ್ಥೈರ್ಯ ತುಂಬವ ಯಾವುದೇ ವಿಚಾರ ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪವಾಗಲಿಲ್ಲ ಎಂದಿದ್ದಾರೆ. ದೇಶದ ಪ್ರಧಾನಿಯವರ ಮೇಲೆ ನಮಗೆಲ್ಲರಿಗೂ ಅಪಾರವಾದ ಗೌರವವಿದೆ. ದೇಶದ ಎಲ್ಲರೂ ಮೋದಿ ಅವರ ಮನವಿಗಳನ್ನು-ಆದೇಶಗಳನ್ನು ಗೌರವಿಸುತ್ತೇವೆ. ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ದರಿದ್ದೇವೆ. ಪ್ರಧಾನಿಯವರು ಮೇ 3ರವರೆಗೆ ಲಾಕ್‌ಡೌನ್ ಮುಂದುವರೆಸಲು ಸೂಚಿಸಿದ್ದಾರೆ. ನಾವು ಅದನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯಗಳಿಗೆ ಕೇಂದ್ರ ಸರ್ಕಾರ ಏನು ಮಾಡಿದೆ ಎಂಬುದರ ಬಗ್ಗೆ ಪ್ರಧಾನಿ ಭಾಷಣದಲ್ಲಿ ಯಾವುದೇ ಪ್ರಸ್ತಾಪವಿರಲಿಲ್ಲ. ಅದರ ಕುರಿತು ಮೋದಿಯವರು ಏನಾದರೂ ಮಾಹಿತಿ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಈಗ ನಿರಾಶೆಯಾಗಿದೆ. ಮೋದಿಯವರ ಭಾಷಣದಲ್ಲಿ ಯಾವ ವರ್ಗಕ್ಕೂ ಸಂದೇಶವಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮಾತಿಗೆ ಬೆಲೆಕೊಟ್ಟು ನಾವು ಖಂಡಿತಾ ಮನೆಯಲ್ಲಿರುತ್ತೇವೆ. ಆದರೆ ಲಾಕ್‌ಡೌನ್ ನಂತರ ನಮ್ಮ ಬದುಕು ಏನಾಗುತ್ತೆ? ನಮಗೇನು ದಿಕ್ಕು? ರೈತರು ಮತ್ತು ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಏನು? ಅವರು ಏನು ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೂ ಮೋದಿಯವರು ಉತ್ತರಿಸಬೇಕಿತ್ತು. ಆದರೆ, ಅಂತಹ ಯಾವುದೇ ಸ್ಥೈರ್ಯದ ಮಾತು ಮೋದಿಯವರ ಭಾಷಣದಲ್ಲಿ ಇರಲಿಲ್ಲ ಎಂದಿದ್ದಾರೆ.

ರಾಜ್ಯದ ಹಳ್ಳಿಗಳಲ್ಲಿ ಅಲ್ಪಸಂಖ್ಯಾತರನ್ನು ನೋಡುವ ರೀತಿಯೇ ಬದಲಾಗಿದೆ. ಭಾಷಣದಲ್ಲಿ ಮೋದಿಯವರು ಅಂಬೇಡ್ಕರ್‌ ಅವರನ್ನು ನೆನಪಿಸಿಕೊಂಡರು. ಅದು ಶ್ಲಾಘನೀಯ. ಸಂವಿಧಾನದ ರಕ್ಷಣೆ, ಸಮಾಜದ ಎಲ್ಲ ವರ್ಗಗಳನ್ನೂ ಜತೆಗೆ ಕರೆದೊಯ್ಯುವ ಭರವಸೆಯನ್ನೂ ಸರ್ಕಾರ ತುಂಬಬೇಕು ಎಂದು ವಿನಂತಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights