ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿ ಬಗ್ಗೆ ಫೇಕ್ ನ್ಯೂಸ್; ಕುಟುಂಬದಿಂದ ಸ್ಪಷ್ಟನೆ!
ಲೋಕಸಭಾ ಮಾಜಿ ಸ್ವೀಕರ್ ಹಾಗೂ ಬಿಜೆಪಿ ಹಿರಿಯ ಮಹಿಳಾ ನಾಯಕಿ ಸುಮಿತ್ರಾ ಮಹಾಜನ್ ಅವರು ಸಾವನ್ನಪ್ಪಿದ್ದಾರೆ ಎಂದು ಗುರುವಾರ ರಾತ್ರಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿಯನ್ನು ಹರಿಬಿಟ್ಟಿದ್ದರು. ಅದೇ ಮಾಹಿತಿಯನ್ನು ದೃಢಪಡಿಸಿಕೊಳ್ಳದೇ ಕೆಲವು ಮಾಧ್ಯಮಗಳು ಸುಳ್ಳುಸುದ್ದಿಯನ್ನೇ ವರದಿ ಮಾಡಿದ್ದವು. ಮಾಧ್ಯಮಗಳ ವರದಿಯನ್ನು ಗಮನಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ, ಸುಮಿತ್ರಾ ಮಹಾಜನ್ ಅವರ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ನಂತರ ಮಹಾಜನ್ ಅವರ ಸಾವಿನ ಸುದ್ದಿ ಸುಳ್ಳು ಎಂದು ತಿಳಿದ ಬಳಿಕ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಗುರುವಾರ ರಾತ್ರಿ 11 ಗಂಟೆಯ ಸುಮಾರಿನಲ್ಲಿ ಈ ನಕಲಿ ಸುದ್ದಿ ವೈರಲ್ ಆಗಿತ್ತು. ಕೆಲ ಮಾಧ್ಯಮಗಳೂ ಕೂಡ ಈ ಸುದ್ದಿ ಬಿತ್ತರಿಸಿದವು. ಸುದ್ದಿಗಳು ವೈರಲ್ ಆಗುತ್ತಿದ್ದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀವ ಅವರು ಸುಮಿತ್ರಾ ಮಹಾಜನ್ ಆರೋಗ್ಯವಾಗಿದ್ದಾರೆ. ಅವರ ಸಾವಿನ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ. ಬಳಿಕ ಶಶಿ ತರೂರ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
“ಈ ಟ್ವೀಟ್ ಡಿಲೀಟ್ ಮಾಡುತ್ತಿರುವುದು ಸಮಾಧಾನ ತಂದಿದೆ. ಮಹಾಜನ್ ಅವರ ಸಾವಿನ ಸುದ್ದಿಯು ನಂಬಲರ್ಹ ಮೂಲದಿಂದ ಬಂದಿದ್ದು ಎಂಬು ನಂಬಿ ನಾನು ಆ ಟ್ವೀಟ್ ಮಾಡಿದ್ದೆ…. ಯಾರಾದರೂ ಇಂಥ ಸುದ್ದಿಯನ್ನೂ ಸೃಷ್ಟಿ ಮಾಡಿ ಹರಿ ಬಿಡುತ್ತಾರೆ ಎಂಬುದು ಆಘಾತಕಾರಿ ಸಂಗತಿ. ಸುಮಿತ್ರಾ ಮಹಾಜನ್ ಸಾವಿನ ಸುದ್ದಿ ನಕಲಿ ಎಂದು ಮನವರಿಕೆ ಮಾಡಿಕೊಟ್ಟವರಿಗೆ ಧನ್ಯವಾದ” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಸುಮಿತ್ರಾ ಮಹಾಜನ್ ಅವರಿಗೆ ನಿನ್ನೆ ಜ್ವರ ಕಾಣಿಸಿಕೊಂಡು ಮಧ್ಯಪ್ರದೇಶದ ಇಂದೋರ್ನಲ್ಲಿರುವ ಬಾಂಬೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಈಗ ಆರಾಮವಾಗಿದ್ದಾರೆ ಎಂದು ಅಲ್ಲಿನ ವೈದ್ಯರೂ ಕೂಡ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಅವರ ಪುತ್ರ ಮಂದರ್ ಗುರುವಾರ ರಾತ್ರಿ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ತಮ್ಮ ತಾಯಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ, ವಿಡಿಯೋದಲ್ಲಿ ಮಾತನಾಡಿರುವ ಮಹಾಜನ್, ನಾನು ಏನು ಹೇಳಬೇಕು? ಈ ಜನರು ಯಾವುದೋ ದೃಢೀಕರಣವಿಲ್ಲದೆ ಸುದ್ದಿಗಳನ್ನು ಹಂಚಿಕೊಳ್ಳುತ್ತಾರೆ. ಇಂಧೋರ್ ಜಿಲ್ಲಾಡಳಿತದೊಂದಿಗೆ ಇಂತಹ ಸುದ್ದಿಗಳನ್ನು ಖಚಿತಪಡಿಸಿಕೊಳ್ಳಬೇಕಲ್ಲವೇ” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸುಮಿತ್ರಾ ಮಹಾಜನ್ ಬಿಜೆಪಿಯ ಅತ್ಯಂತ ಹಿರಿಯ ನಾಯಕಿ ಆಗಿದ್ದಾರೆ. ಬರೋಬ್ಬರಿ 30 ವರ್ಷಗಳ ಕಾಲ ಅವರು (ಎಂಟು ಬಾರಿ) ಸಂಸತ್ತಿನಲ್ಲಿ ಇಂದೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅತಿ ಹೆಚ್ಚು ಅವಧಿ ಸಂಸದೆಯಾದ ದಾಖಲೆ ಅವರದ್ದಾಗಿದೆ. ಹಿಂದಿನ ಮೋದಿ ಸರ್ಕಾರದಲ್ಲಿ 2014 ರಿಂದ 2019 ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು.
ಇದನ್ನೂ ಓದಿ: CPI-M ನಾಯಕ ಯೆಚೂರಿ ಮಗನ ಸಾವನ್ನು ವಿಕೃತವಾಗಿ ಸಂಭ್ರಮಿಸಿದ ಬಿಹಾರ BJP ಉಪಾಧ್ಯಕ್ಷ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!

