ಕೆಂಪುಕೋಟೆ ಹಿಂಸಾಚಾರ: ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ BJP ಬೆಂಬಲಿಗ, ನಟ ದೀಪ್ ಸಿಧು ಮತ್ತೆ ಬಂಧನ!
ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆ ಹಿಂಸಾಚಾರದ ಆರೋಪಿ, BJP ಬೆಂಬಲಿಗ, ನಟ ದೀಪ್ ಸಿಧು ಅವರನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಶನಿವಾರ ಬಂಧಿಸಿದೆ.
ಜನವರಿ 26ರಂದು ಪ್ರತಿಭಟನಾ ನಿರತ ರೈತರು ನಡೆಸಿದ ಗಣರಾಜ್ಯೋತ್ಸವ ಟ್ರಾಕ್ಟರ್ ಪರೇಡ್ ವೇಳೆ, ರೈತರ ಗುಂಪೊಂದನ್ನು ದಾರಿ ತಪ್ಪಿಸಿ ದೆಹಲಿಗೆ ಕರೆದೊಯ್ದು ಕೆಂಪುಕೋಟೆಯಲ್ಲಿ ಹಿಂಸಾಚಾರ ನಡೆಯುವುದಕ್ಕೆ ಕಾರಣರಾದ ಆರೋಪದಲ್ಲಿ ದೀಪ್ ಸಿಧು ಅವರನ್ನು ಫೆಬ್ರವರಿ 09ರಂದು ಬಂಧಿಸಲಾಗಿತ್ತು.
ದೆಹಲಿ ನ್ಯಾಯಾಲಯವು ಇಬ್ಬರ ವ್ಯಕ್ತಿಗಳಿಂದ ತಲಾ 30,000 ರೂಗಳ ವೈಯಕ್ತಿಕ ಬಾಂಡ್‌ಅನ್ನು ಒತ್ತೆ ಇರಿಸಿಕೊಂಡು ಆತನಿಗೆ ಶನಿವಾರ ಜಾಮೀನು ನೀಡಿತ್ತು.
ಜಾಮೀನು ಪಡೆದು ಹೊರಬಂದ ದೀಪ್ ಸಿಧು ಅವರನ್ನು ಕೆಲವೇ ಗಂಟೆಗಳಲ್ಲಿ ದೆಹಲಿಯ ಅಪರಾಧ ವಿಭಾಗದ ಪೊಲೀಸರು ಮತ್ತೆ ಬಂಧಿಸಿದ್ದಾರೆ.
Crime Branch of Delhi Police arrests Deep Sidhu, an accused in the 26th January violence case.
He was granted bail by a Delhi Court earlier today.
(File photo) pic.twitter.com/C1RFIaANX8
— ANI (@ANI) April 17, 2021
ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವದ ದಿನ ದೆಹಲಿ ಗಡಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸಿದ್ದರು. ಈ ವೇಳೆ, ರೈತರ ಒಂದು ಗುಂಪನ್ನು ಮುನ್ನಡೆಸಿಕೊಂಡು ಹೋಗಿದ್ದ ದೀಪ್ ಸಿಧು ರೈತರನ್ನು ಕೆಂಪುಕೋಟೆಯತ್ತ ನುಗ್ಗುವಂತೆ ಪ್ರೇರೇಪಿಸಿದ್ದರು. ಅಲ್ಲದೆ, ಕೆಂಪುಕೋಟೆಯಲ್ಲಿ ತ್ರಿರಂಗ ಧ್ವಜದ ಮುಂದೆ ರೈತ ಹೋರಾಟದ ಧ್ವಜವನ್ನು ಹಾರಿಸಲು ಉತ್ತೇಜನ ನೀಡಿದ್ದರು.
ರೈತ ಹೋರಾಟವನ್ನು ಮಣಿಸಲು ರೈತ ವಿರೋಧಿಗಳು ಹಾಗೂ ಬಿಜೆಪಿಗರ ಜೊತೆಗೂಡಿ ದೀಪ್ ಸಿಧು ಈ ಘಟನೆ ನಡೆಸಿದ್ದಾರೆ ಎಂದು ರೈತ ಹೋರಾಟದ ನಾಯಕರು ಆರೋಪಿಸಿದ್ದರು.
ಜನವರಿ 26 ರಂದು ನಡೆದ ಘಟನೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ದೆಹಲಿ ಹಿಂಸಾಚಾರದ ರುವಾರಿ ದೀಪ್ ಸಿಧು: ಯಾರು ಈತ – ಈತನ ಹಿನ್ನೆಲೆ ಏನು?

