SSLC exam: ಪರೀಕ್ಷೆಗೆ ಕೊರೊನಾ ಕಾರ್ಮೋಡ, ಪರೀಕ್ಷೆ ರದ್ದಿಗೆ ಪೋಷಕರ ಆಗ್ರಹ…
SSLC ಪರೀಕ್ಷೆ ಮೇಲೆ ಕೊರೋನಾ ಸ್ಫೋಟದ ಕರಿಛಾಯೆ ಆವರಿಸಿದ್ದು, ಕೋವಿಡ್ 19 ಕಾರ್ಮೋಡದಿಂದ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿ ಮತ್ತು ಪೋಷಕರು SSLC ಪರೀಕ್ಷೆ ರದ್ದಿಗೆ ಪೋಷಕರ ಆಗ್ರಹ ಪಡಿಸುತ್ತಿದ್ದಾರೆ.. ಗುರುವಾರದಿಂದ ಆರಂಭವಾಗಬೇಕಿರುವ SSLC ಪರೀಕ್ಷೆ ಬಗ್ಗೆ ಗೊಂದಲ ಮುಂದುವರೆದಿದ್ದು ಶಿಕ್ಷಣ ಸಚಿವರು ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದಾರೆ…
ಯಾವುದೇ ಕಾರಣಕ್ಕೂ ಪರೀಕ್ಷೆ ರದ್ದು ಮಾಡುವುದಿಲ್ಲ ಎಂದು ಶಿಕ್ಷಣ ಸಚಿವರು ಹಠಕ್ಕೆ ಬಿದ್ದಿದ್ದಾರಾದರೂ ಪರೀಕ್ಷೆ ರದ್ದು ಮಾಡಲು ಈಗಲೂ ಕಾಲ ಮಿಂಚಿಲ್ಲ ಎಂದು ಅನೇಕ ಪೋಷಕರು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಕೊರೋನಾ ಹೆಚ್ಚಳದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಕಂಟೇನ್ಮೆಂಟ್ ವಲಯಗಳು ಹೆಚ್ಚುತ್ತಿವೆ.
ಕಂಟೇನ್ಮೆಂಟ್ ವಲಯಗಳಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗುವುದು ತರವೇ ಎಂಬ ಆತಂಕವೂ ಎದುರಾಗಿದೆ. ನಿರ್ಬಂಧಿತ ಪ್ರದೇಶಗಳ ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆಯಲಾಗದಿದ್ದರೇ ಸಪ್ಲಿಮೆಂಟರಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಬಗ್ಗೆ ಸರಕಾರ ಚಿಂತಿಸಿದೆ.
ಆದರೆ ಇಂತಹ ವಲಯಗಳು ಹೆಚ್ಚುತ್ತಲೇ ಹೋದಾಗ ಪರೀಕ್ಷೆ ನಡೆಸುವುದಾದರೂ ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಬೆಂಗಳುರಿನಲ್ಲಿ ಸೋಮವಾರ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಖ್ಡೌನ್ಗೆ ಆದೇಶಿಸಿದ್ದಾರೆ.
ಅಲ್ಲದೇ ಈ ಪ್ರದೇಶಗಳ ಪರೀಕ್ಷಾರ್ಥಿಳಿಗೆ ಪರ್ಯಾಯ ಮಾರ್ಗ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಹೇಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗುತ್ತದೆ.
ಪ್ರತಿ ವಿದ್ಯಾರ್ಥಿ ತಲಾ 2 ಮುಸುಕುಗಳನ್ನು ಪಡೆಯಲಿದ್ದಾರೆ. ಪ್ರತಿ ತಾಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಜಾರಿಯಲ್ಲಿಡ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಅಲ್ಲದೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕರು, ಜೊತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕ್ವಾರಂಟೈನ್ಗೆ ಒಳಗಾಗಿದ್ದಲ್ಲಿ ಈ ಬಾರಿ ಪರೀಕ್ಷೆಗೆ ಹಾಜರಾಗಲು ವಿನಾಯ್ತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರಕಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

