BJP ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್; JDS ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ!
ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ತುಮಕೂರು ಗ್ರಾಮಾಂತರದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಜೆಡಿಎಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊನ್ನೇನಹಳ್ಳಿಯ ರಾಧಾಕೃಷ್ಣ, ಸಂಜೀವಮ್ಮ, ರಂಗಸ್ವಾಮಯ್ಯ, ಶ್ರೀನಿವಾಸ್ ಗಾಯಗೊಂಡಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಧಾಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಪ್ರಕರಣವೊಂದರಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡರಾದ ವೆಂಟಕೇಶ್ ವಿರುದ್ಧ ಹೆಬ್ಬೂರು ಠಾಣೆಯಲ್ಲಿ ಏಪ್ರಿಲ್ 22ರಂದು ದೂರು ದಾಖಲಾಗಿತ್ತು. ವೆಂಕಟೇಶ್ ಆಕೆಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ಮಾಡಿದ್ದ ಎಂದು ದೂರಲಾಗಿತ್ತು. ಈ ಪ್ರಕರಣಕ್ಕೆ ಜೆಡಿಎಸ್ ಕಾರ್ಯಕರ್ತರಾದ ರಾಧಾಕೃಷ್ಣ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎಂದು ಹೇಳಲಾಗಿದೆ.
ವೆಂಕಟೇಶ್ ಬಿಜೆಪಿ ಮುಖಂಡರಾಗಿದ್ದು ಸಾಕ್ಷಿಯಿಂದ ಹಿಂದೆ ಸರಿಯುವಂತೆ ರಾಧಾಕೃಷ್ಣ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ರಾಧಾಕೃಷ್ಣ ಸಾಕ್ಷಿ ಹಿಂತೆಗೆದುಕೊಳ್ಳಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಬಿಜೆಪಿಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.


ಅದೇ ಗ್ರಾಮದ ಶಂಕರ, ಮಂಡಲ್ ರವಿ, ಯೋಗೇಶ್, ಸ್ವಾಮಿ, ಮಂಜ, ಎಂ.ಎಚ್. ರಂಗಸ್ವಾಮಿ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಮತ್ತೊಂದು ದೂರು ದಾಖಲಾಗಿದೆ.
ಈ ಕುರಿತು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ರವರು ಪ್ರತಿಕ್ರಿಯಿಸಿದ್ದು, ವೆಂಕಟೇಶ್ ವಿರುದ್ದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವುದೇ ಘಟನೆಗೆ ಕಾರಣ. ಅವರು ತಪ್ಪಿತಸ್ಥರಲ್ಲದಿದ್ದರೆ ಅದನ್ನು ಪೊಲೀಸ್ ಠಾಣೆ ಮತ್ತು ಕೋರ್ಟಿನಲ್ಲಿ ಬಗೆಹರಿಸಿಕೊಳ್ಳಬೇಕಿತ್ತು. ಆದರೆ ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ಮತ್ತು ಅವರ ಬೆಂಬಲಿಗರು ಏಕಾಏಕಿ ನಿನ್ನೆ ರಾತ್ರಿ ಜೆಡಿಎಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಿರುವುದು ಹೇಯ ಕೃತ್ಯ. ಇದರಿಂದ ಬೆದರಿಸಿ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ನಾವು ಬಗ್ಗುವುದಿಲ್ಲ ಎಂದಿದ್ದಾರೆ.



ಮಾಜಿ ಶಾಸಕ ಸುರೇಶ್ಗೌಡ ಮತ್ತು ಸಬ್ ಇನ್ಸ್ ಪೆಕ್ಟರ್ ಕೂಡ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿರುವ ಗೌರಿಶಂಕರ್, ನೆಲಮಂಗಲದ ರೌಡಿಶೀಟರ್ಗಳು ಈ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು ನಮ್ಮ ಕಾರ್ಯಕರ್ತ ರಾಧಾಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕೂಡಲೇ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

