ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು: 3 ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ!
ಕರ್ನಾಟಕ ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪರಿಷತ್‌ನಲ್ಲಿ ಬಿಜೆಪಿ ಬಲ ಹೆಚ್ಚಾಗಿದೆ.
ಕಾಂಗ್ರೆಸ್ ವಶದಲ್ಲಿದ್ದ ಈಶಾನ್ಯ ಶಿಕ್ಷಕರ ಕ್ಷೇತ್ರ, ಜೆಡಿಎಸ್ ತೆಕ್ಕೆಯಲ್ಲಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಪಶ್ಚಿಮ ಪದವೀಧರ ಕ್ಷೇತ್ರವನ್ನು ಉಳಿಸಿಕೊಂಡಿದೆ, ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭ ತಡವಾದ ಕಾರಣ ಬುಧವಾರ (ಇಂದು) ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಹೊಮ್ಮಲಿದೆ.
ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ 75 ಸದಸ್ಯರು ಇರುವ ಮೇಲ್ಮನೆಯಲ್ಲಿ ಬಿಜೆಪಿಯ ಬಲ 30ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ 27 ಹಾಗೂ ಜೆಡಿಎಸ್ ಬಲ 13ಕ್ಕೆ ಇಳಿದಿದೆ. ಉಳಿದಂತೆ ಸಭಾಪತಿ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಇದನ್ನೂ ಓದಿ: ಉಪ ಚುನಾವಣೆ: ರಾಜರಾಜೇಶ್ವರಿ ಮತ್ತು ಶಿರಾದಲ್ಲಿ ಬಿಜೆಪಿಗೆ ಗೆಲುವು!
ಆಗ್ನೇಯ ಪದವೀಧರ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದಲ್ಲಿ ಮತ್ತು ಪಕ್ಷೇತರರು ಬಿಜೆಪಿ ಬೆಂಬಲ ನೀಡಿದಲ್ಲಿ ಬಿಜೆಪಿ ಬಲ 33ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಮೇಲ್ಮನೆಯಲ್ಲಿ ಬಹುಮತಕ್ಕೆ 38 ಸ್ಥಾನಗಳ ಅಗತ್ಯವಿದೆ.
ಈ ವರೆಗೆ ಸತತವಾಗಿ ಜೆಡಿಎಸ್’ನಿಂದ ಮೂರು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ 4ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದ ಸದಸ್ಯರಾಗಿದ್ದ ಕಾಂಗ್ರೆಸ್’ನ ಶರಣಪ್ಪ ಮಟ್ಟೂರು ಅವರನ್ನು ಸೋಲಿಸುವ ಮೂಲಕ ಶಶಿಲ್ ನಮೋಶಿ ಅವರೂ ನಾಲ್ಕನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರೊ.ಎಸ್.ವಿ.ಸಂಕನೂರ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕಳೆದ ಅಧಿವೇಶನದ ವೇಳೆ ಸರ್ಕಾರದ ಪ್ರಮುಖ ವಿಧೇಯಕಗಳ ಮಂಡನೆ, ಅನುಮೋದನೆ ವಿಚಾರದಲ್ಲಿ ಪಕ್ಷಪಾತ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಪಕ್ಷದ ನಾಯಕರಲ್ಲಿ ದೂರಿದ್ದರು. ಹೀಗಾಗಿ ಸಭಾಪತಿ ಪ್ರತಾಪಚಂದ್ರಶೆಟ್ಟಿಯವರನ್ನು ಕೆಳಗಿಳಿಸಿ ಬಿಜೆಪಿ ಸದಸ್ಯರನ್ನು ಸಭಾಪತಿ ಮತ್ತು ಉಪಸಭಾಪತಿಯಾಗಿರುವ ಧರ್ಮೇಗೌಡರನ್ನು ಅದೇ ಸ್ಥಾನದಲ್ಲಿ ಮುಂದುವರೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿಯದ್ದು ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ದುರುಪಯೋಗದ ಗೆಲವು: ಸಿದ್ದರಾಮಯ್ಯ

