ಪ್ರಧಾನಿ ಘನತೆಯನ್ನು ಗೌರವಿಸುತ್ತೇವೆ; ನಮ್ಮ ಆತ್ಮಗೌರವಕ್ಕಾಗಿ ಹೋರಾಡುತ್ತಿದ್ದೇವೆ: ರೈತ ಮುಖಂಡ ನರೇಶ್ ಟಿಕಾಯತ್
ನಮ್ಮ ದೇಶದ ಪ್ರಧಾನಿ ಹುದ್ದೆಯನ್ನು ಹಾಗೂ ಪ್ರಧಾನ ಮಂತ್ರಿಗಳ ಘನತೆಯನ್ನು ಪ್ರತಿಭಟನೆ ನಡೆಸುತ್ತಿರುವ ರೈತರು ಗೌರಸುತ್ತಾರೆ. ಅಂತೆಯೇ, ತಮ್ಮ ಆತ್ಮ ಗೌರವವನ್ನು ಕಾಪಾಡಿಕೊಳ್ಳಲು ಬದ್ದರಾಗಿದ್ದಾರೆ ಎಂದು ರೈತ ಮುಖಂಡ ನರೇಶ್ ಟಿಕಾಯತ್ ಹೇಳಿದ್ದಾರೆ.
ಹಿಂಸಾಚಾರದ ನೆಪವೊಡ್ಡಿ ರೈತ ಹೋರಾಟಗಾರರನ್ನು ಬಂಧಿಸಲಾಗಿದೆ. ಒತ್ತಡಕ್ಕೆ ನಾವು ಮಣಿಯುವುದಿಲ್ಲ. ಸರ್ಕಾರ ಅವರನ್ನು ಬಿಡುಗಡೆ ಮಾಡಿ ಮಾತುಕತೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ರೈತರು ಮತ್ತು ಸರ್ಕಾರದ ನಡುವಿನ ತಿಕ್ಕಾಟಕ್ಕೆ ಗೌರವಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಟಿಕಾಯತ್ ಹೇಳಿದ್ದಾರೆ.
ಕೆಲವು ರೈತರ ಗುಂಪು ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿತ್ತು. ಅದನ್ನು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದು ಪ್ರಧಾನಿ ಹೇಳಿದ್ದಾರೆ. ಅಂದು ನಡೆದದ್ದು ಪ್ರತಿಭಟನೆಯನ್ನು ಹತ್ತಿಕ್ಕುವ ಪಿತೂರಿಯಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಆಗುವುದನ್ನು ಸಹಿಸಲು ಸಾಧ್ಯವಿಲ್ಲ. ತಿರಂಗ ಧ್ವಜಕ್ಕೆ ಅಗೌರವ ತೋರಿಸಲು ನಾವು ಯಾರಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಹುದ್ದೆಯನ್ನು ಗೌರವಿಸುತ್ತೇವೆ. ಅಂತೆಯೇ ನಮಗೆ ರೈತರ ಆತ್ಮಗೌರವವೂ ಕೂಡ ಅಷ್ಟೇ ಮುಖ್ಯ. ಅದನ್ನು ಕೂಡ ಸರ್ಕಾರವೂ ಕೂಡ ಗೌರವಿಸಬೇಕು ಎಂದು ಅವರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಸುಮಾರು 40 ಕೇಸುಗಳನ್ನು ದಾಖಲಿಸಿದ್ದಾರೆ. 200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ರೈತ ಮುಖಂಡರಿಗೆ ಲುಕ್‌ಔಟ್ ನೊಟೀಸ್ ನೀಡಿದ್ದಾರೆ. ಇದಕ್ಕೆಲ್ಲಾ ರೈತರು ಬಗ್ಗುವುದಿಲ್ಲ ಎಂದು ಟಿಕಾಯತ್ ತಿಳಿಸಿದ್ಧಾರೆ.
ಇದನ್ನೂ ಓದಿ: Fact Check: ಟ್ರಾಕ್ಟರ್ ಪರೇಡ್‌ನಲ್ಲಿ ರೈತರ ಮೇಲೆ ಪೊಲೀಸರ ಹಲ್ಲೆ; ಘಟನೆಗೆ ಸಂಬಂಧವಿಲ್ಲದ ಹಳೆಯ ಫೋಟೋಗಳು ವೈರಲ್!

