ನಕಲಿ ಟಿಆರ್ಪಿ: ಹಗರಣದಲ್ಲಿ ಮತ್ತೆರಡು ವಾಹಿನಿಗಳು ಭಾಗಿ; ತನಿಖೆ ವೇಳೆ ಬಹಿರಂಗ
ನಕಲಿ ಟಿಲಿವಿಷನ್ ರೇಟಿಂಗ್ ಪಾಯಿಂಟ್ಸ್ (TRP) ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ವಿಚಾರಣೆ ವೇಳೆ ಮತ್ತೆರಡು ವಿಟಿ ವಾಹಿನಿಗಳು ಕೂಡ ಹಗರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಎರಡೂ ವಾಹಿನಿಗಳು ಜನರಿಗೆ ಹಣ ನೀಡಿ, ಟಿಆರ್ಪಿ ಹೆಚ್ಚಾಗುವಂತೆ ಮಾಡುತ್ತಿದ್ದವು. ಅವುಗಳಲ್ಲಿ ಒಂದು ಸುದ್ದಿ ವಾಹಿನಿ, ಮತ್ತೊಂದು ಮನರಂಜನಾ ವಾಹಿನಿಯಾಗಿದೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಈ ಸಂಬಂಧ, ನಕಲಿ ಟಿಆರ್ಪಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ ನಡಿ 174, 179, 201 ಮತ್ತು 204ರ ಹೊಸ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದಾಯ ಹೆಚ್ಚಿಸಲು ಸುಳ್ಳು ಟಿಆರ್ ಪಿ ತೋರಿಸಿದ ನಕಲಿ ಟಿಆರ್ ಪಿ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮತ್ತು ಮುಂಬೈನ ಎರಡು ಸ್ಥಳೀಯ ಚಾನೆಲ್ಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ವೇಳೆ ಮತ್ತೆರಡು ವಾಹಿನಿಗಳ ಹೆಸರು ಕೇಳಿ ಬಂದಿದೆ. ಆದರೆ, ಆ ವಾಹಿನಿಗಳ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
ನಿನ್ನೆ ತನಿಖಾ ತಂಡ ರಿಪಬ್ಲಿಕ್ ಟಿವಿ ಸಿಎಫ್ಒ ಎಸ್ ಸುಂದರಮ್ ಮತ್ತು ಕಾರ್ಯಕಾರಿ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಅವರ ವಿಚಾರಣೆ ನಡೆಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಏನಿದು TRP ಹಗರಣ; ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದದ್ದು ಹೇಗೆ? ಹಗರಣ ಹೇಗೆ ನಡೆಯುತ್ತದೆ?

