ಜಾತಿ ದೌರ್ಜನ್ಯ: ವೈದ್ಯಕೀಯ ವಿದ್ಯಾರ್ಥಿಯ ಸಾಂಸ್ಥಿಕ ಕೊಲೆ!
ಜಾತಿ ಹೆಸರಿನಲ್ಲಿ ನಿಂದನೆಯಿಂದ ಮನನೊಂದ ಹಿಂದುಳಿದ ವರ್ಗದ ಡಾ.ಭಾಗವತ್ ದೇವಾಂಗನ್ ಎಂಬ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವಾಂಗನ್ ಅವರನ್ನು “ಮೇಲ್ಜಾತಿಯ” ಸವರ್ಣೀಯ ಸೀನಿಯರ್ ವಿದ್ಯಾರ್ಥಿಗಳು ಕೆಲವು ತಿಂಗಳುಗಳಿಂದ ಮಾನಸಿಕವಾಗಿ ಹಿಂಸಿಸುತ್ತಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಭಾಗವತ್ ದೇವಾಂಗನ್ ಜಂಜಗೀರ್ ಚಂಪಾದ ಸಣ್ಣ ಪಟ್ಟಣವಾದ ರಹೌದ್ ನಿವಾಸಿಯಾಗಿದ್ದು, ಅವರ ತಂದೆ ತಮ್ಮ ಊರಿನಲ್ಲಿ ಪಾತ್ರೆಗಳನ್ನು ಮಾರಾಟ ಮಾಡಿ ಜೀವನ ದೂಡುತ್ತಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಭಾಗವತ್ ಆರನೆ ತರಗತಿಯ ತನಕ ಸ್ಥಳೀಯ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ನಂತರ ನವೋದಯ ವಿದ್ಯಾಲಯದಲ್ಲಿ 12 ನೇ ತನಕ ಅಧ್ಯಯನ ಮಾಡಿ ಪುಣೆಯ ಬೈರಂಜಿ ಜೀಜೀಭಾಯ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದರು.
ಐದು ಸೀನಿಯರ್ ವಿದ್ಯಾರ್ಥಿಗಳು ನಿರಂತರ ಕಿರುಕುಳ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಜುಲೈ 1 ರಂದು ಕಾಲೇಜಿಗೆ ಸೇರಿದ ಹದಿನೈದು ದಿನಗಳ ನಂತರ, ಭಾಗವತ್ ತಮ್ಮ ಜಾತಿ ಮತ್ತು ಆರ್ಥಿಕ ಹಿನ್ನೆಲೆಯ ಕಾರಣಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತ ಎಂಬ ಕಾರಣಕ್ಕೆ ಪಂಚಾಯತ್ ಸಭೆಯಲ್ಲಿ ಅಧ್ಯಕ್ಷರನ್ನೇ ನೆಲದ ಮೇಲೆ ಕೂರಿಸಿ ಶೋಷಣೆ!
“ನಮ್ಮ ಸೀನಿಯರ್ಸ್ ನಮ್ಮ ಜಾತಿ ಮತ್ತು ಬಡತನವನ್ನು ಉಲ್ಲೇಖಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಭಾಗವತ್ ನನಗೆ ಪ್ರತಿಭಾರಿಯೂ ಹೇಳುತ್ತಿದ್ದ, ಆಡಳಿತ ಮಂಡಳಿಗೆ ಇದು ತಿಳಿದಿತ್ತು. ಆದರೆ ಮಧ್ಯಪ್ರವೇಶಿಸಿಲ್ಲ” ಎಂದು ಮೃತ ಭಾಗವತ್ ಸಹೋದರ ಪ್ರಹ್ಲಾದ್ ಹೇಳಿದ್ದಾರೆ.
“ಸರಿಯಾದ ಅಧ್ಯಯನವಿಲ್ಲದೆ ಮೀಸಲಾತಿ ಆಧಾರದಲ್ಲಿ ಪ್ರವೇಶ ಪಡೆದ್ದಾಗಿ, ತನ್ನನ್ನು ಪದೇ ಪದೇ ’ಅರ್ಹನಲ್ಲದವ’ ಎಂದು ಸೀನಿಯರ್ಗಳು ಕರೆಯುತ್ತಾರೆ” ಎಂದು ಹೇಳಿದ್ದಾಗಿ ಪ್ರಹ್ಲಾದ್ ಹೇಳುತ್ತಾರೆ.
ಕಿರುಕುಳದಿಂದಾಗಿ ಭಾಗವತ್ ಜುಲೈ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು, ಇದಕ್ಕಾಗಿ ಒಂದು ತಿಂಗಳ ಕಾಲ ಅವರನ್ನು ಮನೆಗೆ ಕಳುಹಿಸಲಾಯಿತ್ತು. ಇದಾಗಿ ಅವರ ಊಔಆ ಕೋರಿಕೆಯ ಮೇರೆಗೆ ಅವರು ಮರಳಿದ್ದರು ಎನ್ನಲಾಗಿದ್ದು, ಆದರೂ ಕಿರುಕುಳ ನಿಲ್ಲಲಿಲ್ಲ. ವಿಕಾಸ್ ದ್ವಿವೇದಿ, ಸಲ್ಮಾನ್ ಖಾನ್, ಅಮನ್ ಗೌತಮ್, ಶುಭಮ್ ಶಿಂಧೆ ಮತ್ತು ಅಭಿಷೇಕ್ ಗ್ಯಾಮೆ ಮುಂತಾದವರ ವಿರುದ್ಧ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಕುಟುಂಬವು ದೂರು ದಾಖಲಿಸಿದೆ.
ವೈದ್ಯಕೀಯ ಕಾಲೇಜು ಹಾಸ್ಟೆಲ್ನ ವಾರ್ಡನ್ ಮತ್ತು ಕಾಲೇಜಿನ ಆಂಟಿ ರ್ಯಾಗಿಂಗ್ ಸಮಿತಿಯ ಸದಸ್ಯರಾದ ಡಾ.ಅರವಿಂದ್ ಶರ್ಮಾ ಹಾಸ್ಟೆಲ್ ಒಳಗೆ ರ್ಯಾಗಿಂಗ್ ಅಥವಾ ಯಾವುದೇ ರೀತಿಯ ಕಿರುಕುಳ ನಡೆದಿಲ್ಲ ಎಂದು ಹೇಳಿದ್ದಾರೆ.
ಅಕ್ಟೋಬರ್ 7 ರಿಂದ, ಕುಟುಂಬ ಮತ್ತು ಸಮುದಾಯದ ಸದಸ್ಯರು ಪೊಲೀಸ್ ನಿಷ್ಕ್ರಿಯತೆಗಾಗಿ ಕ್ಯಾಂಡಲ್ ಮಾರ್ಚ್ ಮಾಡಿದ್ದು, ಒಂದು ವಾರದಿಂದ ತನಿಖೆ ನಡೆಸುತ್ತಿದ್ದರೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಉದ್ದೇಶಪೂರ್ವಕವಾಗಿ ವಿಷಯವನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಅವರ ಸಮುದಾಯ ಆರೋಪಿಸುತ್ತಿದೆ. ಭಾಗವತ್ ಅವರ ಬಾಲ್ಯ ಸ್ನೇಹಿತ ದಿಲೀಪ್ ದೇವಾಂಗನ್ “ಜಸ್ಟಿಸ್ ಫಾರ್ ಭಾಗವತ್ ದೇವಾಂಗನ್” ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗೆ 1000 ಪೋಸ್ಟ್ಕಾರ್ಡ್ಗಳನ್ನು ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಛತ್ತೀಸ್ಗಡ ಆರೋಗ್ಯ ಸಚಿವ ಟಿ.ಎಸ್.ಸಿಂಗ್ದೇವ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಗುರುವಾರ ಪತ್ರವೊಂದನ್ನು ಬರೆದಿದ್ದು, ಕಠಿಣವಾದ ರಾಗಿಂಗ್ ವಿರೋಧಿ ನಿಯಮಗಳ ಹೊರತಾಗಿಯೂ, ರ್ಯಾಗಿಂಗ್ನಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಳಸಮುದಾಯದ ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ತಳ್ಳುವ ವ್ಯವಸ್ಥಿತ ವಿಧಾನದ ಒಂದು ಭಾಗವಾಗಿ ಸೀನಿಯರ್ ವಿದ್ಯಾರ್ಥಿಗಳಿಂದ ದೈಹಿಕ ಮತ್ತು ಮಾನಸಿಕವಾಗಿ ನಡೆಯುವ ಜಾತಿವಾದಿ ಕಿರುಕುಳ ಹಾಗೂ ಆಡಳಿತ ಮಂಡಳಿಯ ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕಾಗಿ ಈ ಆತ್ಮಹತ್ಯೆಯನ್ನು ಅನೇಕ ಜನರು “ಸಾಂಸ್ಥಿಕ ಕೊಲೆ” ಎಂದು ಕರೆದಿದ್ದಾರೆ.
ಇದನ್ನೂ ಓದಿ: ಜಾಲತಾಣಿಗರಿಂದ ಅಜಿತ್ ಹನುಮಕ್ಕನವರ್ ಟ್ರೋಲ್; ಟ್ರೆಂಡಿಂಗ್ನಲ್ಲಿ “ಏಜೆಂಟ್ ಅಜಿತ್”

