ಗೋಹತ್ಯೆ ನಿಷೇಧ ಕಾಯ್ದೆಗೆ ಸುಗ್ರೀವಾಜ್ಞೆ ತರಲು ಸಂಪುಟ ಸಭೆಯಲ್ಲಿ ಕಸರತ್ತು…

ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸೋಮವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಗೋಹತ್ಯೆ ನಿಷೇಧ ಕಾಯ್ದೆಗೆ ಸುಗ್ರೀವಾಜ್ಞೆ ತರಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನಪರಿಷತ್‍ನಲ್ಲಿ ಸರ್ಕಾರ ಮಂಡಿಸಿಲ್ಲ. ವಿಧಾನಪರಿಷತ್‍ನಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇರುವ ಕಾರಣಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿಲ್ಲ. ವಿವಾದಿತ ಭೂಸುಧಾರಣಾ ಕಾಯ್ದೆಯನ್ನು ವಿಧಾನಪರಿಷತ್‍ನಲ್ಲಿ ಸರ್ಕಾರ ಅನುಮೋದನೆ ಪಡೆದುಕೊಂಡಿದೆ. ಇದಕ್ಕೆ ಜೆಡಿಎಸ್ ಬೆಂಬಲದಿಂದ ಸುಲಭವಾಗಿ ವಿಧಾನಪರಿಷತ್ ಪಡೆದುಕೊಂಡಿದ್ದರೂ ಕೂಡ, ಗೋಹತ್ಯೆ ನಿಷೇಧ ಕಾಯ್ದೆ ಮಂಡಿಸಲು ಸರ್ಕಾರ ವಿಳಂಬ ಮಾಡಿತು. ಕೊರೊನಾ ಕಾರಣಕ್ಕೆ ಅಧಿವೇಶನವನ್ನು ನಾಲ್ಕೇ ದಿನಕ್ಕೆ ಮುಂದೂಡಿದ ಪರಿಣಾಮ ಬಿಜೆಪಿಯ ಕನಸು ಭಗ್ನವಾಯಿತು. ಮತ್ತೊಮ್ಮೆ ಸಭಾಪತಿಗಳ ಮೇಲಿನ ಅವಿಶ್ವಾಸ ನಿರ್ಣಯದ ನೆಪದಲ್ಲಿ ಒಂದು ದಿನದ ವಿಶೇಷ ಅಧಿವೇಶನ ಕರೆದರೂ ಅಂದು ರಾದ್ದಾಂತಕ್ಕೆ ಕಾರಣವಾಗಿ ಅರ್ಧಗಂಟೆಯಲ್ಲೇ ಕೊನೆಗೊಂಡಿದೆ.

ಗೋಹತ್ಯೆ ಮಸೂದೆಗೆ ಜೆಡಿಎಸ್ ಕೂಡ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಇಲ್ಲದೆ, ಚುನಾವಣೆಯಲ್ಲಿ ಮತದಾರರಿಗೆ ನೀಡಿದ ಭರವಸೆ ಈಡೇರಿಸಲು ಗೋಹತ್ಯೆ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಇಂದಿನ ಸಂಪುಟ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights