TMC ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ BJP ಕಾರ್ಯಕರ್ತನ ತಾಯಿ ಸಾವು!

ಟಿಎಂಸಿ ಕಾರ್ಯಕರ್ತರಿಂದ ಥಳಿತಕ್ಕೊಳಗಾಗಿದ್ದರು ಎಂದು ಆರೋಪಿಸಲಾಗಿದ್ದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ 85 ವರ್ಷದ ಶೋಭಾ ಮಜುಂದಾರ್ ಅವರು ಸೋಮವಾರ ನಿಧನರಾಗಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನಿಮ್ತಾದಲ್ಲಿ ಗೋಪಾರ್ಲ್ ಮಜುಂದಾರ್‌ ಅವರ ತಾಯಿ ಶೋಭಾ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲಿನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಕಳೆದ ತಿಂಗಳು (ಫೆಬ್ರವರಿಯಲ್ಲಿ) ಟಿಎಂಸಿಯ ಮೂವರು ಕಾರ್ಯಕರ್ತರು ಅವರ ಮನೆಯ ಮೇಲೆ ದಾಳಿ ನಡೆಸಿ ತಮ್ಮ ತಾಯಿಯ ಮೇಲೆ ಹಲ್ಲೆ ಮಾಡಿದ್ದರು ಎಂದು ಗೋಪಾಲ್ ಮಜುಂದಾರ್ ಆರೋಪಿಸಿದ್ದರು.

“ನಿಮ್ತಾದ ಹಿರಿಯ ತಾಯಿ ಶೋಭಾ ಮಜುಂದಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ತನ್ನ ಮಗ ಗೋಪಾಲ್ ಮಜುಂದಾರ್ ಬಿಜೆಪಿಯಲ್ಲಿದ್ದ ಕಾರಣಕ್ಕಾಗಿ ಆಕೆ ತನ್ನ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು. ಬಿಜೆಪಿ ಅವರ ತ್ಯಾಗವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತದೆ. ಹಾಗೆಯೇ, ಬಂಗಾಳದ ತಾಯಂದಿರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ಬಿಜೆಪಿ ಯಾವಾಗಲೂ ಹೋರಾಡುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಆಧ್ಯಕ್ಷ ಜೆಡಿ ನಡ್ಡಾ ಟ್ವೀಟ್‌ ಮಾಡಿದ್ದಾರೆ.

“ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಬಂಗಾಳದ ಮಗಳು ಶೋವಾ ಮಜುಂದಾರ್ ಜಿ ಅವರ ನಿಧನವು ನೋವುತಂದಿದೆ.  ಅವರ ಕುಟುಂಬದ ನೋವು ಮತ್ತು ಗಾಯಗಳು ಮಮತಾ ದೀದಿಯನ್ನು ದೀರ್ಘಕಾಲ ಕಾಡುತ್ತವೆ. ಬಂಗಾಳ ಹಿಂಸಾಚಾರ ರಹಿತ ಸಮಾಜಕ್ಕಾಗಿ ಹೋರಾಡುತ್ತದೆ. ಬಂಗಾಳವು ನಮ್ಮ ಸಹೋದರಿಯರು ಮತ್ತು ತಾಯಂದಿರ ಸುರಕ್ಷಿತಕ್ಕಾಗಿ ಹೋರಾಡಲಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

“ಅವರು ನನ್ನ ತಲೆ ಮತ್ತು ಕುತ್ತಿಗೆಗೆ ಹೊಡೆದರು. ಅವರು ನನ್ನ ಮುಖಕ್ಕೂ ಹೊಡೆದರು. ನನಗೆ ಭಯವಾಗಿದೆ. ಇದರ ಬಗ್ಗೆ ಯಾರಿಗೂ ಹೇಳಬಾರದೆಂದು ಅವರು ನನ್ನಗೆ ಬೆದರಿಕೆ ಹಾಕಿದರು. ನನ್ನ ಇಡೀ ದೇಹವು ನೋವಿನಿಂದ ಕೂಡಿದೆ” ಎಂದು ಶೋಭಾ ಮಜುಂದಾರ್ ಈ ಹಿಂದೆ ಎಎನ್‌ಐಗೆ ತಿಳಿಸಿದ್ದರು.

ದಾಳಿಯ ನಂತರ, ಸುವೇಂಡು ಅಧಿಕಾರಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಶೋಭಾ ಅವರ ನಿವಾಸಕ್ಕೆ ಭೇಟಿ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ನಾಲ್ಕು ದಿನಗಳ ಹಿಂದೆ ಮನೆಗೆ ಮರಳಿದ್ದರು.

ಅವರ ಸಾವಿನ ನಂತರ, ಡುಮ್ಡಾಮ್ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಅರ್ಚನಾ ಮಜುಂದಾರ್ ಅವರು ಈ ದಾಳಿಗೆ ಟಿಎಂಸಿ ಕಾರ್ಯಕರ್ತರನ್ನು ದೂಷಿಸಿದ್ದಾರೆ.

ಆಕೆಯ ಮಗ ಗೋಪಾಲ್ ಮಜುಂದಾರ್‌ ಕೂಡ ಟಿಎಂಸಿ ವಿರುದ್ಧ ಆರೋಪಿಸಿದ್ದು, ಕಳೆದ ತಿಂಗಳು ಆಕೆಯ ಮೇಲೆ ಹಲ್ಲೆ ಮಾಡದಿದ್ದರೆ ಅವರು ಇನ್ನೂ ಕೆಲವು ದಿನ ಬದುಕಬಹುದಿತ್ತು ಎಂದು ಹೇಳಿದ್ದಾರೆ.

ಈ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ತಾವು ಈಗ ತಾಯಿಯನ್ನು ಕಳೆದುಕೊಂಡ ನಂತರ ತಾನು ಸಂಪೂರ್ಣವಾಗಿ ಒಂಟಿಯಾಗಿದ್ದೇನೆ ಎಂದು ಗೋಪಾಲ್‌ ಹೇಳಿದ್ದಾರೆ.

ರಾಜ್ಯವು ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಸಿದ್ದವಾಗುತ್ತಿದೆ.

ಇದನ್ನೂ ಓದಿ: ಬಂಗಾಳ: 2009ರ CPM ನಾಯಕನ ಹತ್ಯೆ ಪ್ರಕರಣ; TMC ಮುಖಂಡ ಛತ್ರಧರ್‌ ಮಹತೊ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights