ವಿಸ್ಟ್ರಾನ್ ಕಂಪನಿ ಬಿಕ್ಕಟ್ಟು: ಕಾರ್ಮಿಕರಲ್ಲಿ ಕ್ಷಮೆ ಕೋರಿ, ಉಪಾಧ್ಯಕ್ಷನನ್ನು ವಜಾ ಮಾಡಿದ ಕಂಪನಿ
ಕೋಲಾರದ ಐಫೋನ್ ತಯಾರಿಕಾ ವಿಸ್ಟ್ರಾನ್ ಕಂಪೆನಿ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಕಾರ್ಮಿಕರು ಕಂಪನಿ ಮೇಲೆ ದಾಳಿ ನಡೆಸಿದ್ದ ಪ್ರಕರಣದ ಮೇಲ್ವಿಚಾರಣೆ ನಡೆಸಿರುವ ತೈವಾನ್ ಮೂಲಕ ವಿಸ್ಟ್ರಾನ್ ಕಾರ್ಪೋರೇಷನ್, ಕಂಪನಿಯ ಉಪಾಧ್ಯಕ್ಷನನ್ನು ಕರ್ತವ್ಯದಿಂದ ವಜಾಮಾಡಿದೆ. ಅಲ್ಲದೆ, ಕಾರ್ಮಿಕರಲ್ಲಿ ಕ್ಷಮೆ ಕೋರಿದೆ.
ಕೋಲಾರದಲ್ಲಿನ ವಿಸ್ಟ್ರಾನ್ ಕಾರ್ಮಿಕರು ತಮ್ಮ ದುಡಿಮೆಯ ವೇತನ ಪಾವತಿಸಿಲ್ಲ ಎಂದು ಕಳೆದ ವಾರ ಘಟಕದಲ್ಲಿ ದಾಂದಲೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕಂಪೆನಿಯು “ನರಸಾಪುರ ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಗಳ ನಂತರ, ಕೆಲವು ಕಾರ್ಮಿಕರಿಗೆ ಸರಿಯಾಗಿ ಅಥವಾ ಸಮಯಕ್ಕೆ ಸರಿಯಾಗಿ ಸಂಬಳ ನೀಡಲಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಈ ಬಗ್ಗೆ ನಾವು ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಎಲ್ಲಾ ಕಾರ್ಮಿಕರೊಂದಿಗೆ ಕ್ಷಮೆಯಾಚಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
“ವಿಸ್ಟ್ರಾನ್ನಲ್ಲಿ ಯಾವಾಗಲೂ ನಮ್ಮ ತಂಡದ ಸದಸ್ಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಮೊದಲ ಆದ್ಯತೆ. ಇದು ನಮ್ಮ ಪ್ರಮುಖ ಮೌಲ್ಯವಾಗಿದೆ” ಎಂದು ವಿಸ್ಟ್ರಾನ್ ಹೇಳಿದೆ.
ಇದನ್ನೂ ಓದಿ: ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ; ಕಾರುಗಳಿಗೆ ಬೆಂಕಿ ಹಚ್ಚಿ, ಕಚೇರಿ ಮೇಲೆ ನೌಕರರ ದಾಳಿ!
ಘಟನೆಯನ್ನು ಗಮನದಲ್ಲಿಟ್ಟುಕೊಂಡು ತಂಡಗಳನ್ನು ಪುನರ್ರಚಿಸುವುದಾಗಿ ಕಂಪನಿ ಘೋಷಿಸಿದೆ. “ಭಾರತದಲ್ಲಿ ನಮ್ಮ ವ್ಯವಹಾರದ ಮೇಲ್ವಿಚಾರಣೆಯ ಉಪಾಧ್ಯಕ್ಷರನ್ನು ವಜಾ ಮಾಡುತ್ತಿದ್ದೇವೆ. ನಾವು ನಮ್ಮ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತಿದ್ದು, ಈ ಸಮಸ್ಯೆಗಳು ಮತ್ತೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಂಡಗಳನ್ನು ಪುನರ್ರಚಿಸುತ್ತಿದ್ದೇವೆ” ಎಂದು ವಿಸ್ಟ್ರಾನ್ ಹೇಳಿದೆ.
ವಿಸ್ಟ್ರಾನ್ ಆಪಲ್ನ ಉನ್ನತ ಜಾಗತಿಕ ಪೂರೈಕೆದಾರ ಕಂಪೆನಿಯಲ್ಲಿ ಪ್ರಮುಖವಾಗಿದೆ. ಭಾರತದಲ್ಲಿ ಇದು ’ಐಫೋನ್ 7’ ಹ್ಯಾಂಡ್ಸೆಟ್ಗಳು ಮತ್ತು ’ಸೆಕೆಂಡ್ ಜನರೇಷನ್ ಐಫೋನ್ ಎಸ್ಇ’ ಡಿವೈಸ್ಗಳನ್ನು ಮಾಡುತ್ತದೆ.
ನಾಲ್ಕು ತಿಂಗಳ ಸಂಬಳಕ್ಕಾಗಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು ಡಿಸೆಂಬರ್ 12 ರಂದು ಬೆಳಿಗ್ಗೆ 6:30 ರ ಸುಮಾರಿಗೆ ತೀವ್ರ ಆಕ್ರೋಶಕ್ಕೆ ಒಳಗಾಗಿ ಹಿಂಸಾಚಾರಕ್ಕೆ ಇಳಿದಿದ್ದರು. ಹಿಂಸಾಚಾರದಲ್ಲಿ 437.40 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಕಂಪನಿ ಹೇಳಿಕೊಂಡಿದೆಯಾದರೂ ಕಾರ್ಮಿಕ ಸಂಘಟನೆಗಳ ಒಕ್ಕೂಟ ಇದನ್ನು ಅಲ್ಲಗೆಳೆದಿದೆ.
ಇದನ್ನೂ ಓದಿ: ‘ವಿಸ್ಟ್ರಾನ್’ ಕಂಪನಿ ದುರ್ಘಟನೆ: ಸತ್ಯಶೋಧನಾ ವರದಿ ಬಿಡುಗಡೆ; ವರದಿಯಲ್ಲಿ ಹೇಳಿದ್ದೇನು?

