ವಿಧಾನ ಪರಿಷತ್‌ನಲ್ಲಿ ಗಲಾಟೆ: 84 ಪುಟಗಳ ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ!

ಡಿಸೆಂಬರ್‌ 15ರಂದು ನಡೆದ ವಿಧಾನ ಪರಿಷತ್‌ ವಿಶೇಷ ಅಧಿವೇಶನದಲ್ಲಿ ಪರಿಷತ್‌ ಸದಸ್ಯರು ಎಸಗಿದ ಗಲಾಟೆ-ದುರ್ವರ್ತನೆಯ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸಲು ನೇಮಿಸಲಾಗಿದ್ದ ಸದನ ಸಮಿತಿಯು ಎಂದು 84 ಪುಟಗಳ ಮಧ್ಯಂತರ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಲ್ಲಿಸಿದೆ.

ಪರಿಷತ್‌ನಲ್ಲಿ ಉಪಸಭಾಪತಿ ದಿ. ಧರ್ಮೇಗೌಡರನ್ನು ಸದಸ್ಯರು ಎಳೆದಾಡಿದ್ದು, ಸಭಾಪತಿ ಖುರ್ಚಿಯಿಂದ ಎಳೆದೊಯ್ದಿದ್ದರು. ಅಲ್ಲದೆ, ಮೂರು ಪಕ್ಷಗಳ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು. ಈ ಬಗ್ಗೆ ವಿಚಾರಣ ವರದಿ ನಡೆಸಲು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.

ವಿಧಾನ ಸೌಧದ ಸಭಾಪತಿಗಳ ಕೊಠಡಿಯಲ್ಲಿ ವರದಿ ಸಲ್ಲಿಸಿ ಮಾತಾನಾಡಿದ ಮರಿತಿಬ್ಬೇಗೌಡ. ಸಮಿತಿಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು, ಈವರೆಗೆ ಸಮಿತಿ ಒಟ್ಟು ಐದು ಸಭೆಗಳನ್ನು ನಡೆಸಿದ್ದು, ಹೆಚ್ಚಿನ ಸಮಯವಾಕಾಶ ಬೇಕಾಗಿದೆ. ಆದ್ದರಿಂದ, ಸಮಿತಿಯ ಮೊದಲ ನಾಲ್ಕು ಸಭೆಗಳ ಮಾಹಿತಿಯನ್ನೊಳಗೊಂಡ ವರದಿ ಹಾಗೂ ಸಾಕ್ಷ್ಯದಾರಗಳನ್ನು ಸಿ.ಡಿ ರೂಪದಲ್ಲಿ ಮಧ್ಯಂತರ ವರದಿಯಲ್ಲಿ ಸಲ್ಲಿಸಲಾಗಿದೆ ಎಂದರು.

ಸಂಪೂರ್ಣ ವರದಿ ಸಲ್ಲಿಸಲು ಇನ್ನೂ ಹೆಚ್ಚಿನ ಸಮಯವಾಕಾಶ ಕೇಳಲಾಗುವುದು. ಘಟನೆಯ ಕುರಿತು ಈವರೆಗೆ ನಡೆಸಿದ ಐದು ಸಭೆಗಳಲ್ಲಿ ಅಂದು ವಿಧಾನ ಪರಿಷತ್‍ನಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಕಾರ್ಯದರ್ಶಿ, ಮಾರ್ಷಲ್ಸ್ ಮತ್ತು ವಿಧಾನ ಪರಿಷತ್ ಸದಸ್ಯ ರಮೇಶ್ ಅವರಿಗೆ ನೋಟಿಸ್ ನೀಡಿ ಪ್ರಾಥಮಿಕ ಹೇಳಿಕೆ ಪಡೆಯಲಾಗಿದೆ. ಅಂದಿನ ಅಧಿವೇಶನದಲ್ಲಿ ಹಾಜರಿದ್ದು ಅಧಿವೇಶನದ ಕಲಾಪಗಳನ್ನು ಚಿತ್ರೀಕರಿಸಿರುವ ಖಾಸಗಿ ಸುದ್ದಿ ವಾಹಿನಿಗಳು, ವಿಧಾನ ಪರಿಷತ್‍ನ ವೆಬ್‍ಕಾಸ್ಟ್, ಲೋಕೋಪಯೋಗಿ ಇಲಾಖೆ ನಿರ್ವಹಿಸುವ ಸಿಸಿ ಕ್ಯಾಮೆರಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಘಟನೆ ಕುರಿತು ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಸಮಿತಿ ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಘಟನೆಯ ನಂತರ ನಡೆದ ಉಪ ಸಭಾಪತಿ ಧರ್ಮೆಗೌಡ ಅವರ ಸಾವಿನ ಕುರಿತು ಅವರು ಬರೆದಿಟ್ಟಿರುವರು ಎನ್ನಲಾಗಿರುವ ಪತ್ರವನ್ನು ಒದಗಿಸಲು ಕೋರಿ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿದೆ. ಆದ್ದರಿಂದ, 20 ದಿನಗಳ ಒಳಗಾಗಿ ಪೂರ್ಣ ವರದಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಸಮಿತಿಯ ಮಧ್ಯಂತರ ವರದಿಯನ್ನು ಸ್ವೀಕರಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಾತನಾಡಿ ಅಂದು ನಡೆದ ಅಹಿತಕರ ಘಟನೆ ಕುರಿತು ಐದು ಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ಸರ್ಕಾರ ರಚಿಸಿ ಆದೇಶ ಹೊರಡಿಸಿತ್ತು. ಆದರೇ, ಅದರಲ್ಲಿ ಹೆಚ್.ವಿಶ್ವನಾಥ್ ಮತ್ತು ಸಂಕನೂರು ಅವರು ಖಾಸಗಿ ಕಾರಣಗಳಿಂದ ಸಮಿತಿಗೆ ರಾಜಿನಾಮೆ ನೀಡಿದ್ದು, ಪ್ರಸ್ತುತ ಸಮಿತಿಯಲ್ಲಿ 3 ಸದಸ್ಯರಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಧಾನಪರಿಷತ್ ನಲ್ಲಿ ಗಲಾಟೆ : ಬಿಜೆಪಿ-ಕಾಂಗ್ರೆಸ್ ಸದಸ್ಯರಿಂದ ನೂಕಾಟ-ತಳ್ಳಾಟ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights