ತಮಿಳುನಾಡು: ಪಡಿತರ ಚೀಟಿದಾರರಿಗೆ 2,500 ರೂ ಮತ್ತು ಗಿಫ್ಟ್ ಘೋಷಿಸಿದ ಸರ್ಕಾರ!
ಪಡಿತರ ಚೀಟಿ ಹೊಂದಿರುವ 2.21 ಕೋಟಿ ಕುಟುಂಬಗಳಿಗೆ ತಲಾ 2,500 ರೂ ನಗದು ಮತ್ತು ಪೊಂಗಲ್ ಕಿಟ್ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಘೋಷಿಸಿದ್ದಾರೆ.
ಹಣ ಮತ್ತು ಪೊಂಗಲ್ ಕಿಟ್ ವಿತರಣೆ ಜನವರಿ 4 ರಿಂದ ಪ್ರಾರಂಭವಾಗಲಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ. 2021ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪೊಂಗಲ್ ಕಿಟ್ನಲ್ಲಿ ಕಬ್ಬು, 1 ಕೆಜಿ ಅಕ್ಕಿ ಮತ್ತು ಸಕ್ಕರೆ ಇರುತ್ತದೆ. “ಪಡಿತರ ಚೀಟಿ ಹೊಂದಿರುವವರ ಮನೆ ಬಾಗಿಲಿಗೆ ಬಂದು ಅಧಿಕಾರಿಗಳು ಟೋಕನ್ಗಳನ್ನು ನೀಡುತ್ತಾರೆ. ಟೋಕನ್ನಲ್ಲಿ ನಮೂದಿಸಲಾದ ಸಮಯ ಮತ್ತು ದಿನಾಂಕದಂದು ಜನರು ಪಡಿತರ ಅಂಗಡಿಗಳಲ್ಲಿ ಉಡುಗೊರೆಯನ್ನು ಪಡೆಯಬಹುದು.” ಕೋವಿಡ್ ಮತ್ತು ಡೆಲ್ಟಾ ಪ್ರದೇಶದಲ್ಲಿನ ಚಂಡಮಾರುತದಿಂದಾಗಿ ಈ ವರ್ಷ ಹಲವಾರು ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದರಿಂದಾಗಿ ಈ ಉಡುಗೊರೆಯನ್ನು ಘೋಷಿಸಿದ್ದೇವೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!
ಥಾಯ್ (ಜನವರಿ) ಮಾಸವನ್ನು ತಮಿಳು ಜನರು ವಿಶೇಷ ದಿನಗಳೆಂದು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಪೊಂಗಲ್ ಮಾಡುತ್ತಾರೆ ಆದರೆ, ಈ ವರ್ಷ, ರೈತರು ಮತ್ತು ಇತರರು ಪೊಂಗಲ್ ಆಚರಿಸುವ ಸ್ಥಿತಿಯಲ್ಲಿಲ್ಲ. ಕೋವಿಡ್ -19 ರ ಪ್ರಭಾವವನ್ನು ಅಧ್ಯಯನ ಮಾಡಿದ ರಂಗರಾಜನ್ ಸಮಿತಿ ಜನರಿಗೆ ಆರ್ಥಿಕ ಸಹಾಯವನ್ನು ಶಿಫಾರಸು ಮಾಡಿದೆ. ಹಾಗಾಗಿ ಈ ಉಡುಗೊರೆಯನ್ನು ಘೋಷಿಸಲು ನಾವು ನಿರ್ಧರಿಸಿದ್ದೇವೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪೊಂಗಲ್ ಕಿಟ್ ಗಿಫ್ಟ್ ನೀಡಿರುವ ಪಳನೀಸ್ವಾಮಿ ಅವರದ್ದು “ಸ್ವಾರ್ಥಿ ನಡೆ” ಎಂದು ಡಿಎಂಕೆ ನಾಯಕ ಸ್ಟಾಲಿನ್ ಟೀಕಿಸಿದ್ದಾರೆ. ಇದಕ್ಕೆ ಪ್ರಕ್ರಿಯಿಸಿದರುವ ಪಳನೀಸ್ವಾಮಿ, ಬಡವರಿಗೆ ಸಹಾಯ ಮಾಡುವುದನ್ನು ಹೇಗೆ ಸ್ವಾರ್ಥಿ ಎಂದು ಕರೆಯಲಾಗುತ್ತದೆ. “ಬಡವರಿಗೆ ಅಗತ್ಯವಿರುವ ನೆರವು ನೀಡುವುದನ್ನು ಮತ್ತು ಯೋಜನೆಗಳನ್ನು ನಿಲ್ಲಿಸಲು ಪ್ರಯತ್ನಿಸುವವರು ಎಂದಿಗೂ ಗೆಲ್ಲುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ; ತಮಿಳುನಾಡಿನಲ್ಲಿ ಡಿಎಂಕೆ ಉಪವಾಸ ಸತ್ಯಾಗ್ರಹ!

