ಅಸ್ಸಾಂ: BJP ಆಪರೇಷನ್ ಕಮಲ‌ – ಕೊರೊನಾ ಭಯ: ರಾಜಸ್ಥಾನದಲ್ಲಿದ್ದ ಎಐಯುಡಿಎಫ್ ಅಭ್ಯರ್ಥಿಗಳು ಅಸ್ಸಾಂಗೆ ವಾಪಸ್‌!

ಅಸ್ಸಾಂ ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಅಧಿಕಾರಕ್ಕಾಗಿ ಬಿಜೆಪಿ ಆಪರೇಷನ್‌ ಕಮಲ ಮಾಡುವ ಭಯದಿಂದ ಕಳೆದ ವಾರ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ 18 ಅಭ್ಯರ್ಥಿಗಳನ್ನು ರಾಜಸ್ಥಾನಕ್ಕೆ ಕಳಿಸಲಾಗಿತ್ತು. ಆದರೆ, ದೇಶದಲ್ಲಿ ಕೊರೊನಾ ಸೋಂಕಿನ ಉಲ್ಬಣದಿಂದಾಗಿ ಅಷ್ಟೂ ಅಭ್ಯರ್ಥಿಗಳು ಶುಕ್ರವಾರ ಅಸ್ಸಾಂಗೆ ಮರಳಿದ್ದಾರೆ.

ಅಸ್ಸಾಂ ಚುನಾವಣೆಯಲ್ಲಿ ಎಐಯುಡಿಎಫ್ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ನಂತರ ಬಿಜೆಪಿ ತಮ್ಮ ಅಭ್ಯರ್ಥಿಗಳು ಬೇಟೆಯಾಡಬಹುದು ಎಂಬ ಭಯದಿಂದ ಎಐಯುಡಿಎಫ್ ಪಕ್ಷದ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು.

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ಏರುತ್ತಿರುವುದರಿಂದಾಗಿ ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ಲಾಕ್‌ಡೌನ್‌ ಜಾರಿಯಾಗಬಹುದಾದ ಸಾಧ್ಯತೆ ಇದೆ ಎಂದು ಹೆದರಿರುವ ಅಭ್ಯರ್ಥಿಗಳು, ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಜ್ಯಕ್ಕೆ ಮರಳಿದಿದ್ದಾರೆ.

ರಾಜಸ್ಥಾನಕ್ಕೆ ತೆರಳಿದ್ದ 18 ಅಭ್ಯರ್ಥಿಗಳಲ್ಲಿ ಒಬ್ಬರು ಈ ಹಿಂದೆಯೇ ಹಿಂದಿರುಗಿದ್ದರು. ಇದೀಗ ಉಳಿದ 17 ಅಭ್ಯರ್ಥಿಗಳೂ ಅಸ್ಸಾಂಗೆ ಮರಳಿದ್ದಾರೆ.

ಎಐಯುಡಿಎಫ್ ಕಳೆದ ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಎಐಯುಡಿಎಫ್ ಮತ್ತು ಕಾಂಗ್ರೆಸ್ ಜೊತೆಗೆ “ಮಹಾ ಮೈತ್ರಿಕೂಟದ” ಮತ್ತೊಂದು ಪಕ್ಷವಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್‌ನ ಕೆಲವು ಅಭ್ಯರ್ಥಿಗಳು ಸಹ ರಾಜ್ಯದ ಹೊರಗಿದ್ದಾರೆ ಎಂದು ಹೇಳಲಾಗಿದೆ.

ಚುನಾವಣಾ ಸನಿಹವಿದ್ದಾಗ ಆಡಳಿತಾರೂಢ ಬಿಜೆಪಿ ತಮಗೆ ಪ್ರಬಲ ಪ್ರತಿಪಕ್ಷವಿಲ್ಲ ಎಂದು ಭಾವಿಸಿತ್ತು. ಅದರೆ, ಚುನಾವಣೆ ಸಮೀಪಿಸಿದಂತೆ ಕಾಂಗ್ರೆಸ್‌ನ ಮೈತ್ರಿಕೂಟ ತನ್ನ ಪ್ರಬಲತೆಯನ್ನು ಪ್ರದರ್ಶಿಸಿದ್ದು, 100+ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಭಾವಿಸಿದ್ದ ಬಿಜೆಪಿ 80 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದೆ. ಅಂತೆಯೇ, ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವೂ 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಆಪರೇಷನ್‌ ಕಮಲವನ್ನು ನಡೆಸುವ ಸಾಧ್ಯತೆಯನ್ನು ಊಹಿಸಿರುವ ಮೈತ್ರಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ರಾಜಸ್ಥಾನಕ್ಕೆ ಶಿಫ್ಟ್‌ ಮಾಡಿದ್ದವು.

ಏಪ್ರಿಲ್‌ 07ರಂದು ಚುನಾವಣೆ ಮುಗಿದಿದ್ದು, ಮೇ 02ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಅಸ್ಸಾಂ ಫಲಿತಾಂಶಕ್ಕೂ ಮುನ್ನವೇ ಆಪರೇಷನ್ ಕಮಲ?; 20 ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗಳು ರೆಸಾರ್ಟ್‌ಗೆ ಶಿಫ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights