ಪ್ರತಿಭಟನೆಗೆ ಮಣಿಯದ ಸರ್ಕಾರ : ರೈತರಿಂದ ಉಪವಾಸ ಸತ್ಯಾಗ್ರಹ..!
ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ಸುಮಾರು ಮೂರು ವಾರಗಳು ಪೂರ್ಣಗೊಳ್ಳುತ್ತಿದ್ದಂತೆ, ರೈತರು ಸೋಮವಾರ ಹಗಲಿನ ಉಪವಾಸ ಸತ್ಯಾಗ್ರಹವನ್ನು ಮಾಡಲಿದ್ದಾರೆ. ಸೋಮವಾರದಿಂದ ತಮ್ಮ ಆಂದೋಲನವನ್ನು ತೀವ್ರಗೊಳಿಸುವ ರೈತರ ಯೋಜನೆಯ ಭಾಗವಾಗಿ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ.
ಸಿಂಗು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಗುರ್ನಮ್ ಸಿಂಗ್ ಚಾದುನಿ, ನಾಯಕರು ಆಯಾ ಸ್ಥಳಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಲಿದ್ದಾರೆ ಎಂದಿದ್ದಾರೆ. ಮತ್ತೊಂದೆಡೆ ಇತ್ತೀಚೆಗೆ ತಂದ ಕೃಷಿ ಕಾನೂನುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಆಡಳಿತಾರೂಢ ಬಿಜೆಪಿ ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ರೈತರ ಸಭೆಗಳನ್ನು ಆಯೋಜಿಸುತ್ತಿದೆ. ಈ “ಕಿಸಾನ್ ಸಮ್ಮಲೇನ್” ಸೋಮವಾರದಿಂದ ಪ್ರಾರಂಭವಾಗಿ ಡಿಸೆಂಬರ್ 18 ರವರೆಗೆ ಮುಂದುವರಿಯುತ್ತದೆ.
ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಕಿಸಾನ್ ಸಮ್ಮೇಳನವನ್ನು ಉದ್ದೇಶಿಸಿ ಅಯೋಧ್ಯೆ, ಬಸ್ತಿಗಳಲ್ಲಿ ಮಾತನಾಡಲಿದ್ದು, ರಾಜ್ಯ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ರೈತರ ಸಭೆಯನ್ನು ಗೊಂಡಾದಲ್ಲಿ ಇದೇ 15ರಂದು ಉದ್ದೇಶಿಸಿ ಮಾತನಾಡಲಿದ್ದಾರೆ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತೊಂದು ಕಿಸಾನ್ ಸಮ್ಮೇಳನವನ್ನು ವಾರಣಾಸಿಯಲ್ಲಿ ಇದೇ 15ರಂದು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲ ತಿಳಿಸಿದ್ದಾರೆ.

