ಕೊರೊನಾ ಕರ್ಫ್ಯೂ ಸಡಿಲಿಕೆ : ರಾತ್ರಿ ಬಸ್, ಆಟೋ, ಕ್ಯಾಬ್ ಸಂಚಾರಕ್ಕೆ ಅನುಮತಿ
ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಲಾಕ್ ಡೌನ್ ಕೂಡ ಸಡಿಲಗೊಳ್ಳುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಕೊರೊನಾ ಹರಡುವುದನ್ನ ತಡೆಗಟ್ಟಲು ವಿಧಿಸಲಾಗಿದ್ದ ಕರ್ಫ್ಯೂ ನಿರ್ಬಂಧವನ್ನು ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು… ತುರ್ತು ಸಂದರ್ಭ ಹೊರತುಪಡಿಸಿ ಉಳಿದೆಲ್ಲಾ ವಾಹನಗಳಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಗೊಳಿಸಲಾಗಿದ್ದ ಕರ್ಫ್ಯೂಯನ್ನು ಸಡಿಲಗೊಳಸಲಾಗಿದೆ. ಹೀಗಾಗಿ ರಾತ್ರಿ ಬಸ್, ಆಟೋ, ಕ್ಯಾಬ್ ಸಂಚಾರ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.
ಕಂಟೈನ್ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆ ಸಂಚರಿಸಬಹುದು. ಪ್ರಯಾಣಿಕರು ಹೊಂದಿರುವಂತಹ ಬಸ್ ಟಿಕೆಟ್ ಆಧಾರದ ಮೇಲೆ ಬಸ್ ನಿಲ್ದಾಣಗಳಿಗೆ ಹೋಗಲು ಮತ್ತು ಬಸ್ ನಿಲ್ದಾಣದಿಂದ ಮನೆಗಳಿಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಗುರುವಾರ ಹೊರಡಿಸಲಾದ ಆದೇಶದಲ್ಲಿ ಕರ್ಫ್ಯೂ ಅವಧಿಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಮತ್ತು ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿದ್ದಾರೆ.
ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಗಳು ಪ್ರಯಾಣಿಕರನ್ನು ಬಸ್ ಸ್ಟ್ಯಾಂಡ್/ ಪಿಕ್ ಅಪ್ ಪಾಯಿಂಟ್ ಗಳಲ್ಲಿ ಕರೆದೊಯ್ಯಲು ಮತ್ತು ಕರೆತರಲು ಸಹ ಅನುಮತಿ ನೀಡಲಾಗಿದೆ.

