ಚೀನಾ ಸೇನೆ ಹಿಂಪಡೆದಿರುವುದು ಸ್ವಾಗತಾರ್ಹ; ಹಿಂದೆ ಹೋದದ್ದಾದರೂ ಎಲ್ಲಿಂದ: ಪಿ. ಚಿದಂಬರಂ

ಭಾರತ-ಚೀನಾ ಗಡಿಯುದ್ದಕ್ಕೂ ಪಿಎಲ್‌ಎ (ಪಿಪಲ್ಸ್ ಲಿಬರೇಷನ್ ಆರ್ಮಿ) ನಿಯೋಜಿಸಿದ್ದ‌ ಸೇನಾ ಪಡೆಯು ಗಡಿಭಾಗದಿಂದ ಹಿಂದೆ ಸರಿದಿರುವುದು ಸ್ವಾಗತಾರ್ಹ. ಆದರೆ, ಚೀನಾ ಸೇನೆ ಎಲ್ಲಿಂದ ಹಿಂದೆ ಸರಿದಿದೆ? ಆ ಸ್ಥಳ ಯಾವುದು? ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಆಗ್ರಹಿಸಿದ್ದಾರೆ

ಜೂನ್‌ 15 ರಂದು ಭಾರತದ ಗಾಲ್ವಾನ್‌ ಕಣಿವೆಯಲ್ಲಿ ಉಭಯರಾಷ್ಟ್ರಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಜನ ಸೈನಿಕರನ್ನು ಚೀನಾದ  ಸೇನೆ ಹತ್ಯೆ ಮಾಡಿತ್ತು. ಈ ಘರ್ಷಣೆ ನಡೆದು ಸುಮಾರು 10 ದಿನಗಳ ನಂತರ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಭಾರತದ ಭೂಪ್ರದೇಶಕ್ಕೆ ಚೀನಾ ನುಸುಳಿಲ್ಲ. ಭಾರತದ ಪ್ರದೇಶವನ್ನು ಯಾರೂ ಆಕ್ರಮಿಸಿಲ್ಲ” ಎಂದು ಹೇಳಿದ್ದರು.

ಮೋದಿ ಅವರ ಹೇಳಿಕೆ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಚೀನಾ ಆ ಹೇಳಿಕೆಯನ್ನು ಬಳಸಿಕೊಂಡು ನಾವು ಭಾರತಕ್ಕೆ ನುಸುಳಿಲ್ಲ ಎಂದಮೇಲೆ ಚೀನಾ ಪ್ರದೇಶಕ್ಕೆ ನುಸುಳಿರುವವರು ಯಾರು? ಘರ್ಷಣೆಗೆ ಕಾರಣ ಭಾರತೀಯ ಸೇನೆ ಎಂದು ಸಮರ್ಥಿಸಿಕೊಂಡಿತ್ತು. ಈ ಮಧ್ಯೆ, ಕೇಂದ್ರ ಸರ್ಕಾರ, “ಚೀನಾ ಸೇನೆ ಭಾರತದ ಭೂ ಭಾಗದಿಂದ ಹಿಂದಕ್ಕೆ ಸರಿದಿದೆ” ಎಂದು ಹೇಳಿದ್ದು, ಮತ್ತಷ್ಟು ಪ್ರಶ್ನೆಗಳಿಗೆ ಗುರಿಯಾಗಿದೆ.

ಇದೇ ಕಾರಣಕ್ಕೆ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿರುವ ಮಾಜಿ ಕಣಕಾಸು ಸಚಿವ ಪಿ. ಚಿದಂಬರಂ, “ಭಾರತದ ಗಡಿಯಿಂದ ಚೀನಾ ಸೇನೆಗಳನ್ನು ಹಿಂಪಡೆದಿರುವುದು ಸ್ವಾಗತಾರ್ಹ. ಆದರೆ, ಚೀನಾದ ಸೈನ್ಯ ಭಾರತದ ಯಾವ ಭೂ ಭಾಗದಿಂದ ಹಿಂದೆ ಸರಿದಿದೆ? ಈಗ ಅವರು ಇರುವ ಸ್ಥಳ ಯಾವುದು? ಅದೇ ರೀತಿ ಭಾರತೀಯ ಪಡೆಗಳನ್ನು ಬೇರ್ಪಡಿಸಿದ ಸ್ಥಳ ಯಾವುದು?” ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ,  “ಜೂನ್ 15 ರಂದು ಏನಾಯಿತು? ಭಾರತ-ಚೀನಾ ಸೈನಿಕರ ನಡುವೆ ಯಾವ ಪ್ರದೇಶದಲ್ಲಿ ಸಂಘರ್ಷ ಉಂಟಾಗಿತ್ತು? ಚೀನಾ ಅಥವಾ ಅಥವಾ ಭಾರತೀಯ ಸೈನಿಕರ ಪೈಕಿ ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋದವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಲಿ. ಏಕೆಂದರೆ ದೇಶದ ಜನ ಇದರ ಬಗ್ಗೆ ಮಾಹಿತಿಯ ನಿರೀಕ್ಷೆಯಲ್ಲಿದ್ದಾರೆ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights