ಬಜೆಟ್ 2021ರ ಮೂಲಕ ರೈತ ವಿರೋಧಿ ಕೃಷಿ ಕಾಯಿದೆಗಳ ಜಾರಿ! ಪಡಿತರಕ್ಕೆ ಕತ್ತರಿ!

FCI ಮೂಲಕ ಸರ್ಕಾರ ರೈತರ ಸರಕನ್ನು ಖರೀದಿ ಮಾಡಿದರೆ ಮಾತ್ರ ರೈತರಿಗೆ MSP ದರವೂ , ಬಡವರಿಗೆ ಪಡಿತರವೂ ದೊರೆಯುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ.

ಆದರೆ ರೈತರಿಗೆ ಹಾಗು ಬಡವರಿಗೆ ನೇರವಾಗಿ ದರ ಕಡಿತ ಮಾಡುವುದು ಕಷ್ಟ.

ಆದ್ದರಿಂದಲೇ ಕೇಂದ್ರ ಸರ್ಕಾರ ಕುತಂತ್ರದಿಂದ ನೇರವಾಗಿ ತನ್ನ ಹೊಸ ಕೃಷಿ ಕಾಯಿದೆದೆಗಳಲ್ಲಿ MSP ಯನ್ನಾಗಲಿ ಅಥವಾ ಪಡಿತರರವನ್ನಾಗಲಿ ರದ್ದು ಮಾಡುತ್ತೇನೆಂದು ಹೇಳುತ್ತಿಲ್ಲ.

ಬದಲಿಗೆ ಅವೆರಡನ್ನೂ ಸಾಧ್ಯ ಗೊಳಿಸುವ ಮೂಲ FCI ಯನ್ನೆ ರದ್ದು ಮಾಡುವ ಅಥವಾ ಖಾಸಗೀಕರಿಸುವ ಯೋಜನೆಗಳನ್ನು ಸದ್ದಿಲ್ಲದಂತೆ ಜಾರಿ ಮಾಡುತ್ತಾ ಬಂದಿದೆ.

ಆ ಕುತಂತ್ರವನ್ನು ಮೋದಿ ಸರ್ಕಾರ 2021-22 ರ ಬಜೆಟ್ಟಿನಲ್ಲೂ ಇನ್ನೂ ಆಕ್ರಮಣಕಾರಿಯಾಗಿ ಮುಂದುವರೆಸಿದೆ.

ವಾಸ್ತವವಾಗಿ ಈ ವರ್ಷ FCI ನಿರ್ನಾಮದ ಕುತಂತ್ರ ಇನ್ನು ವೇಗವಾಗಿ ನಡೆಯಲಿದೆ ಎಂಬುದನ್ನು ಈ ಬಜೆಟ್ ಸಾರಿ ಹೇಳುತ್ತಿದೆ.

ರೈತರಿಂದ MSP ದರದಲ್ಲಿ ಧಾನ್ಯಗಳನ್ನು ಖರೀದಿಸಿ ಅವನ್ನು ರಿಯಾಯತಿ ದರದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಈ ದೇಶದ 5 ಲಕ್ಷ ರೇಷನ್ ಅಂಗಡಿಗಳ ಮೂಲಕ 80 ಕೋಟಿ ಬಡವರಿಗೆ ತಿಂಗಳಿಗೆ ಸರಾಸರಿ 7 ಕೆಜಿ ಧಾನ್ಯಗಳನ್ನು ತಲುಪಿಸಲು FCI ಗೆ 2019-20 ರ ಸಾಲಿನಲ್ಲಿ 2. 27 ಲಕ್ಷ ಕೋಟಿ ರು. ಗಳು ಖರ್ಚಾಗಿತ್ತು.

ಆದರೆ ಅದಕ್ಕೆ ಬಜೆಟ್ಟಿಂದ ಒದಗಿಸಿದ್ದು ಕೇವಲ 75,000 ಕೋಟಿ ಗಳನ್ನೂ ಮಾತ್ರ..

ಉಳಿದದ್ದನ್ನು ಸಾರ್ವಜನಿಕರ ಸಣ್ಣ ಉಳಿತಾಯವನ್ನು ಸಂಗ್ರಹಿಸುವ ಸಾರ್ವಜನಿಕ ಸಂಸ್ಥೆಯಾದ NSSF- ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ ಯಿಂದ- ಸಾಲ ಪಡೆದುಕೊಳ್ಳಲು ಸರ್ಕಾರ ಆದೇಶಿಸಿತು.

ಇದು 2016 ರಲ್ಲಿ ಮೋದಿ ಸರ್ಕಾರ FCI ಅನ್ನು ಖಾಸಗೀಕರಿಸಲು ನಿರ್ಧಾರ ಮಾಡಿದಾಗಿನಿಂದಲೂ ನಡೆದುಕೊಂಡು ಬರುತ್ತಿದೆ.

ಇದನ್ನು ಸರ್ಕಾರ ತನ್ನ ಧಣಿಗಳಾದ ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳಿಗೆ ತಾನು ಸಬ್ಸಿಡಿಗಳಿಗಾಗಿ ಹೆಚ್ಚು ವ್ಯಯ ಮಾಡದೆ ವಿತ್ತೀಯ ಶಿಸ್ತನ್ನು ಪಾಲಿಸುತ್ತಿದ್ದೇನೆಂದು ತೋರಿಸಿಕೊಳ್ಳಲು ಕೂಡಾ ಬಳಸಿಕೊಳ್ಳುತ್ತಿದೆ.

ಇದನ್ನೂ ಓದಿ:  ಮೋದಿಯ ಕಾರ್ಪೋರೆಟ್‌ ಮಿತ್ರರಿಗೆ ದೇಶದ ಸಂಪತ್ತು ನೀಡುವ ಹುನ್ನಾರ ಬಜೆಟ್‌ನಲ್ಲಿದೆ: ರಾಹುಲ್‌ಗಾಂಧಿ

ಆದರೆ ಈ ಬಜೆಟ್ಟಿಗೆ ಮುಂಚೆ ಅಂತರಾಷ್ಟ್ರೀಯ ಕಾರ್ಪೊರೇಟ್ ರೇಟಿಂಗ್ ಸಂಸ್ಥೆ ಗಳು , ಸರ್ಕಾರವು ತನ್ನ ನೈಜ ಸಬ್ಸಿಡಿ ವೆಚ್ಚಗಳನ್ನು ಕದ್ದು-ಮುಚ್ಚಿ ಮಾಡುತ್ತಿರುವ ಬಗ್ಗೆ ಮತ್ತು ಬಜೆಟ್ಟಿನಲ್ಲಿ ಪಾರದರ್ಶಕತೆ ತೋರದಿರುವ ಬಗ್ಗೆ ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಇದರ ಜೊತೆಗೆ ಭಾರತದ ದೇಶದ ಬಡವರ ಆಹಾರ ಭದ್ರತೆಗೆಂದು ಸಬ್ಸಿಡಿ ಕೊಡಲು WTO ಕೊಟ್ಟಿದ ಗಡುವು 2017 ಕ್ಕೆ ಮುಕ್ತಾಯವಾಗಿದೆ. ಅಲ್ಲದೆ, FCI ಅನ್ನು ಮುಚ್ಚಿ ಹಾಕಿ ಧಾನ್ಯ ಮಾರಾಟದಲ್ಲಿ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಕೊಡಬೇಕೆಂಬ ಒತ್ತಡವು ಆದಾನಿ-ಅಂಬಾನಿ ಹಾಗು ಅವರ ವಿದೇಶಿ ಪಾಲುದಾರರ ದೈತ್ಯ ಧಾನ್ಯ ಸಗಟುದಾರರಿಂದ ಹೆಚ್ಚಾಗಿದೆ.

ಈ ಎಲ್ಲಾ ಒತ್ತಡಗಳಿಗೆ ಮಣಿದು ಸರ್ಕಾರ ಈ ಸಾಲಿನಿಂದ FCI ಗೆ NSSF ಇಂದ ಸಾಲ ಪಡೆದುಕೊಳ್ಳುವ ಪರಿಪಾಠವನ್ನು ನಿಲ್ಲಿಸಿದೆ.

ಮತ್ತು ಆಹಾರ ಸರಬರಾಜು ಬಾಬತ್ತಿನಿಂದಲೇ NSSF ಗೆ 1.5 ಲಕ್ಷ ಕೋಟಿಗಳನ್ನೂ ವಾಪಸ್ ಮಾಡಿದೆ.

2021-22 ರ ಬಜೆಟ್ಟಿನಲ್ಲಿ FCI ನ ಸಬ್ಸಿಡಿಗೆ ಅಗತ್ಯವಾಗಿರುವ ಮೊತ್ತವನ್ನು ಬಜೆಟ್ಟಿನಿಂದಲೇ ಪೂರೈಸಿರುವದಾಗಿ ಮೋದಿ ಸರ್ಕಾರ ಹೇಳಿಕೊಂಡಿದೆ.

ಆದರೆ ಎಷ್ಟು?

2019-20 ರ ಸಾಲಿನಲ್ಲಿ ದೇಶದ ಆರ್ಥಿಕತೆ ಮಂದಗತಿಗೆ ತಲುಪಿ ಉದ್ಯೋಗ ಮತ್ತು ಆದಾಯಗಳು ಕಡಿಮೆಯಾಗುತ್ತಿದ್ದಾಗಲೇ FCI ಗೆ ಬಜೆಟ್ ಮತ್ತು ಬಜೆಟ್ಟೇತರ ಮೂಲದಿಂದ ಒದಗಿಸಿದ ಮೊತ್ತ 2.27 ಲಕ್ಷ ಕೋಟಿ ರೂಪಾಯಿಗಳು ..

ಆದರೆ, 2020-21 ರ ಸಾಲಿನಲ್ಲಿ ಕೋವಿಡ್ ಅಪ್ಪಳಿಸಿತು. ಈ ದೇಶದ 14 ಕೋಟಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡರು. ವಾಪಸ್ ಹಳ್ಳಿಗಳಿಗೆ ಮರಳಿದರು. ಲಾಕ್ ಔಟ್ ಕಾರಣಕ್ಕೆ ಬೆಳೆದದ್ದನ್ನು ಮಾರಲು ಆಗದೆ ರೈತಾಪಿ, ಅದರಲ್ಲೂ ಈ ದೇಶದ ಶೇ. 86 ರಷ್ಟು ಸಣ್ಣ ರೈತಾಪಿ, ಆದಾಯವನ್ನು ಕಳೆದುಕೊಂಡರು..

ಇದನ್ನೂ ಓದಿ: ಕೇಂದ್ರ ಸರ್ಕಾರದ 2021ರ ಬಜೆಟ್‌ ಮಂಡನೆ: ಆಯವ್ಯಯದ ಪ್ರಮುಖ ಅಂಶಗಳು ಹೀಗಿವೆ!

ಆದರೆ ಮೋದಿ ಸರ್ಕಾರ ವು ರೈತರ ಆದಾಯ ಮತ್ತು ಉದ್ಯೋಗಗಳನ್ನು ಖಾತರಿ ಮಾಡುವ ಉದ್ದೇಶವನ್ನೇ ಹೊಂದಿರಲಿಲ್ಲ. ಆದರೆ ದೇಶಾದ್ಯಂತ ಸರ್ಕಾರದ ಈ ನಿಶ್ಕರುಣಿ ಧೋರಣೆಯ ಬಗ್ಗೆ ಪ್ರತಿರೋಧ ಬಂದ ಮೇಲೆ ಆರು ತಿಂಗಳ ಕಾಲ ಹೆಚ್ಚುವರಿ ಆಹಾರವನ್ನು ಪಡಿತರದ ಮೂಲಕ ಒದಗಿಸಲು ಒಪ್ಪಿಕೊಂಡಿತ್ತು.

ಈ ಬಾಬತ್ತಿಗಾಗಿ 2020-21 ರ ಸಾಲಿನಲ್ಲಿ FCI- ಪಡಿತರ ಬಾಬತ್ತಿನ ವೆಚ್ಚವು 2.27 ಲಕ್ಷ ಕೋಟಿ ಯಿಂದ 3.44 ಲಕ್ಷ ಕೋಟಿಗಳಿಗೇರಿತ್ತು .

2021-22 ರ ಈ ಸಾಲಿನಲ್ಲಿ, ವ್ಯಾಕ್ಸಿನ್ ಬಂದರೂ , ವರ್ಷ ಕಳೆದರು ಜನರ ಬದುಕಿನ ಪರಿಸ್ಥಿತಿಗಳಲ್ಲಿ ಯಾವುದೇ ಬಗೆಯ ಗಮನಾರ್ಹ ಸುಧಾರಣೆಯಾಗಿಲ್ಲ.

ಹೀಗಾಗಿ ಏನಿಲ್ಲವೆಂದರೂ ಕಳೆದ ವರ್ಷ ಪಡಿತರ ವ್ಯವಸ್ಥೆಗೆ ವೆಚ್ಚ ಮಾಡಿದಷ್ಟೇ ಮೊತ್ತವನ್ನು ಈ ವರ್ಷವೂ FCI- ಪಡಿತರ ಸಬ್ಸಿಡಿ ಯನ್ನು ಸರ್ಕಾರ ನೀಡಬೇಕಿತ್ತು. ಏನಿಲ್ಲವೆಂದರೂ ಕನಿಷ್ಠ ಕೋವಿಡ್ ಪೂರ್ವದಷ್ಟು ಮಟ್ಟಿಗಾದರೂ ಒದಗಿಸಬೇಕಿತ್ತು.

ಆದರೆ 2021-22 ರ ಬೆಜೆಟ್ಟಿನಲ್ಲಿ FCI- ಪಡಿತರ ಸಬ್ಸಿಡಿಗಾಗಿ ಮೋದಿ ಸರ್ಕಾರ ಒದಗಿಸಿರುವುದು ಕೇವಲ 2.02 ಲಕ್ಷ ಕೋಟಿ ಮಾತ್ರ.

ಅಂದರೆ ಕೋವಿಡ್ ಪೂರ್ವ ವರ್ಷವಾದ 2019-20 ರ ಸಾಲಿಗಿಂತಲೂ 25,000 ಕೋಟಿ ಕಡಿಮೆ!

ಅಷ್ಟು ಮಾತ್ರವಲ್ಲ.

ಇದನ್ನೇ ಹಣಕಾಸು ಮಂತ್ರಿ ತನ್ನ ಬಜೆಟ್ ಭಾಷಣದಲ್ಲಿ ಹೆಗ್ಗಳಿಕೆಯಾಗಿ ಹೇಳಿಕೊಳ್ಳುತ್ತಾರೆ.

ಉದಾಹರಣೆಗೆ ಹೇಗೆ ಪ್ರತಿವರ್ಷ ಸರ್ಕಾರ ತನ್ನ ಜನಕಲ್ಯಾಣ ವೆಚ್ಚವನ್ನು ಕಡಿಮೆ ಮಾಡುತ್ತಾ, ತನ್ನ ಅಂತರರಾಷ್ಟ್ರೀಯ ಕಾರ್ಪೊರೇಟ್ ಧಣಿಗಳ ಪರ್ಮಾನನ್ನು ಅನುಸರಿಸುತ್ತಿದ್ದೇವೆ ಎಂದು ಸಾಬೀತು ಪಡಿಸುವ-ಬಜೆಟ್ ಜೊತೆಗೆ ಕಡ್ಡಾಯವಾಗಿ ಮಂಡಿಸುವ – ಮಧ್ಯಮಾವಧಿ ವಿತ್ತೀಯ ಕಾರ್ಯಕ್ರಮ- MTFP- ವರದಿಯಲ್ಲಿ :

..this shows reduction of 43.5 percent year-on-year against RE 2020-21, which indicates the undercurrent of subsidy rationalisation in the Government spending ..”

(ಇದು 2020-21 ರ ಪರಿಷ್ಕೃತ ಬಜೆಟ್ಟಿಗಿಂತ ವರ್ಷಾನುವಾರು ಶೇ. 43.5 ರಷ್ಟು ವೆಚ್ಚ ಕಡಿತವನ್ನು ಸೂಚಿಸುತ್ತದೆ ಹಾಗು ಸಬ್ಸಿಡಿ ವೆಚ್ಚವನ್ನು ಗಮನಾರ್ಹವಾಗಿ ಕಡಿತಗೊಳಿಸುವ ಸರ್ಕಾರದ ಧೋರಣೆಯು ಅಂತರ್ಗತವಾಗಿ ಹರಿದಿರುವುದನ್ನು ಸೂಚಿಸುತ್ತದೆ ) ಎಂದು ಲಜ್ಜೆಗೆಟ್ಟು ಕೊಚ್ಚಿಕೊಳ್ಳುತ್ತದೆ.

ಇದರ ಜೊತೆಗೆ ಸರ್ಕಾರವು ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಿಸುವ ಅಥವಾ ಮುಚ್ಚಿಬಿಡುವ ಇಂಗಿತವನ್ನು ಈ ಬಜೆಟ್ಟಿನಲ್ಲಿ ಸ್ಪಷ್ಟವಾಗಿಯೇ ಘೋಷಿಸಿದೆ.

ಹೀಗೆ FCI ಗೆ ಸಂಪನ್ಮೂಲಗಳನ್ನು ಒದಗಿಸದೆ ಉಸಿರುಗಟ್ಟಿಸಿ ಸಾಯುವಂತೆ ಮಾಡಿ ಆ ಮೂಲಕ ರೈತರ MSP ಹಾಗು ಬಡವರಿಗೆ ಪಡಿತರ ಎರಡನ್ನು ಕಡಿತಗೊಳಿಸುವ ಯೋಜನೆ ಈ ಬಜೆಟ್ಟಿನಲ್ಲಿ “ಅಂತರ್ಗಾಮಿನಿಯಾಗಿ” ಮಾತ್ರವಲ್ಲದೆ ಸ್ಪಷ್ಟ ನಿಲುವಾಗಿಯೂ ಘೋಷಿಸಲ್ಪಟ್ಟಿದೆ

ಆದ್ದರಿಂದ ಇದು ರೈತ ವಿರೋಧಿ , ಬಡವಿರೋಧಿ ಬಜೆಟ್ಟು ಮಾತ್ರವ್ವಲ್ಲ., ದೇಶವನ್ನು ಕಾರ್ಪೊರೇಟುಗಳಿಗೆ ಹರಾಜು ಹಾಕುವ ಬಜೆಟ್ಟು ಆಗಿದೆ.

ಆದ್ದರಿಂದಲೇ MSP ಯ ಕಾಯಿದೆಕರಣಕ್ಕೆ ಹೋರಾಡುತ್ತಲೇ ಕಡ್ಡಾಯವಾಗಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಉಳಿವಿಗಾಗಿಯೂ ಹೋರಾಡಬೇಕಿದೆ.

– ಶಿವಸುಂದರ್

ಇದನ್ನೂ ಓದಿ: ಕೃಷಿ ಕಾಯ್ದೆಗಳು: ಗೆದ್ದು ಸೋಲುತ್ತಿರುವ ಮೋದಿ; ಸೋತು ಗೆಲ್ಲುತ್ತಿದ್ದಾರೆ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights