ಕೃಷಿ ಮಸೂದೆಗಳು ರೈತರ ಡೆತ್ವಾರೆಂಟ್ಗಳೆಂದು ಕಾಂಗ್ರೆಸ್ ವಿರೋಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ!
ರೈತರ ಡೆತ್ವಾರೆಂಟ್ ಎಂದು ಕಾಂಗ್ರೆಸ್ ಸೇರಿದಂತೆ ಪತ್ರಿ ಪಕ್ಷಗಳು ಹೇಳಿರುವ ಎರಡು ಕೃಷಿ ಮಸೂದೆ ಗಳಿಗೆ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ.
ರೈತರು ಮತ್ತು ಬೆಳೆಗಳ ವ್ಯಾಪಾರ ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020, ಈ ಎರಡೂ ಮಸೂದೆಗಳನ್ನು ರಾಜ್ಯಸಭೆಯು ಇಂದು (ಸೆ.20) ಅಂಗೀಕರಸಿದೆ.
ಮಸೂದೆ ಮಂಡನೆಯ ಸಂದರ್ಭದಲ್ಲಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದವು.
ರಾಜ್ಯಸಭೆಯಲ್ಲಿ ಮಸೂದೆಯ ಚರ್ಚೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಈ ಮಸೂದೆಗಳನ್ನು ಕೆಟ್ಟ ಕಲ್ಪನೆ ಮತ್ತು ಕೆಟ್ಟ ಸಮಯದ್ದು, ಇವುಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ಈ ಮಸೂದೆಗಳಿಂದ ಯಾರಿಗೆ ಒಳಿತಾಗಲಿದೆ ಎಂದು ಹೇಳಿಕೊಳ್ಳುತ್ತಿದೆಯೋ ಅದೇ ರೈತರು ಬೀದಿಗಿಳಿದಿದ್ದಾರೆ. ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಮಸೂದೆಯ ವಿರೋಧ ವ್ಯಕ್ತವಾಗುತ್ತಿದೆ. ಈ ಮಸೂದೆಗಳಿಂದ ಸರ್ಕಾರ ಕನಿಷ್ಟ ಬೆಂಬಲ ಬೆಲೆ ನೀಡಿ ಬೆಳೆಗಳನ್ನು ಖರೀದಿಸುವ ಪ್ರಕ್ರಿಯೆ ಕೊನೆಯಾಗಲಿದೆ. ಈ ಮಸೂದೆಗಳು ರೈತರ ಮರಣ ಶಾಸನವಾಗಿದ್ದು, ಕಾಂಗ್ರೆಸ್ ಇದಕ್ಕೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, ಕೃಷಿ ವಿಚಾರವು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಹಾಗಾಗಿ ಈ ಎರಡೂ ಮಸೂದೆಗಳು ಒಕ್ಕೂಟ ವ್ಯವಸ್ಥೆಯ ವಿರೋಧಿ ಮಸೂದೆಗಳಾಗಿವೆ. ಎರಡೂ ಮಸೂದೆಗಳನ್ನು ಅಂಗೀಕಾರಕ್ಕೂ ಮುನ್ನ ಆಯ್ಕೆ ಸಮಿತಿಗೆ ಕಳಿಸಬೇಕೆಂದು ಆಗ್ರಹಿಸಿದ್ದಾರೆ.
ದೇಶದ ಒಟ್ಟು ಜಿಡಿಪಿಗೆ ಕನಿಷ್ಠ 20% ಕೊಡುಗೆ ನೀಡುವ ರೈತರನ್ನು ಈ ಮಸೂದೆಗಳು ಗುಲಾಮರನ್ನಾಗಿ ಮಾಡುತ್ತವೆ ಎಂದು ಡಿಎಂಕೆ ಪಕ್ಷ ಹೇಳಿದೆ.
ವಿಪಕ್ಷಗಳ ಪತ್ರಿಭಟನೆಯ ನಡುವೆಯೇ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ.
ಇದನ್ನೂ ಓದಿ: ಕೃಷಿ ನೀತಿ ವಿರೋಧಿಸಿ ರೈತ ಸಾವು: ಯೂ-ಟರ್ನ್ ಹೊಡೆದ ಹರ್ಸಿಮ್ರತ್ ಕೌರ್ ಬಾದಲ್!

