ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರದಂತೆ ‘ಬಿಜೆಪಿ’ಯೊಳಗೆ ಭುಗಿಲೆದ್ದಿದೆ ವಿರೋಧ
ಲಾಕ್ಡೌನ್ನಿಂದ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು (ಆಕ್ಡೌನ್ಗೂ ಮುಚ್ಚೆಯೇ ಆರ್ಥಿಕತೆ ಕುಸಿದಿತ್ತು) ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಕರ್ನಾಟಕದಲ್ಲಿಯೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೂಡ ಕೇಂದ್ರದ ನಡೆಯನ್ನು ಅನುಸರಿಸಲು ನಿರ್ಧರಿಸಿದ್ದು, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಆದರೆ, ಕಾರ್ಮಿಕ ಕಾಯ್ದೆ ತಿದ್ದುಪಡಿತರುವ ವಿಚಾರದಲ್ಲಿ ರಾಜ್ಯ ಬಿಜೆಪಿಯೊಳಗೆಯೇ ವಿರೋಧ ಸೃಷ್ಟಿಯಾಗಿದೆ.
ಲಾಕ್ಡೌನ್ನಿಂದಾಗಿ ಕಾರ್ಮಿಕ ಸ್ಥಿತಿ ಶೋಚನೀಯವಾಗಿದೆ, ಕಾರ್ಮಿಕರ ಜೀವನ ನಡೆಸಲು ಪರದಾಡುತ್ತಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಬೇಡ ಎಂದು ಬಿಜೆಪಿಯ ಒಂದು ಪಾಳಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿಯ ಹಿರಿಯ ಮುಖಂಡ ಆಯನೂರು ಮಂಜುನಾಥ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಕಾಯ್ದೆಗೆ ತಿದ್ದುಪಡಿ ಮಾಡುವ ವಿಚಾರದಲ್ಲಿ ಅನ್ಯ ರಾಜ್ಯಗಳು ಏನಾದರೂ ನಿರ್ಧಾರ ತೆಗೆದುಕೊಳ್ಳಲಿ, ಎಲ್ಲಾ ವಿಚಾರದಲ್ಲಿಯೂ ಅನ್ಯ ರಾಜ್ಯಗಳನ್ನು ಅನುಸರಿಸುವ ಅಗತ್ಯವಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ತಿದ್ದುಪಡಿಯ ವಿಚಾರದಲ್ಲಿ ಅಂತಹ ರಾಜ್ಯಗಳನ್ನು ಅನುಸರಿಸುವುದು ಸರಿಯಲ್ಲ. ಹಾಗಾಗಿ, ತಿದ್ದುಪಡಿ ತರುವ ತೀರ್ಮಾನವನ್ನು ನೀವು ಮಾಡಬಾರದು.
ನೀವು ಜನಪರ, ರೈತಪರ ಮತ್ತು ಕಾರ್ಮಿಕರ ಪರ ಒಲವುಳ್ಳವರು. ನೀವು ಕಾರ್ಮಿಕ ವಿರೋಧಿಯಾಗಬೇಡಿ. ಈಗ ಇರುವ ಕಾಯ್ದೆಯನ್ನ ಅಮಾನ್ಯ ಮಾಡುವುದಾಗಲೀ, ತಿದ್ದುಪಡಿ ತರುವುದಾಗಲೀ ಮಾಡಬೇಡಿ ಎಂದು ಆಯನೂರು ಮಂಜುನಾಥ್ ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರದಂತೆ ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಕೆಲವಾರು ರಾಜ್ಯಗಳು ಕಾರ್ಮಿಕ ಕಾಯ್ದೆಯಲ್ಲಿ ಬದಲಾವಣೆ ತಂದು, ಸುಗ್ರೀವಾಜ್ಞೆ ಹೊರಡಿಸಿವೆ. ಕಾಯ್ದೆಗೆ ಆಗುತ್ತಿರುವ ತಿದ್ದುಪಡಿಯ ವಿರುದ್ಧ ದೇಶಾದ್ಯಂತ ಬಹುತೇಕ ಕಾರ್ಮಿಕ ಸಂಘಟನೆಗಳು, ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಬೆಂಬಲಿತ ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ ಉಳಿದ ಬಹುತೇಕ ಕಾರ್ಮಿಕ ಸಂಘಟನೆಗಳು ಮೇ 22ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಇದನ್ನೂ ಓದಿ: ಶ್ರಮದ ಲೂಟಿಗೆ ಮುಂದಾದ ಸರ್ಕಾರ; ಕಾರ್ಮಿಕ ಕಾನೂನುಗಳನ್ನೇ ದುರ್ಬಲಗೊಳಿಸುತ್ತಿದೆ!
ಕಾರ್ಮಿಕರು ದುಡಿಯುವ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ವಿಸ್ತರಿಸಲಾಗಿದೆ. ಇದು ಫ್ಯಾಕ್ಟರೀಸ್ ಆ್ಯಕ್ಟ್ನ ಉಲ್ಲಂಘನೆಯಾಗಿದೆ. ಲಾಕ್ಡೌನ್ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡು ಕಾರ್ಮಿಕರನ್ನು ಶೋಷಿಸಲಾಗುತ್ತಿದೆ ಎಂದು ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ.

