ರಾಜ್ಯದ ಜನರನ್ನು ಕಾಡುತ್ತಿದಿಯಾ ಮಾನಸಿಕ ಖಿನ್ನತೆ? ಪ್ರತಿನಿತ್ಯ 2 ಸಾವಿರ ಜನ ನಿಮ್ಹಾನ್ಸ್ ಗೆ ಭೇಟಿ!
ಮಹಾಮಾರಿ ಕೊರೊನಾ ಬಂದಿದ್ದೇ ಬಂದಿದ್ದು ರಾಜ್ಯದಲ್ಲಿ ಹೆಚ್ಚು ಜನ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಯಾಕೆಂದ್ರೆ ಪ್ರತಿನಿತ್ಯ ನಗರದ ನಿಮ್ಹಾನ್ಸ್ ಮುಂದೆ 2 ಸಾವಿರಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯಲು ಕ್ಯೂ ನಿಲ್ಲುತ್ತಿದ್ದಾರೆ.
ಕೊರೊನಾ ಬರುವ ಮುಂಚೆ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಗೆ ಪ್ರತಿನಿತ್ಯ ಬೆರಳೆಣಿಕೆಯಷ್ಟು ಜನ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ 2 ಸಾವಿರಕ್ಕೂ ಹೆಚ್ಚು ಜನ ಬೆಳಿಗ್ಗೆ 5 ಗಂಟೆಯಿಂದಲೇ ಕ್ಯೂ ನಿಲ್ಲುತ್ತಿದ್ದಾರೆ.
ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು ಜೀವನ ನಡೆಸಲು ಕಷ್ಟವಾಗುತ್ತಿದೆ. ಮಾತ್ರವಲ್ಲದೇ ಎಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ವೈದ್ಯರ ಪ್ರಕಾರ ಆಸ್ಪತ್ರೆಗೆ 15 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ಹೆಚ್ಚು ಜನ ಭೇಟಿ ನೀಡುತ್ತಿದ್ದಾರೆ. ಆದರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಅಷ್ಟೂ ರೋಗಿಗಳಿಗೆ ಕೌನ್ಸಲಿಂಗ್ ಅವಶ್ಯಕತೆ ಇದ್ದು ಅವರ ಆತ್ಮಸಮಾಲೋಚನ ಮಾಡಲು 2 ಗಂಟೆಯಾದರೂ ಬೇಕು.
ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯಲು ಸಾವಿರಾರು ಜನ ಬೆಳಿಗ್ಗೆ 5 ಗಂಟೆಗೆ ಟೋಕನ್ ಪಡೆದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳು ಆಸ್ಪತ್ರೆಯಲ್ಲಿ ಬಳಿ ಸಾಮಾನ್ಯವಾಗಿದೆ. ದೂರದ ಊರುಗಳಿಂದ ಬರುವ ಅಧಿಕ ಜನರಿಗೆ ವೈದ್ಯರನ್ನು ಸಂಪರ್ಕಿಸುವುದೇ ಕಷ್ಟಸಾಧ್ಯವಾಗುತ್ತಿದೆ. ಪ್ರತಿದಿನ ಎರಡರಿಂದ ಮೂನ್ನೂರು ಜನರನ್ನು ಪರೀಕ್ಷಿಸಲು ಸಾಧ್ಯವಾಗುತ್ತಿದ್ದು ಪ್ರತಿಯೊಬ್ಬರನ್ನು ಪರೀಕ್ಷಿಸುವುದು ವಿಳಂಬವಾಗುತ್ತಿದೆ.
ಒಟ್ಟಿನಲ್ಲಿ ಕೊರೊನಾ ಬಂದ ಬಳಿಕ ನಿಮ್ಹಾನ್ಸ್ ಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿದ್ದು, ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಹೋದಲ್ಲಿ ಇದು ಕೂಡ ಅಪಾಯದ ಹಂತ ತಲುಪುವುದರಲ್ಲಿ ಅನುಮಾನವೇ ಇಲ್ಲ.

