ಗಡಿಯಲ್ಲಿರುವ ಸೈನಿಕರ ಬಳಿ ಶಸ್ತ್ರಾಸ್ತ್ರಗಳು ಏಕಿಲ್ಲ? ಮೋದಿ ಸರ್ಕಾರಕ್ಕೆ ಪ್ರಶ್ನೆ

ಗಾಲ್ವಾನ್ ಕಣಿವೆಯಲ್ಲಿರುವ ಭಾರತೀಯ ಸೈನಿಕರ ಮೇಲೆ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿಯೂ ಇನ್ನೂ ಏಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಟ್ವೀಟ್‌ ಮಾಡಿದ್ದಾರೆ. ಇದು‌ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಟ್ವೀಟ್‌ ಸಮರಕ್ಕೆ ನಾಂದಿ ಹಾಡಿದೆ.

ಇಂದು ಪ್ರಧಾನಿ ಮೋದಿಯವರು ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿಯ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದು, ಸಭೆಗೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ವಾಗ್ವಾದಗಳು ಆರಂಭವಾಗಿದೆ.

ಕೊರೊನಾ ಹಾಗೂ ಲಾಕ್‌ಡೌನ್‌ವ ವಿಚಾರದಲ್ಲಿಯೂ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್‌ಗಾಂಧಿಯವರು, ಗಡಿ ವಿಚಾರದಲ್ಲಿಯೂ ತಮ್ಮ ಪ್ರಶ್ನೆಗಳನ್ನು ಮುಂದುವರೆಸಿದ್ದಾರೆ.

ಗಡಿವಿಚಾರವಾಗಿ ಪ್ರಶ್ನೆಗಳನ್ನು ಎತ್ತಿರುವ ರಾಹುಲ್‌ಗಾಂಧಿ, “ಶಸ್ತ್ರಾಸ್ತ್ರಗಳಿಲ್ಲದ ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ? ನಮ್ಮ ಸೈನಿಕರನ್ನು ಶಸ್ತ್ರಾಸ್ತ್ರಗಳಿಲ್ಲದೆ ಹುತಾತ್ಮರಾಗಲು ಏಕೆ ಕಳಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿದ ಜೈಶಂಕರ್ ಹೀಗೆ ಬರೆದಿದ್ದಾರೆ: “ನಾವು ಸತ್ಯಗಳನ್ನು ನೇರವಾಗಿ ತಿಳಿದುಕೊಳ್ಳೋಣ. ಗಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪಡೆಗಳು ಯಾವಾಗಲೂ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತವೆ. ಆದರೆ, ಮುಖಾಮುಖಿಯ ಸಂದರ್ಭದಲ್ಲಿ ಬಂದೂಕುಗಳನ್ನು ಬಳಸದಿರುವುದು ದೀರ್ಘಕಾಲದಿಂದ ಜಾರಿಯಲ್ಲಿದೆ (1996 ಮತ್ತು 2005 ರ ಒಪ್ಪಂದಗಳ ಪ್ರಕಾರ)” ಎಂದಿದ್ದಾರೆ.

ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ವಕ್ತಾರರ ಟ್ವೀಟ್‌ ಸಮಯ ಮುಂದುವರೆದಿದ್ದು, ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ, “ಯುದ್ದತಂತ್ರದ ಮಿಲಿಟರಿ ರೀತಿಯಲ್ಲಿ ನಮ್ಮ ಭೂಪ್ರದೇಶವನ್ನು ಶತ್ರು ಪಡೆ ಆಕ್ರಮಿಸಿಕೊಂಡಿರುವ  ಸಂದರ್ಭದಲ್ಲಿ, ಸೈನಿಕರನ್ನು ಶಸ್ತ್ರಾಸ್ತ್ರಗಳಿಲ್ಲದೆ ಕಳಿಸುವುದು ದೇಶಕ್ಕೆ ಮತ್ತು ಸೇನಾ ಪಡೆಗಳಿಗೆ ದೊಡ್ಡ ಅಪಚಾರ” ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್ ಪತ್ರ ಅವರು, “ನೀವು ಭಾರತವನ್ನು ನೋಡಿದ ಅತ್ಯಂತ ಬೇಜವಾಬ್ದಾರಿ ರಾಜಕಾರಣಿ. ಓದಿ, ಅರ್ಥಮಾಡಿಕೊಳ್ಳಿ ಮತ್ತು ನಂತರ ಮಾತನಾಡಿ. ನಿಮ್ಮ ದೇಶದ ವಿರುದ್ಧ ವಾಗ್ದಾಳಿ ನಡೆಸಬೇಡಿ. ನಿಮ್ಮ ರಾಜಕೀಯಕ್ಕಾಗಿ ನಿಮ್ಮ ಸ್ವಂತ ದೇಶದ ವಿರುದ್ಧ ಆಧಾರರಹಿತ ಮತ್ತು ದಾರಿತಪ್ಪಿಸುವ ಕೆಲಸ ಮಾಡಬೇಡಿ” ಎಂದು ರಾಹುಲ್‌ಗಾಂಧಿಯವರನ್ನು ಟೀಕಿಸಿದ್ದಾರೆ.

“ಗಡಿಯಲ್ಲಿ ಎದೆಯೊಡ್ಡಿ ನಿಂತಿರುವ ನಮ್ಮ ಸೈನಿಕರಲ್ಲಿ ಒಬ್ಬರನ್ನು ಕೊಂದರೆ, ಎದುರಾಳಿ ಗುಂಪಿನ 3 ಜನರನ್ನು ಕೊಲ್ಲುತ್ತೀರಿ ಎಂದು ಸೈನಿಕರಿಗೆ ಸ್ಪಷ್ಟವಾಗಿ ಹೇಳಬೇಕು.” ಪರಿಸ್ಥಿತಿ ಉಲ್ಬಣಗೊಂಡಾಗಲೇ ಶಸ್ತ್ರಾಸ್ತ್ರಗಳನ್ನು ಪೂರೈರಿಸಿದ್ದರೆ, ಚೀನಾವು ವಿಶ್ವಾಸಘಾತುಕತನವನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಗುಂಡು ಹಾರಿಸಲು ಎರಡನೇ ಹಂತದಲ್ಲಿ ಕಮಾಂಡ್‌ ನೀಡಬೇಕಾಗಿತ್ತು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

ತಮ್ಮ ಟ್ವೀಟ್‌ ಅನ್ನು ಮುಂದುವರೆಸಿರುವ ಅವರು, ನಮ್ಮ ಸೈನಿಕರು ಏಕೆ ಪ್ರತಿಕಾರ ತೀರಿಸಲಿಲ್ಲ, ಶಸ್ತ್ರಾಸ್ತ್ರಗಳನ್ನು ನೀಡಿದ್ದರೆ ಅವರು ಗುಂಡುಹಾರಿಸುತ್ತಿರಲಿಲ್ಲವೇ ಎಂದು ರಾಷ್ಟ್ರದ ಜನರು ತಿಳಿದುಕೊಳ್ಳಲು ಬಯಸಿದ್ದಾರೆ. ಚೀನಾದ ಕ್ರೂರ ದಾಳಿಯ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡು ಹಾರಿಸಲು ಯಾವುದೇ ಆದೇಶಗಳನ್ನು ನೀಡಲು ಸಾಧ್ಯವಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಗಡಿ ಸಂಘರ್ಷ: ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights