ಕನ್ನಡಿ ನೋಡಿ, ಹಿಮ್ಮುಖ ಗುರಿಯಿಟ್ಟು ಶೂಟ್ ಮಾಡುವ ಡೀನಾ:! ಹೊಸ ಟ್ರೆಂಡ್ಗೆ ನಾಂದಿ
ಹಸಿರು ಧರಿಸಿ, ತಂಪಾಗಿರುವ ಮಲೆನಾಡು ಶ್ರೇಣಿಯಲ್ಲಿರುವ ಕೊಡಗು ಜಿಲ್ಲೆಯ ಜನರ ಜೀವನದ ಅವಿಭಾಜ್ಯ ಅಂಗ ಕೋವಿ. ಇಲ್ಲಿ ಬಂದೂಕು ಕೇವಲ ತಮ್ಮ ಜೀವ ಮತ್ತು ತೋಟ ರಕ್ಷಣೆಗಾಗಿ ಮಾತ್ರವಲ್ಲ, ಪ್ರತಿಯೊಂದು ಸಂಭ್ರಮ, ಶೋಕ ಸಂದರ್ಭದಲ್ಲಿಯೂ ಬಳಕೆಯಾಗುತ್ತದೆ. ಹಬ್ಬಗಳಲ್ಲಿ ತೆಂಗಿನ ಕಾಯಿಗೆ ಶೂಟ್ ಮಾಡುವುದು, ಮದುವೆಗಳಂತಹ ಸಂಭ್ರದಲ್ಲಿಯೂ ಗುಂಡು ಹಾರಿಸುವುದು, ಯಾರಾದರೂ ಸತ್ತರೂ ಅಂತ್ಯಸಂಸ್ಕಾರದ ವೇಳೆ ಗುಂಡು ಹಾರಿಸಿ ಶೋಕ ವ್ಯಕ್ತಪಡಿಸಲಾಗುತ್ತದೆ.
ಕೊಡಗಿನಲ್ಲಿ ಗಂಡು- ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲರೂ ಕೋವಿ ಬಳಸುವುದರಲ್ಲಿ ಪರಿಣಿತರು. ಇವರೆಲ್ಲರ ನಡುವೆ ಬಂದೂಕು ಹಿಡಿದು ಕನ್ನಡಿ ನೋಡಿ ಹಿಮ್ಮುಖವಾಗಿ ಗುರಿಇಟ್ಟಯ ಶೂಟ್ ಮಾಡುವ ಕಲೆ ಕೊಡಗಿನ ಗೃಹಿಣಿಯೊಬ್ಬರಿಗೆ ಕೀರ್ತಿ ತಂದಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಸಮೀಪದ ತಾವಳಗೇರಿಯ ನಿವಾಸಿ ಕಳ್ಳಿಚಂಡ ಡೀನಾ ಉತ್ತಪ್ಪ ಇಂತಹ ಸಾಧನೆ ಮಾಡಿರುವವರು. ಸಾಮಾನ್ಯವಾಗಿ ಎದುರಿಗೆ ಇರುವ ವಸ್ತುವನ್ನು ನೋಡಿಯೇ ಗುರಿ ತಪ್ಪದಂತೆ ಶೂಟ್ ಮಾಡುವುದು ಸುಲಭವೇನಲ್ಲ. ಆದರೆ ಡೀನಾ ಉತ್ತಪ್ಪ ಹಿಮ್ಮುಖವಾಗಿ ಗನ್ ಅನ್ನು ಹೆಗಲೇರಿಸಿಕೊಂಡು ಕನ್ನಡಿಯಲ್ಲಿ ಟಾರ್ಗೆಟ್ ಇಟ್ಟಿರುವ ವಸ್ತುವಿನ ಬಿಂಬ ನೋಡುತ್ತಾ ಗುರಿ ತಪ್ಪದಂತೆ ಏರ್ ಗನ್ ನಿಂದ ಶೂಟ್ ಮಾಡುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿ, ಮೊಬೈಲ್ ಗೆಲ್ಲಿ: ಯೂತ್ ಕಾಂಗ್ರೆಸ್ ಹೊಸ ಅಭಿಯಾನ
ಗೃಹಿಣಿಯಾಗಿರುವ ಡೀನಾ ತಾವು ಪ್ರೌಢಶಾಲೆಯಲ್ಲಿದ್ದಾಗಲೇ ಏರ್ ಗನ್ ಶೂಟ್ ಮಾಡುತ್ತಿದ್ದರಂತೆ. ತಮ್ಮ ವಿವಾಹದ ಬಳಿಕ ಅದನ್ನು ಬಿಟ್ಟಿದ್ದರಂತೆ. ಆದರೆ ಕಳೆದ ಎರಡು ವರ್ಷಗಳ ಹಿಂದೆ ದಸರಾ ಸಂದರ್ಭದಲ್ಲಿ ಜಂಬೋ ಸರ್ಕಸ್ ನೋಡಲು ಹೋಗಿದ್ದರಂತೆ. ಸರ್ಕಸ್ ನಲ್ಲಿ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು, ಹಿಮ್ಮುಖವಾಗಿ ಶೂಟ್ ಮಾಡುತ್ತಿದ್ದದನ್ನು ನೋಡಿದ್ದ ಡೀನಾ ಅವರು ಅವರಿಂದ ಪ್ರಭಾವಿತರಾಗಿ ತಾನೂ ಏಕೆ ಇದನ್ನು ಪ್ರಯತ್ನಿಸಬಾರೆಂದು ಆಲೋಚಿಸಿ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ನಿರಂತರವಾಗಿ ಅಭ್ಯಾಸ ಮಾಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಅದರಲ್ಲಿ ಸಕ್ಸಸ್ ಆಗಿದ್ದರಂತೆ. ಆ ನಂತರವೂ ನಿರಂತರ ಪ್ರಯತ್ನದ ಫಲವಾಗಿ ಡೀನಾ ಅವರು ಈಗ ಕನ್ನಡಿಯಲ್ಲಿ ಟಾರ್ಗೆಟ್ ನ ಬಿಂಬ ನೋಡುತ್ತಾ ಹಿಮ್ಮುಖವಾಗಿ ಸಲೀಸಾಗಿ ಶೂಟ್ ಮಾಡುತ್ತಾರೆ. ಹೀಗೆ ಹಿಮ್ಮುಖವಾಗಿ ಶೂಟ್ ಮಾಡಿದ್ದ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ಗಮನಿಸಿದ್ದ ಕೊಡಗಿನ ಇನ್ನಿಬ್ಬರು ಯುವಕರು ಪ್ರಭಾವಿತರಾಗಿ ಅವರು ಕೂಡ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ಅಭ್ಯಾಸಿಸಿದ್ದಾರೆ. ಈಗ ಹಿಮ್ಮುಖವಾಗಿ ಶೂಟ್ ಮಾಡುವುದು ಕೊಡಗಿನಲ್ಲಿ ಟ್ರೆಂಡ್ ಆಗಿ ಬೆಳೆಯುತ್ತಿದೆ.
ಇದನ್ನೂ ಓದಿ: ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ ನಳಿನ್ ನೇತೃತ್ವದ ಬಿಜೆಪಿ: ಕರ್ನಾಟಕ ಕಾಂಗ್ರೆಸ್

