ಇಂದಿನಿಂದ ಚಳಿಗಾಲದ ಅಧಿವೇಶನ : ಪ್ರತಿಭಟನೆಗಿಳಿದ ಅನ್ನದಾತರು : ನಾಳೆ ಕರ್ನಾಟಕ ಬಂದ್ ಗೆ ಕರೆ….
ಕೇಂದ್ರದ ವಿರುದ್ಧ ದೇಶದ ಬೆನ್ನೆಲುಬು ಅನ್ನದಾತರ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಕೃಷಿ ವಿರೋಧಿ ಕಾನೂನುಗಳನ್ನು ವಿರೊಧಿಸಿ ರೈತರು ದೆಹಲಿಯಲ್ಲಿ ಕೆಲ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬೆನ್ನಲ್ಲೆ ಬೆಂಗಳೂರಿನಲ್ಲೂ ಇದರ ಕಿಚ್ಚು ಹರಡಿದ್ದು, ನಾಳೆ ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ.
ರಾಜ್ಯದಲ್ಲಿ ಇಂದಿನಿಂದ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಈ ಬಾರಿಯ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ವಿವಾದಿತ ಮಸೂದೆಗಳನ್ನು ಮಂಡನೆ ಮಾಡುವ ಸಾಧ್ಯತೆಗಳಿದ್ದು, ಇದೇ ವೇಳೆ ಸರ್ಕಾರದ ಹಲವು ವೈಫಲ್ಯಗಳನ್ನು ಸಭೆಯಲ್ಲಿ ಎತ್ತಿ ಹಿಡಿಯಲು ವಿರೋಧ ಪಕ್ಷಗಳು ಸಜ್ಜಾಗಿವೆ.
ನಾಳೆ ಭಾರತ್ ಬಂದ್ ಪ್ರಯುಕ್ತ ಕರ್ನಾಟಕ ಬಂದ್ ಗೂ ಕರೆಕೊಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ನಾಳೆಯಿಂದ ಕುರುಬೂರು ಶಾಂತಕುಮಾರ್ ಹಾಗೂ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ಸರ್ಕಲ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯೂ ನಡೆಯಲಿದೆ. ನಾಳೆ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆಯನ್ನು ರಾಜ್ಯದಲ್ಲೂ ರೈತರು ಮೊಳಗಿಸಲಿದ್ದಾರೆ.
ರಾಜ್ಯ ರಾಜಧಾನಿಗೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು ಸರ್ಕಾರಕ್ಕೆ ಕೃಷಿ ವಿರೋಧಿ ಕಾನೂನು ವಾಪಸ್ ಪಡೆಯುವಂತೆ ಆಗ್ರಹಿಸಲಿದ್ದಾರೆ. ಇನ್ನೂ ಡಿ.9ರಂದು ಬೆಳಗ್ಗೆ ರೈಲು ಮೂಲಕ ಸಾವಿರಾರು ಮಂದಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ ಕೊಡಲಿದ್ದು, 9ರಂದು 10 ಸಾವಿರ ರೈತರು ವಿಧಾನ ಸೌಧಕ್ಕೂ ಮುತ್ತಿಗೆ ಹಾಕಲಿದ್ದಾರೆ.
ಬುಧವಾರ 11 ಗಂಟೆಗೆ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನೆ ನಡೆಯಲಿದೆ. ನಂತರ ವಿಧಾನಸೌಧಕ್ಕೆ ಅನ್ನದಾತರು ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನಾಳಿನ ಬಂದ್ ಗೆ ರೈತ ಹೋರಾಟಗಾರರು, ಎಪಿಎಂಸಿ ಕೂಲಿ ಕಾರ್ಮಿಕರು, ಬೀದಿಬದಿ ವ್ಆಯಪಾರಿಗಳು, ವಾಟಾಳ್ ಕನ್ನಡ ಒಕ್ಕೂಟ, ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಅವರು ಬೆಂಬಲ ಕೊಡಲಿದ್ದಾರೆ ಇನ್ನು ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ, ಊಬರ್ ಟ್ಯಾಕ್ಸಿ, ಸಾರಿಗೆ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಲಿದೆ.

