ಕೃಷಿ ನೀತಿ ಹಿಂಪಡೆಯಲು ಒಪ್ಪುತ್ತಾ ಸರ್ಕಾರ; ಮೋದಿ ನಿವಾಸದಲ್ಲಿ ಸರ್ಕಾರ ಸಭೆ; ಸರ್ಕಾರ ಗಮಸಿಬೇಕಾದ ಹಲವು ಅಂಶಗಳು!

ರೈತ ವಿರೋಧಿ ಕೃಷಿ ಕಾನೂನುಗಳ ಬಗ್ಗೆ ಸರ್ಕಾರ ಮತ್ತು ರೈತ ಪ್ರತಿಭಟನಾಕಾರರ ನಡುವೆ ಐದನೇ ಸುತ್ತಿನ ಮಾತುಕತೆ ಇಂದು (ಶನಿವಾರ) ನಡೆಯಲಿದೆ. ಸಭೆಗೆ ಕೆಲವೇ ಗಂಟೆಗಳ ಮೊದಲು,  ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ  ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕೇಂದ್ರ ಸರ್ಕಾರ ಪದೇ ಪದೇ ಭರವಸೆ ನೀಡಿದರೂ ರೈತರು ಪ್ರತಿಭಟನೆ ಹಿಂಪಡೆಯುತ್ತಿಲ್ಲ. ಈ ವಾರ ನಡೆದ ಎರಡು ಸುತ್ತಿನ ಮಾತುಕತೆಗಳು ಮುರಿದು ಬಿದ್ದಿವೆ. ಇತ್ತೀಚಿನ ವರ್ಷಗಳಲ್ಲಿ ಐತಿಹಾಸಿಕ ಹೋರಾಟ ನಡೆಯುತ್ತಿದೆ. ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಸುತ್ತಿನ ಮಾತುಕತೆ ರೈತರು ಮತ್ತು ಸರ್ಕಾರದ ನಡುವೆ ನಡೆಯಲಿದೆ. ಅದಕ್ಕೂ ಮುಂಚೆ ಸರ್ಕಾರದ ಮಂತ್ರಿಮಂಡಲದ ಪ್ರಮುಖ ಮಂತ್ರಿಗಳು ಸಭೆ ನಡೆಸುತ್ತಿದ್ದಾರೆ.

ಕೆಲವು ತಿದ್ದುಪಡಿಗಳನ್ನು ಮಾಡುವ ಭರವಸೆಯನ್ನು ಸರ್ಕಾರ ನೀಡಿದರೂ, ಅದಕ್ಕೆ ಜಗ್ಗದ ರೈತರು ಮೂರೂ ಕೃಷಿ ನೀತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಅದಕ್ಕಾಗಿ ವಿಶೇಷ ಅಧಿವೇಶನ ಕರೆದು ಕೃಷಿ ನೀತಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ವಾರ ಮೂರನೇ ಸಭೆಯು ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ.

ರೈತ ಪ್ರತಿನಿಧಿಗಳು ಕೃಷಿ ಕಾನೂನಿನಲ್ಲಿರುವ ಅಸಮರ್ಪಕತೆಗಳ ಬಗ್ಗೆ 39 ಅಂಶಗಳನ್ನು ಮಂಡಿಸಿದ್ದಾರೆ. ಕಾನಾನಿನ ಕೆಲವು ತಿದ್ದುಪಡಿಗಳನ್ನು ನಿರಾಕರಿಸಿರುವ ರೈತರು, ಎಂಎಸ್‌ಪಿ ಖಾತ್ರಿ ಬಗ್ಗೆ ಲಿಖಿತ ಭರವಸೆ ಕೇಳಿದ್ಧಾರೆ. ಹೊಸ ಕಾನೂನುಗಳು ರೈತರನ್ನು ಕಾರ್ಪೋರೇಟ್‌ ಕುಣಿಕೆಗೆ ನೂಕುತ್ತವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಸರ್ಕಾರ ಹೊಸ ಕಾನೂನುಗಳನ್ನು ಸಮರ್ಥಿಸಿಕೊಂಡಿದೆ. ರೈತರಿಗೆ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡಲು ಮಾತ್ರ ಒಂದು ಆಯ್ಕೆಯನ್ನು ಹೊಸ ಕಾನೂನು ನೀಡಿದೆ ಎಂದು ಸರ್ಕಾರ ರೈತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ.

ಕೊರೊನಾ ಸಂದರ್ಭದಲ್ಲಿಯೂ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರ ಪ್ರಾಣ ಅಪಾಯದಲ್ಲಿದೆ. ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಇದು ರೈತರಿಗೆ ಅಪಾಯವನ್ನು ಉಂಟುಮಾಡುತ್ತದೆ. ಹಾಗಾಗಿ ಪ್ರತಿಭಟನಾ ನಿರತ ರೈತರನ್ನು ತಕ್ಷಣ ತೆರವುಗೊಳಿಸಬೇಕು ಅಥವಾ ಸ್ಥಳಾಂತರಿಸಲು ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಹಲವಾರು ಬಾಲಿವುಡ್ ನಟರು, ಕ್ರೀಡಾಪಟುಗಳು, ರಾಜಕೀಯ ಮುಖಂಡರು ಮತ್ತು ಸಾರಿಗೆ ಸಂಘಗಳು ಪ್ರತಿಭಟನೆಯನ್ನು ಬೆಂಬಲಿಸಿ ಬಂದಿವೆ. ವೈದ್ಯರು, ವಿದ್ಯಾರ್ಥಿಗಳು ರೈತರಿಗೆ ಅಗತ್ಯ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರತಿಭಟನೆಯ ಸಮಯದಲ್ಲಿ ಕನಿಷ್ಠ ಮೂರು ಸಾವುಗಳು ದಾಖಲಾಗಿವೆ. ಇದು ಕೇಂದ್ರ ಸರ್ಕಾರ ಅಮಾನವೀಯತೆಯ ಪರಿಣಾಮ ಎಂದು ರೈತರು ಹೇಳಿದ್ದಾರೆ. ದೆಹಲಿಯ ಶೀಲ ಗಾಳಿಯಿಂದ ಮತ್ತಷ್ಟು ಪ್ರಾಣಹಾನಿ ಉಂಟಾಗುವ ಸಾಧ್ಯತೆ ಇದೆ.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ಇಬ್ಬರು ರೈತರ ಕುಟುಂಬಗಳಿಗೆ ಪಂಜಾಬ್ ಸರ್ಕಾರ ತಲಾ  5 ಲಕ್ಷ ರೂ ಆರ್ಥಿಕ ನೆರವು ಪ್ರಕಟಿಸಿದೆ.

ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಇಂದಿನ ಸಭೆಯು ಮಹತ್ವವನ್ನು ಪಡೆದುಕೊಂಡಿದೆ. ರೈತರ ಆರೋಗ್ಯ-ಜೀವ, ಆಕ್ರೋಶಗಳ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕೃಷಿ ನೀತಿಗಳನ್ನು ಹಿಂಪಡೆಯುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇಂದು ಪ್ರಧಾನಿ ಮೋದಿಯವರ ಮನೆಯಲ್ಲಿ ನಡೆಯುತ್ತಿರುವ ಸಭೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.


ಇದನ್ನೂ ಓದಿ: ತೀವ್ರಗೊಂಡ ರೈತರ ಹೋರಾಟ: ಡಿಸೆಂಬರ್ 08 ರಂದು ಭಾರತ್‌ ಬಂದ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights