ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೋನಾ; ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಕ್ವಾರಂಟೈನ್?
ಕೊರೋನಾ ಸೋಂಕಿನ ಹಾವಳಿಯ ಕಾರಣಕ್ಕಾಗಿ ಮುಂದೂಡಲಾಗಿದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಜೂನ್.18 ರಂದು ನಡೆಸಲಾಗಿದೆ. ಆದರೆ, ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರಿನ ಜಯನಗರ 4 ನೇ ಬ್ಲಾಕ್ ನಲ್ಲಿ ನಿನ್ನೆ ನಡೆದ ಪಿಯುಸಿ ಪರೀಕ್ಷೆಗೆವಿದ್ಯಾರ್ಥಿನಿ ಹಾಜರಾಗಿದ್ದರು. ಕಳೆದ ಒಂದು ವಾರದಿಂದ ಕ್ವಾರಂಟೈನ್ಗೆ ಒಳಗಾಗಿದ್ದ ಆಕೆಗೆ, ಮನೆಯಿಂದ ಹೊರ ಬರುವಂತಿಲ್ಲ ಎಂದು ಕೈಗೆ ಮುದ್ರೆ ಒತ್ತೆಲಾಗಿತ್ತು. ಆದರೆ, ಆಕೆ ಆ ಮುದ್ರೆಯನ್ನು ಅಳಿಸಿ ಹಾಕಿ ಕಣ್ ತಪ್ಪಿಸಿ ಪರೀಕ್ಷೆಗೆ ತೆರಳಿದ್ದಾಳೆ. ಆಕೆಯ ಸ್ವ್ಯಾಬ್ ರಿಪೋರ್ಟ್ ಸಂಬಂಧ ಅಧಿಕಾರಿಗಳಿಗೂ ಆಕೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ಇಂದು ಆಕೆಯ ಕೊರೋನಾ ಪರೀಕ್ಷಾ ವರದಿ ಸಿಕ್ಕಿದ್ದು, ಅದರಲ್ಲಿ ಆಕೆಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ವಿದ್ಯಾರ್ಥಿನಿಯ ಈ ಕೆಲಸದಿಂದಾಗಿ ಇದೀಗ ಆಕೆಯ ಜೊತೆ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನೂ ಹಾಗೂ ಕಾಲೇಜು ಸಿಬ್ಬಂದಿಗಳನ್ನು ಕ್ವಾರಂಟೈನ್ಗೆ ಒಳಪಡಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಇದು ಅಧಿಕಾರಿಗಳಿಗೂ ತಲೆನೋವಿನ ವಿಚಾರವಾಗಿ ಪರಿಣಮಿಸಿದೆ.

