ಸೈಕಲ್ ರಿಕ್ಷಾ ತುಳಿಯುತ್ತಿದ್ದ ಬಡ ದಲಿತ; ಈಗ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ!
ಈ ಬಾರಿಯ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ತನ್ನ ಪಕ್ಷದಿಂದ ಆಯ್ಕೆ ಮಾಡಿ ನಿಲ್ಲಿಸಿದ ಬಡ ದಲಿತ ಲೇಖಕನೊಬ್ಬ ಆಯ್ಕೆಯಾದ ವಿಷಯ ಯಾರ ಗಮನವನ್ನೂ ಸೆಳೆಯಲಿಲ್ಲ.
ಮನೊರಂಜನ್ ಬ್ಯಾಪಾರಿ ಎಂಬ ಅನಕ್ಷರಸ್ಥ ದಲಿತ ಕೂಲಿಗಾರ ಎಪ್ಪತ್ತರ ದಶಕದಲ್ಲಿ ಬಂಗ್ಲಾದ ಹಳ್ಳಿಯಲ್ಲಿ ಜನಿಸಿ ಕೂಲಿಗಾಗಿ ಕೊಲ್ಕತ್ತಾ ನಗರಕ್ಕೆ ಬಂದ. ನಂತರದ ದಿನಗಳಲ್ಲಿ ಮಾವೋವಾದಿ ಎಂಬ ಆರೋಪದ ಮೇರೆಗೆ ಮೂರು ವರ್ಷ ಜೈಲಿಗೆ ತಳ್ಳಲ್ಪಟ್ಟ. ಅಲ್ಲಿ ಬಂಗಾಳಿ ಭಾಷೆಯಲ್ಲಿ ಬರೆಯುವುದು, ಓದುವುದನ್ನು ಕಲಿತ.
ಜೈಲಿನಿಂದ ಬಿಡುಗಡೆಯಾದ ನಂತರ ಸೈಕಲ್ ರಿಕ್ಷಾ ತುಳಿಯುತ್ತಿದ್ದ ಮನೊರಂಜನ್ ಬ್ಯಾಪಾರಿಗೆ ಒಮ್ಮೆ ಖ್ಯಾತ ಕಾದಂಬರಿಗಾರ್ತಿ ಮಹಾಶ್ವೇತಾ ದೇವಿ ಸಿಕ್ಕ ಫಲವಾಗಿ ಬರಹಗಾರನಾಗಿ ರೂಪುಗೊಂಡ.
ಕೊಲ್ಕತ್ತಾ ನಗರದಲ್ಲಿ ಇರುವ ಜಾದವ್ ಪುರ್. ವಿಶ್ವವಿದ್ಯಾಲಯ ದ ಬಳಿ ಸೈಕಲ್ ರಿಕ್ಷಾ ನಿಲ್ಲಿಸಿಕೊಂಡು ಮಹಾಶ್ವೇತಾ ದೇವಿಯವರ ಕಾದಂಬರಿ ಓದುತ್ತಾ ಕುಳಿತಿದ್ದ ಮನೊರಂಜನ್ ರಿಕ್ಷಾವನ್ನು ಅವರು ಹತ್ತಿದರು. ಆದರೆ, ಆತನಿಗೆ ನಾನು ಓದುತ್ತಿರುವ ಕಾದಂಬರಿಯ ಲೇಖಕಿ ಎಂದು ಗೊತ್ತಿಲ್ಲ. ಕಾದಂಬರಿಯ ಒಂದು ಶಬ್ದ ಅವನಿಗೆ ಅರ್ಥವಾಗಿರಲಿಲ್ಲ. ಅವರನ್ನು ಪ್ರೊಫೆಸರ್ ಎಂದು ಊಹಿಸಿದ ಮನೋರಂಜನ್ ಅವರಿಂದ ಅರ್ಥ ಕೇಳಿ ತಿಳಿದುಕೊಂಡ.
ಬಸ್ ನಿಲ್ದಾಣ ಬಂದ ನಂತರ ರಿಕ್ಷಾದಿಂದ ಇಳಿಯುತ್ತಾ ಏನು ಓದುತ್ತಿದ್ದಿಯಾ ಎಂದು ಮಹಾ ಶ್ವೇತಾ ದೇವಿ ಪ್ರಶ್ನಿಸಿದಾಗ, ಇಂತಹವರ ಕಾದಂಬರಿ ಓದುತ್ತಿದ್ದೇನೆ ಎಂದು ಅವರಿಗೆ ತೋರಿಸಿದ. ಸಂತೋಷಗೊಂಡ ಅವರು ಆ ಕಾದಂಬರಿಗಾರ್ತಿ ನಾನೇ ಎಂದು ಪರಿಚಯಿಸಿಕೊಂಡರು. ಕೊತೆಗೆ ರಿಕ್ಷಾ ಕೂಲಿಯ ಜೊತೆಗೆ ಒಂದಷ್ಟು ಇನಾಮು ನೀಡಿದರು.
ನನ್ನ ಪತ್ರಿಕೆಗೆ ಏನಾದರೂ ಬರಿ ಎಂದು ಅವರು ಕೇಳಿಕೊಂಡಾಗ ತಾನು ಅನಕ್ರಸ್ಥ ದಲಿತನಾಗಿ ಜೈಲಿನಲ್ಲಿ ಅಕ್ಷರ ಕಲಿತ ವಿಷಯವನ್ನು ಮನೊರಂಜನ್ ಬ್ಯಾಪಾರಿ ಯಾವುದೇ ಮುಚ್ಚುಮರೆಯಿಲ್ಲದೆ ತಿಳಿಸಿದ.
ಮಹಾಶ್ವೇತಾ ದೇವಿಯವರು ನಿನ್ನ ಬದುಕಿನ ಅನುಭವಗಳನ್ನು ನನ್ನ ಪತ್ರಿಕೆಗೆ ಬರೆ. ನಾನು ಪ್ರಕಟಿಸುತ್ತೇನೆ ಎಂದು ಹೇಳಿ ವಿಳಾಸ ನೀಡಿ ಆತನನ್ನು ಉತ್ತೇಜಿಸಿದರು. ನಂತರ ಆತನ ಬರಹಗಳು ಅವರ ಪತ್ರಿಕೆಯಲ್ಲಿ ಪ್ರಕಟವಾದವು. ಅಷ್ಟು ಮಾತ್ರವಲ್ಲದೆ ಮೀನಾಕ್ಷಿ ಮುಖರ್ಜಿ ಎಂಬುವರು ಅವುಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ಪ್ರಬಂಧ ಗಳ ಹೆಸರಿನಲ್ಲಿ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯಲ್ಲಿ ಪ್ರಕಟಿಸಿದರು.
ಈ ನಡುವೆ ಮನೊರಂಜನ್ ಬ್ಯಾಪಾರಿ ರಿಕ್ಷಾ ತುಳಿಯುವುದನ್ನು ಬಿಟ್ಟು ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಅಡುಗೆ ಭಟ್ಟನ ಸಹಾಯಕ ನಾಗಿ ಸೇರಿ, ಇಪ್ಪತ್ತು ನಾಲ್ಕು ವರ್ಷ ಸೇವೆ ಸಲ್ಲಿಸಿ ಐದು ವರ್ಷದ ಹಿಂದೆ ನಿವೃತ್ತನಾದನು.
ಕೊಲ್ಕತ್ತಾ ನಗರದ ಹೊರ ಬಲಯದ ಹೂಗ್ಲಿ ಲೋಕಸಭಾ ಕ್ಷೇತ್ರದ ಬಲ್ಲಾಘರ್ ಕೊಳೆಗೇರಿಯಲ್ಲಿ ಒಂದು ದೊಡ್ಡ ಕೊಳಚೆ ನಾಲುವೆ ದಡದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ಮನೊರಂಜನ್ ಬ್ಯಾಪಾರಿ ಬಂಗಾಳಿ ಭಾಷೆಯಲ್ಲಿ 2017 ರಲ್ಲಿ, ನನ್ನ ಚಾಂಡಾಲ ಬದುಕು, ಎಂಬ ಆತ್ಮಕಥೆ ಬರೆದನು. ಅದು ಇಂಗ್ಲೀಷ್ ಭಾಷೆಗೆ ಅನುವಾದಗೊಂಡು, 2020 ರಲ್ಲಿ ಹಿಂದೂ ಪತ್ರಿಕೆಯ ಪ್ರತಿಷ್ಟಿತ ಲಿಟರೇಚರ್ ಪ್ರಶಸ್ತಿ ಪಡೆಯಿತು.
ಕಳೆದ ವರ್ಷ ಈ ಆತ್ಮಕಥೆ ತರಿಸಿಕೊಂಡು ಓದಿದ ನಾನು, ಕನ್ನಡಕ್ಕೆ ಅನುವಾದಿಸಲು ಸಿದ್ಧನಾಗಿ, ಮನೊರಂಜನ್ ಬ್ಯಾಪಾರಿ ಗೆ ತೀವ್ರ ಪರಿಚಿತವಾಗಿದ್ದ ಪ್ರೊಫೆಸರ್ ದಂಪತಿಯನ್ನು ದೆಹಲಿಯ ಪತ್ರಕರ್ತಡಿ.ಉಮಾಪತಿಯವರ ಮೂಲಕ ಸಂಪರ್ಕಿಸಿ ಮಾತನಾಡಿದ್ದೆ. ಕೊಲ್ಕತ್ತಾ ನಗರಕ್ಕೆ ಹೋಗಿ ಮನೊರಂಜನ್ ಬಳಿ ಒಂದು ವಾರ ಕುಳಿತು ಮಾತನಾಡಬೇಕೆಂದು ನಂತರ ಅನುವಾದಿಸಬೇಕೆಂದು ಯೋಜನೆ ಹಾಕಿಕೊಂಡಿದ್ದೆ. ಅಷ್ಟರಲ್ಲಿ ವಕ್ಕರಿಸಿದ ಕೋವಿಡ್ ಮತ್ತು ಅನಾರೋಗ್ಯದಿಂದ ಕೈ ಬಿಟ್ಟೆ.
ನನಗೆ ಮಮತಾ ಬಗ್ಗೆ ಗೌರವ ಹುಟ್ಟಲು ಇದೂ ಒಂದು ಕಾರಣವಾಗಿತ್ತು. ಬಲ್ಲಾಘರ್ ಎನ್ನುವ ಮೀಸಲು ಕ್ಷೇತ್ರಕ್ಕೆ ಮನೊರಂಜನ್ ಬ್ಯಾಪಾರಿಯಂತಹ ಒಬ್ಬ ಬಡ ದಲಿತನನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದ ಆಕೆಯ ಆತ್ಮಶಕ್ತಿಯನ್ನು ನಾವು ಗೌರವಿಸಲೇಬೇಕು. ಇಂತಹ ಸಂಗತಿಯನ್ನು ನಾವು ಇಂದಿನ ಕುಲಗೆಟ್ಟ ರಾಜಕಾರಣದಲ್ಲಿ ಕಾಣಲು ಸಾಧ್ಯವೆ?
ಮನೊರಂಜನ್ ಬ್ಯಾಪಾರಿ ಈಗ ತಾನು ವಾಸಿಸುತ್ತಿರುವ ಅದೇ ಗುಡಿಸಲಿನ್ನು ಶಾಸಕರ ಕಚೇರಿ ಮಾಡಿಕೊಂಡಿದ್ದಾನೆ. ಇದು ನಿಜವಾದ ಪ್ರಜಾಪ್ರಭುತ್ವ.
~ ಜಗದೀಶ್ ಕೊಪ್ಪ
ಇದನ್ನೂ ಓದಿ: ದೋಣಿ – ಹಡಗು ನಡುವೆ ಅಪಘಾತ: 25 ಜನರ ದಾರುಣ ಸಾವು!

